ಐಐಟಿ ಬಾಂಬೆಯ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಜಾತಿಪೀಡಕ ಸಮಾಜದ ಇನ್ನೊಂದು ಸಾಂಸ್ಥಿಕ ಕೊಲೆ; ಅಬ್ದುಲ್ ಮಜೀದ್ ಮೈಸೂರು

Prasthutha|

ಬೆಂಗಳೂರು: ದರ್ಶನ್ ಸೋಲಂಕಿ ಎಂಬ 18 ವರ್ಷದ ಐಐಟಿ ಬಾಂಬೆಯ ಮೊದಲ ವರ್ಷದ ದಲಿತ ವಿದ್ಯಾರ್ಥಿ ಕಾಲೇಜಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಜಾತಿ ಪೀಡಕ ಸಮಾಜದ ಇನ್ನೊಂದು ಸಾಂಸ್ಥಿಕ ಕೊಲೆಯಾಗಿರುವ ಸಾಧ್ಯತೆ ಇದೆ. ಇದರ ಬಗ್ಗೆ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌’ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಆಗ್ರಹಿಸಿದ್ದಾರೆ.

- Advertisement -

ಶತಮಾನಗಳಿಂದ ದೇಶವನ್ನು ಕಾಡುತ್ತಾ ಬಂದಿರುವ ಜಾತಿಯೆಂಬ ಅಮಾನವೀಯ ಪದ್ಧತಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇನ್ನೂ ದಷ್ಟಪುಷ್ಟವಾಗಿ ದಿನನಿತ್ಯ ಜನರ ಜೀವಕ್ಕೆ ಕುತ್ತಾಗುತ್ತಿರುವುದು ದುರಂತವೇ ಸರಿ. ಪ್ರತಿಷ್ಠಿತ ಸಂಸ್ಥೆಗಳಲ್ಲಿಯೂ ಕೂಡ ಜಾತಿ ನಿಂದನೆ, ಜಾತಿಯ ಕಾರಣಕ್ಕೆ ಶೋಷಣೆ ನಡೆಯುತ್ತಲೇ ಬಂದಿರುವುದು ನಮಗೆಲ್ಲರಿಗೂ ಅವಮಾನದ ಸಂಗತಿ. ಹೈದರಾಬಾದಿನ ರೋಹಿತ್ ವೇಮುಲ ದುರಂತ ನಡೆದ ಸಂದರ್ಭದಲ್ಲಿ, ಇನ್ನಾದರೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿಯ ಹೆಸರಿನಲ್ಲಿ ಶೋಷಣೆ ನಿಲ್ಲಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅಂತಹ ಕ್ರೂರ ಜಾತಿ ವ್ಯವಸ್ಥೆಯನ್ನೇ ಬೆಂಬಲಿಸುವ, ಪ್ರತಿಪಾದಿಸುವ ಬಿಜೆಪಿಯಂತಹ ಮನುವಾದಿ ಸರ್ಕಾರಗಳು ಅಧಿಕಾರದಲ್ಲಿರುವುದರಿಂದ ಜಾತಿ ವ್ಯವಸ್ಥೆ ಎಂಬ ಪೀಡನೆಯಿಂದ ಶೋಷಿತ ಸಮುದಾಯಗಳು ಬಿಡುಗಡೆ ಹೊಂದುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಐಟಿ ಬಾಂಬೆಯ ಈ ಪ್ರಕರಣವನ್ನು ಶೈಕ್ಷಣಿಕ ಒತ್ತಡಕ್ಕೆ ಅಥವಾ ತನ್ನ ಕುಟುಂಬದಿಂದ ದೂರ ಇರುವ ದುಗುಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ರೀತಿಯಲ್ಲಿ ಬಿಂಬಿಸಿ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಆದರೆ ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಜಾತಿನಿಂದನೆಯ ಅಂಶಗಳಿವೆ ಎಂದು ಅಲ್ಲಿನ ವಿದ್ಯಾರ್ಥಿ ಸಂಘಟನೆಗಳೆ ಆರೋಪಿಸಿವೆ. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಸರ್ಕಾರ ಸಂವಿಧಾನಬದ್ಧವಾದ ತನ್ನ ಕರ್ತವ್ಯವನ್ನು ನಿಭಾಯಿಸುವ ಮೂಲಕ ನ್ಯಾಯ ಒದಗಿಸಿಕೊಡಬೇಕು ಎಂದು ಮಜೀದ್ ಈ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Join Whatsapp