ಮಡಿಕೇರಿ: ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಪೊನ್ನಂಪೇಟೆ ತಾಲೂಕಿನ ಬೇಳೂರು ಗ್ರಾಮದಲ್ಲಿ ನಡೆದಿದೆ.
ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ 20 ವರ್ಷದ ಅನುಪಮಾ ಮೃತ ದುರ್ದೈವಿಯಾಗಿದ್ದು, ನಿತೇಶ್ ಎಂಬಾತನನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದರು. ಯುವತಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಆದರೆ ಮೃತರ ಪೋಷಕರು, ಮಗಳ ಸಾವಿಗೆ ಗಂಡನ ಮನೆಯವರೇ ಕಾರಣ ಎಂದು ಆರೋಪ ಮಾಡಿದ್ದಾರೆ. ಮಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳದೇ ದಿನನಿತ್ಯ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಯುವತಿಯ ಪೋಷಕರು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನುಪಮಾ ಏಪ್ರಿಲ್ 27 ರಂದು ಮಧ್ಯಾಹ್ನ 12.30 ಗಂಟೆಗೆ ಕೊಟ್ಟಿಗೇರಿ ನಿತೇಶ್ ಸಂಬಂಧಿ ದಿನೇಶ್ ಅವರ ಮನೆಗೆ ಹೋದ ಸಂದರ್ಭದಲ್ಲಿ ನಿತ್ರಾಣಗೊಂಡಿದ್ದಾಳೆ. ಈ ಹಿನ್ನೆಲೆ ಅವರು ಕೂಡಲೇ ಬಾಳಲೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅನುಪಮಾ ಮೃತಪಟ್ಟಿದ್ದಳು ಎನ್ನಲಾಗಿದೆ.
ಅನುಪಮಾ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ನಾವು ಹಾಗೂ ಕುಟುಂಬ ಸದಸ್ಯರು ಆಕೆಯನ್ನು ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಿಸಿದ್ದೆವು. ಆದರೆ ಅದು ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ಗಂಡನ ಮನೆಯರು ಹೇಳುತ್ತಿದ್ದಾರೆ.
ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.