ನವದೆಹಲಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಶುಕ್ರವಾರ ಸೂಚಿಸಿದೆ.
ವಾರ್ಡ್ ಮರು ವಿಂಗಡಣೆ ಕಾರ್ಯ ಜಾರಿಯಲ್ಲಿದೆ. ಈ ಕುರಿತ ಪ್ರಕ್ರಿಯೆಯು 8 ವಾರಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ವಾರ್ಡ್ ಗಳ ಮರು ವಿಂಗಡಣೆ ಹಾಗೂ ಒಬಿಸಿ ಮೀಸಲಾತಿ ಅಂತಿಮಗೊಳಿಸುವ ಸಂಬಂಧದ ಪ್ರಕ್ರಿಯೆ ಜಾರಿಯಲ್ಲಿದೆ. ಎಂಟು ವಾರಗಳೊಳಗೆ ಈ ಕುರಿತ ಆದೇಶ ಪ್ರಕಟವಾಗಲಿದೆ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ದ್ವಿಸದಸ್ಯ ಪೀಠದೆದುರು ರಾಜ್ಯ ಸರ್ಕಾರದ ಪರ ವಕೀಲರು ತಿಳಿಸಿದರು.
198 ವಾರ್ಡ್ಗಳನ್ನು ಹೊಂದಿರುವ ಬಿಬಿಎಂಪಿಯ ವಾರ್ಡ್ ಗಳ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡ ಪರಿಣಾಮ ಚುನಾವಣೆ ವಿಳಂಬವಾಗಿತ್ತು. ಈ ನಡುವೆ ಕರ್ನಾಟಕ ನಗರ ಪಾಲಿಕೆಯ ಮೂರನೇ ತಿದ್ದುಪಡಿ ಕಾಯಿದೆ (2020) ಅನುಸಾರ 243 ವಾರ್ಡ್ಗಳಿಗೆ ಬದಲಾಗಿ 2020ರ ಸೆ.23ರಂದು ಹೊರಡಿಸಿರುವ ಅಧಿಸೂಚನೆಯಂತೆ 198 ವಾರ್ಡ್ಗಳಿಗೆ ಆರು ವಾರಗಳ ಒಳಗಾಗಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ 2020ರ ಡಿಸೆಂಬರ್ 4ರಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.
ನಂತರ ರಾಜ್ಯ ವಿಧಾನಸಭೆಯು ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ 243 ವಾರ್ಡ್ಗಳಿಗೆ ಚುನಾವಣೆ ನಡೆಸಬೇಕು ಎಂಬ ನಿರ್ಣಯ ಅಂಗೀಕರಿಸಿತ್ತು. ಅಲ್ಲದೇ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿಯನ್ನು ಸರ್ಕಾರ ಸಲ್ಲಿಸಿತ್ತು.
ಇದೀಗ ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದು, ಬಿಬಿಎಂಪಿ ಚುನಾವಣಾ ಪ್ರಕ್ರಿಯೆಯನ್ನು ಎಂಟು ವಾರದೊಳಗಾಗಿ ನಡೆಸುವಂತೆ ತಿಳಿಸಿದೆ.