ರಾಜ್ಯದಲ್ಲಿ 6 ಕೋಟಿ ಕೋವಿಡ್ ಪರೀಕ್ಷೆ, ಹೆಚ್ಚು ಪರೀಕ್ಷೆ ನಡೆಸಿದ ರಾಜ್ಯಗಳಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ: ಡಾ.ಕೆ.ಸುಧಾಕರ್

Prasthutha: January 22, 2022

ಬೆಂಗಳೂರು: ಕೋವಿಡ್ ಪರೀಕ್ಷೆ ವ್ಯವಸ್ಥೆಯನ್ನು ಆರಂಭದಿಂದಲೂ ಸಮರ್ಥವಾಗಿ ಅನುಷ್ಠಾನ ಮಾಡಿದ್ದ ಕರ್ನಾಟಕ, ಇಂದಿಗೆ 6 ಕೋಟಿ ಪರೀಕ್ಷೆಯ ಮೈಲುಗಲ್ಲು ತಲುಪಿದೆ. ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಸರ್ಕಾರದ ದೊಡ್ಡ ಯಶಸ್ಸು. ಹೆಚ್ಚು ಕೋವಿಡ್ ಪರೀಕ್ಷೆ ನಡೆಸಿದ ರಾಜ್ಯಗಳಲ್ಲಿ ರಾಜ್ಯವು ಇಡೀ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲಾ ಜಿಲ್ಲಾಡಳಿತ ಹಾಗೂ ಆರೋಗ್ಯ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಕೋವಿಡ್ ಆರಂಭವಾದಾಗ ರಾಜ್ಯದಲ್ಲಿ ಎನ್ಐವಿ ಘಟಕದಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಆಗ ಖಚಿತತೆಗಾಗಿ ಪುಣೆಯ ಎನ್ಐವಿ ಘಟಕಕ್ಕೆ ಮಾದರಿಗಳನ್ನು ಕಳುಹಿಸಲಾಗುತ್ತಿತ್ತು. ನಂತರ ಹಂತಹಂತವಾಗಿ ಹೊಸ ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳನ್ನು ಆರಂಭಿಸಲಾಯಿತು. ಸದ್ಯ ರಾಜ್ಯದಲ್ಲಿ, 99 ಸರ್ಕಾರಿ ಹಾಗೂ 169 ಖಾಸಗಿ ಸೇರಿ ಒಟ್ಟು 268 ಲ್ಯಾಬ್ ಕಾರ್ಯನಿರ್ವಹಿಸುತ್ತಿವೆ.

ರಾಜ್ಯದಲ್ಲಿ ಈವರೆಗೆ 1,14,12,162 ರಾಪಿಡ್ ಆಂಟಿಜೆನ್, 4,87,02,653 ಆರ್ ಟಿಪಿಸಿಆರ್ ಹಾಗೂ ಇತರೆ ವಿಧಾನಗಳು ಸೇರಿ ಒಟ್ಟು 6,01,14,815 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. 2020 ರಲ್ಲಿ ಒಟ್ಟು 1,41,96,065, 2021 ರಲ್ಲಿ 4,23,91,357 ಹಾಗೂ 2022 ರಲ್ಲಿ ಈವರೆಗೆ 35,27,393 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಸಾಮರ್ಥ್ಯ ಹೆಚ್ಚಳ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಆರಂಭದಿಂದಲೇ 5 ಟಿ ವಿಧಾನ (ಟೆಸ್ಟ್, ಟ್ರ್ಯಾಕ್, ಟ್ರೇಸಿಂಗ್, ಟ್ರಯಾಜಿಂಗ್, ಟೆಕ್ನಾಲಜಿ) ಅನುಸರಿಸಿದ್ದವು. 20,000 ಜನಸಂಖ್ಯೆಗೆ ಅನುಗುಣವಾಗಿ, ಒಟ್ಟು 3,678 (ಸರ್ಕಾರಿ 3,102, ಖಾಸಗಿ 666) ಮಾದರಿ ಸಂಗ್ರಹ ಕೇಂದ್ರಗಳನ್ನು ಆರಂಭಿಸಲಾಯಿತು. ಜೊತೆಗೆ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆ, ಲ್ಯಾಬ್ ಗಳಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಆರಂಭಿಸಲಾಯಿತು. ಒಟ್ಟು 63 ವೈದ್ಯಕೀಯ ಕಾಲೇಜುಗಳಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಆರಂಭವಾದವು. ಆರಂಭದಲ್ಲಿ 10-12 ಸರ್ಕಾರಿ ಸರ್ಕಾರಿ ಪ್ರಯೋಗಾಲಯಗಳಲ್ಲಿ ಮಾತ್ರ ಆರ್ ಟಿಪಿಸಿಆರ್ ಪರೀಕ್ಷಾ ವ್ಯವಸ್ಥೆ ಇದ್ದು, ಈಗ ಆ ಸಂಖ್ಯೆ 57 ಕ್ಕೇರಿದೆ. 108 ಆರ್ ಎನ್ಎ ಎಕ್ಸ್ ಟ್ರ್ಯಾಕ್ಟರ್, 139 ಆರ್ ಟಿಪಿಸಿಆರ್ ಯಂತ್ರ ಹಾಗೂ ಒಂದು ಪೂರ್ಣ ಪ್ರಮಾಣದ ಯಂತ್ರದ ಮೂಲಕ ದಿನದ ಪರೀಕ್ಷಾ ಸಾಮರ್ಥ್ಯವನ್ನು 1,20,800 ಕ್ಕೆ ಏರಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ವೈರಾಣು ಪ್ರಕರಣ ಪತ್ತೆಯಾದ ಬಳಿಕ, ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಲ್ಲಿ ಶೇ.2 ರಷ್ಟು ಪರೀಕ್ಷೆಗೊಳಪಡಿಸುವ ಕ್ರಮ ಜಾರಿ ಮಾಡಲಾಯಿತು. ನಂತರ ಡಿಸೆಂಬರ್ ನಿಂದ ಪರೀಕ್ಷಾ ಗುರಿಯನ್ನು 80,000 ದಿಂದ 1 ಲಕ್ಷಕ್ಕೆ ಹೆಚ್ಚಿಸಲಾಯಿತು ಎಂದು ಸಚಿವರು ವಿವರಿಸಿದ್ದಾರೆ.

ಮಕ್ಕಳ ಪರೀಕ್ಷೆ

ಕೋವಿಡ್ 3 ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಅಭಿಪ್ರಾಯದ ಹಿನ್ನೆಲೆಯಲ್ಲಿ, ಒಟ್ಟು ಪರೀಕ್ಷೆಯಲ್ಲಿ ಕಡ್ಡಾಯವಾಗಿ ಶೇ.2 ರಷ್ಟು ಪರೀಕ್ಷೆಯನ್ನು ಮಕ್ಕಳಿಗೆ ನಡೆಸುವ ಕ್ರಮ ತರಲಾಗಿದೆ. ಡಿಸೆಂಬರ್ 1-ಜನವರಿ 20 ರ ಅವಧಿಯಲ್ಲಿ ನಡೆಸಲಾದ ಒಟ್ಟು ಪರೀಕ್ಷೆಯಲ್ಲಿ, 29% ರಷ್ಟು ಮಕ್ಕಳಿಗೆ ಮಾಡಿದ ಪರೀಕ್ಷೆಗಳಾಗಿವೆ. ಜೊತೆಗೆ, 15 ದಿನಕ್ಕೊಮ್ಮೆ ಕಾಲೇಜು, ಪ್ರೌಢಶಾಲೆ, ಹೋಟೆಲ್, ರೆಸ್ಟೋರೆಂಟ್, ಅಡುಗೆ ಸಿಬ್ಬಂದಿ ಮೊದಲಾದವರಿಗೆ ರಾಂಡಮ್ ಪರೀಕ್ಷೆ ಮಾಡಲಾಗುತ್ತಿದೆ.

ಇತರೆ ಅಂಶಗಳು

  1. ಕೋವಿಡ್ ಮೂರನೇ ಅಲೆ ನಿರ್ವಹಣೆಗಾಗಿ ಜನವರಿ 18 ರಿಂದ ದಿನದ ಪರೀಕ್ಷಾ ಗುರಿ 2 ಲಕ್ಷಕ್ಕೆ ನಿಗದಿ.
  2. ಪ್ರಾಥಮಿಕ ಸಂಪರ್ಕ ಹಾಗೂ ರೋಗಲಕ್ಷಣ ಇರುವವರಿಗೆ ಪರೀಕ್ಷೆಗೆ ಒತ್ತು. RAT ಪರೀಕ್ಷೆಯಲ್ಲಿ ನೆಗಟಿವ್ ವರದಿ ಬಂದರೂ, ರೋಗ ಲಕ್ಷಣವಿದ್ದರೆ ಆರ್ ಟಿಪಿಸಿಆರ್ ಪರೀಕ್ಷೆ ಮಾಡುವುದು.
  3. ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರಿಂದ ಮನೆಮನೆ ಭೇಟಿ ನೀಡಿ ಪರೀಕ್ಷೆ. ಸಂಚಾರಿ ತಂಡಗಳನ್ನು ಬಳಸಿಕೊಂಡು ಮಾನಸಿಕ ಅಸ್ವಸ್ಥರು, ಅಂಗವಿಕಲರ ಮನೆಗೆ ಭೇಟಿ ನೀಡಿ ಪರೀಕ್ಷೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!