ಮಂಗಳೂರು: ಮಂಗಳೂರು ನಗರದಲ್ಲಿ ಮೊದಲ ಸಾರ್ವಜನಿಕ ಸುರಂಗ ಪಾದಚಾರಿ ಮಾರ್ಗ ಸಿದ್ಧವಾಗಿದೆ. ತಾಲೂಕು ಕಚೇರಿ ಕಡೆಯಿಂದ ಪುರಭವನ ಹಾದು, ಮಾರುಕಟ್ಟೆಯತ್ತ ಹೋಗಲು ಸುರಂಗ ಪಾದಚಾರಿ ಮಾರ್ಗ ತಯಾರಾಗಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ.
ಮಂಗಳೂರಿನಲ್ಲಿ ಕೆಲವೆಡೆ ವಾಹನ ಮೇಲ್ಸೇತುವೆ ಇದ್ದರೂ ಜನ ದಾಟುವ ಮೇಲ್ಸೇತುವೆ ರೈಲು ನಿಲ್ದಾಣಗಳಲ್ಲಿ ಮಾತ್ರ ಇದೆ. ಇದೀಗ ಮೊದಲ ಬಾರಿಗೆ ನಗರದ ಹೃದಯ ಭಾಗದಲ್ಲಿ ಸುರಂಗ ಪಾದಚಾರಿ ಮಾರ್ಗ ನಿರ್ಮಾಣಗೊಂಡಿದೆ.
ನಗರಗಳು ದೊಡ್ಡದಾದಂತೆ ಜನರು ಜನನಿಬಿಡ ರಸ್ತೆಗಳನ್ನು ದಾಟಲು ಮೇಲು ಸೇತುವೆ, ಕೆಳ ಹಾದಿ ಇಲ್ಲವೇ ಸುರಂಗ ಮಾರ್ಗಗಳನ್ನು ರಚಿಸುತ್ತಾರೆ. ಅವುಗಳ ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಅದು ಬಳಕೆಯಾಗದೆ ಹೋಗುವುದಿದೆ.
ಬೆಂಗಳೂರು ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣ ಸಂಪರ್ಕದ ಸುರಂಗ ಮಾರ್ಗ, ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್ ಕಡೆಯಿಂದ ಬರುವ ಸುರಂಗ ಮಾರ್ಗ ಮತ್ತು ಮುಂಬೈ ಮೊದಲಾದ ನಗರಗಳ ಕೆಲವು ಕೆಳ ದಾರಿಗಳು ವ್ಯಾಪಾರಿಗಳಿಂದ ತುಂಬಿ ಹೋಗಿರುತ್ತವೆ. ಮೇಲು ದಾರಿಗಳಲ್ಲಿ ಕೂಡ ಅಲ್ಲಲ್ಲಿ ವ್ಯಾಪಾರಿಗಳು ಕಾಣಿಸುತ್ತಾರೆ. ಇಲ್ಲಿ ಅವರು ಹೆಚ್ಚಾಗಿ ಮೇಲೇರುವ ಮತ್ತು ಇಳಿಯುವ ಮೆಟ್ಟಿಲುಗಳನ್ನು ಆಯ್ಕೆ ಮಾಡಿಕೊಂಡು ಕೂತಿರುತ್ತಾರೆ.
ಹಾಗೆಯೇ ಕೆಲವು ಇಂಥ ದಾರಿಗಳು ಬಳಕೆಯಾಗದೆ, ಒಂದೆರಡು ದುರಂತಕ್ಕೆ ಕಾರಣವಾದುದೂ ಇದೆ.
ಉಡುಪಿಯ ನಗರ ಸಭೆ ಬಳಿ ಹಾಜಿ ಅಬ್ದುಲ್ಲಾ ಹೆರಿಗೆ ಆಸ್ಪತ್ರೆ ಎದುರು ಕಟ್ಟಿರುವ ಮೇಲು ಸೇತುವೆಯನ್ನು ಯಾರೂ ಬಳಸುವುದಿಲ್ಲ. ಅದನ್ನು ಸಾರ್ವಜನಿಕರು ಶೌಚ ಮಾಡುವ ಸ್ಥಳವಾಗಿಯೂ ಬಳಸುತ್ತಿದ್ದಾರೆ.
ಕೆಲವು ಸುರಂಗ ಮಾರ್ಗಗಳಲ್ಲೂ ಜನರು ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಹೆಚ್ಚಿನವಕ್ಕೆ ಕಾವಲುಗಾರರ ನೇಮಕ ಆಗಿದೆ. ಬೆಂಗಳೂರಿನ ಕೆಂಪೇಗೌಡ ವೃತ್ತದ ಮೇಲು ಸೇತುವೆಯನ್ನು ಜನ ಬಳಸುತ್ತಿರಲಿಲ್ಲ. ಕೊನೆಗೆ ಪೊಲೀಸರೇ ನಿಂತು ಮೇಲಿನಿಂದ ರಸ್ತೆ ದಾಟುವಂತೆ ಮಾಡಿದರು.
ದುರಂತ ಎಂದರೆ ಬೆಂಗಳೂರು ಶಿವಾಜಿ ನಗರ ಬಸ್ ನಿಲ್ದಾಣದ ಕೆಳ ಸುರಂಗ ಮಾರ್ಗ. ಇದನ್ನು ಯಾರೂ ಬಳಸುತ್ತಿರಲಿಲ್ಲ. ಇಬ್ಬರು ಕಿಡಿಗೇಡಿ ಕಳ್ಳರು ಅಲ್ಲಿ ಅಡಗಿಕೊಂಡು ಅಪರೂಪಕ್ಕೆ ಅಲ್ಲಿ ಬರುವವರನ್ನು ದರೋಡೆ ಮಾಡುತ್ತಿದ್ದರು. ಅದು ಬೆಳಕಿಗೆ ಬಂದ ಮೇಲೆ ಆ ಸುರಂಗ ಮಾರ್ಗವನ್ನು ಮುಚ್ಚಲಾಗಿದೆ.
ಇದೀಗ ಮಂಗಳೂರಿನಲ್ಲಿ ನಿರ್ಮಿಸಿರುವ ಸುರಂಗ ಪಾದಚಾರಿ ರಸ್ತೆಯನ್ನು ಪಾಲಿಕೆಯವರು ಸಮರ್ಪಕವಾಗಿ ನಿರ್ವಹಣೆ ಮಾಡಿ, ಜನರಿಗೆ ಉಪಯೋಗವಾಗುವಂತೆ ಮಾಡಲು ಈಗಲೇ ಯೋಜನೆ ರೂಪಿಸಬೇಕಾಗಿದೆ. ಉದ್ಘಾಟನೆಗೊಂಡ ಒಂದೆರಡು ತಿಂಗಳು ಉಪಯೋಗಿಸಿದ ಬಳಿಕ ನಿರ್ವಹಣೆ ಇಲ್ಲದೆ ನಾಯಿಗಳ ಆವಾಸಸ್ಥಾನವಾಗಿರುವ ಉದಾಹರಣೆ ನಮ್ಮ ಮುಂದಿದೆ. ಇಲ್ಲಿ ಹೀಗಾಗದಂತೆ ಮಂಗಳೂರು ಮಹಾನಗರ ಪಾಲಿಕೆ ಕ್ರಮವಹಿಸುವುದು ಅಗತ್ಯವಾಗಿದೆ.