ಎಸ್ ಡಿಪಿಐಯ ಕಾರ್ಯಕರ್ತರನ್ನು ಅಟ್ಟಾಡಿಸಲು ಬಂದವರು ಏನಾಗಿದ್ದಾರೆ ಎಂಬ ಸತ್ಯವನ್ನು ಅರಿತುಕೊಳ್ಳಿ
ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ ನಿನ್ನೆ ಮಂಗಳೂರಿನ ಕ್ಲಾಕ್ ಟವರ್ ಸಮೀಪ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಬಜರಂಗ ದಳದ ಪ್ರಾಂತ ಸಂಚಾಲಕ ಮುರಳೀಕೃಷ್ಣ ಹಂಸತಡ್ಕ ಎಸ್ ಡಿಪಿಐ ನಾಯಕರನ್ನು ಅಟ್ಟಾಡಿಸಿ ಹೊಡೆಯುತ್ತೇವೆ, ಅಡ್ಯಾರಿನಲ್ಲಿ ನಡೆದ ಸಮಾವೇಶದಲ್ಲಿ ನಾಯಿಗಳು ಬಾಲದ ಮೂಲಕ ಶರೀರ ಅಲ್ಲಾಡಿಸಿದ್ದಾರೆ ಎಂಬ ಅವಾಚ್ಯ ಶಬ್ದಗಳಿಂದ ಮಾತನಾಡಿದದು, ಇದು ಅವರು ಬೆಳೆದು ಬಂದ ಸಂಘದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ಸವಾಲು ಟೀಕಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುರಳೀಕೃಷ್ಣ ಎಂಬ ಗೂಂಡಾ ಸಂಸ್ಕೃತಿಯ ಬಾಡಿಗೆ ಭಾಷಣಗಾರ ಮೊದಲು ಎಸ್ ಡಿಪಿಐಯ ಇತಿಹಾಸ ಅರಿತುಕೊಳ್ಳಬೇಕು, ಎಸ್ ಡಿಪಿಐಯ ಕಾರ್ಯಕರ್ತರನ್ನು, ನಾಯಕರನ್ನು ಅಟ್ಟಾಡಿಸಲು ವೀರಾವೇಶದಿಂದ ಬಂದ ಹಲವರು ಏನಾಗಿದ್ದಾರೆ ಎಂಬ ಸತ್ಯವನ್ನು ಅರಿತುಕೊಂಡು ತನ್ನ ಹರಕು ನಾಲಗೆಯನ್ನು ಬಿಗಿ ಹಿಡಿದು ಮಾತನಾಡಬೇಕೆಂದು ಸುಹೈಲ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಗುಂಪು ಕಟ್ಟಿಕೊಂಡು ಅಸಹಾಯಕರ, ನಿರ್ಗತಿಗರ ಮೇಲೆ ಹಲ್ಲೆ ನಡೆಸಿ ಕೇಕೆ ಹಾಕುವ ನಿಮ್ಮ ಭಂಡತನವನ್ನು ಎಸ್ ಡಿಪಿಐ ಮೇಲೆ ಪ್ರಯೋಗಿಸಲು ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ. ಮೈಕಿನ ಮುಂದೆ ನಿಂತು ಚೇಲಾಗಳ ಚಪ್ಪಾಳೆ ಗಿಟ್ಟಿಸಿ, ಪುಕ್ಕಟೆ ಪ್ರಚಾರ ಗಳಿಸಲು ಅಟ್ಟಾಡಿಸುವ ಹೇಳಿಕೆ ನೀಡುವ ಬದಲು ಧೈರ್ಯವಿದ್ದರೆ ವೇದಿಕೆ ಸಿದ್ಧಗೊಳಿಸಿ ಎಂದು ಸುಹೈಲ್ ಖಾನ್ ಪ್ರಕಟಣೆಯಲ್ಲಿ ಸವಾಲು ಹಾಕಿದ್ದಾರೆ.
2002 ಗುಜರಾತ್ ಮಾಡೆಲ್ ಇಲ್ಲಿ ಮಾಡುತ್ತೇವೆ ಎಂದು ಬೊಬ್ಬೆ ಹಾಕುವ ಬಜರಂಗಿಗಳು ಅರ್ಥ ಮಾಡಿಕೊಳ್ಳಬೇಕಾದ ಸತ್ಯವೇನೆಂದರೆ, ನೀವು ಗುಜರಾತಿನಲ್ಲಿ ಅಮಾಯಕ ಮುಸ್ಲಿಮರ ನರಮೇಧ ನಡೆಸಿದ ಅಂದಿನ ಕಾಲ ಅದು ಎಸ್ ಡಿಪಿಐ ಇಲ್ಲದ ಕಾಲವಾಗಿತ್ತು. ಆದರೆ ಇಂದು ದೇಶದ ಅಷ್ಟ ದಿಕ್ಕುಗಳಲ್ಲೂ ಎಸ್ ಡಿಪಿಐ ಕಾರ್ಯಕರ್ತರಿದ್ದಾರೆ, ನಿಮ್ಮ ಹಿಂಸಾತ್ಮಕ ಕೃತ್ಯಗಳನ್ನು ಪ್ರತಿರೋಧಿಸಲು ಅವರು ಸನ್ನದ್ಧರಾಗಿದ್ದಾರೆ ಎಂಬುದು ಮೊದಲ ಅರ್ಥ ಮಾಡಿಕೊಂಡು ಮಾತನಾಡಬೇಕು. ನಿಮ್ಮ ಬಂದೂಕು ತರಬೇತಿ, ತ್ರಿಶೂಲ ದೀಕ್ಷೆಯಿಂದ ಮುಸ್ಲಿಂ ಸಮುದಾಯವನ್ನು ಭಯ ಪಡಿಸಬಹುದು ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಹಗಲು ಕನಸು ಮಾತ್ರ. ಬಂದೂಕು ಹಾಗೂ ತ್ರಿಶೂಲ ಹಿಡಿದ ಕೈಗಳನ್ನು ಕಟ್ಟಿಹಾಕಲು ಎಸ್ ಡಿಪಿಐ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಬಹಳ ಚೆನ್ನಾಗಿ ಗೊತ್ತಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.
ಕೋಮು ಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ಸಂಘಪರಿವಾರದ ನಾಯಕರು ಬಹಿರಂಗವಾಗಿ ಕೋಮು ಪ್ರಚೋದಿತ ಭಾಷಣಗಳನ್ನು ಮಾಡುವಾಗ ಪೊಲೀಸ್ ಇಲಾಖೆ ಯಾಕೆ ಮೌನವಾಗಿದೆ. ನಾಡಿನ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿದು ಇದರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಇತ್ತೀಚೆಗೆ ಕೆಲವು ಯುವಕರು ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಿಂದ ಘೋಷಣೆ ಕೂಗಿದರು ಎಂಬ ಕಾರಣದಿಂದ ಬೆಂಗಳೂರು ಹಾಗೂ ಮೈಸೂರು, ಮಂಗಳೂರು ಪ್ರದೇಶಗಳಿಂದ ನಿರಪರಾಧಿಗಳು ಸೇರಿದಂತೆ ಹಲವಾರು ಯುವಕರನ್ನು ಬಂಧಿಸಿ ಜೈಲಿಗೆ ಕಳಿಸಲು ಪೊಲೀಸರು ತೋರಿಸಿದ ಆವೇಶ ಹಾಗೂ ಪೌರುಷ ಇದೀಗ ಏನಾಯಿತು? ನಿಮ್ಮ ವೀರಾವೇಶಗಳು ಕೇವಲ ಮುಸ್ಲಿಂ ಸಮುದಾಯದ ಯುವಕರ ಮೇಲೆ ಮಾತ್ರ ತೋರಿಸಿ ಸಂಘಪರಿವಾರದ ಮುಂದೆ ಮಂಡಿಯೂರುವುದು ಪೊಲೀಸ್ ಇಲಾಖೆಯ ಘನತೆಗೆ ಶೋಭೆ ತರುವಂತದ್ದಲ್ಲ. ಆದ್ದರಿಂದ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಮುರಳೀಕೃಷ್ಣ ಹಂಸತಡ್ಕ, ಪುನೀತ್ ಅತ್ತಾವರ ಸೇರಿದಂತೆ ಎಲ್ಲಾ ಸಂಘಟಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಎಸ್ ಡಿಪಿಐ ಸಮಾನ ಮನಸ್ಕ ನಾಗರಿಕರನ್ನು ಸೇರಿಸಿಕೊಂಡು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿರುದ್ಧ ಹೋರಾಟ ನಡೆಸಲಿದೆ ಎಂದು ಸುಹೈಲ್ ಖಾನ್ ಎಚ್ಚರಿಕೆ ನೀಡಿದ್ದಾರೆ