ಮತಾಂತರ ನಿಷೇಧ ಕಾಯ್ದೆ ಎಂಬ ಶೋಷಿತರ ಶರಪಂಜರ !

Prasthutha|

ಕೊನೆಗೂ ರಾಜ್ಯ ಬಿಜೆಪಿ ಸರ್ಕಾರದ ಪಾಲಿನ ರಾಜಕೀಯ ಮಹತ್ವದ ಸಂಗತಿಯಾಗಿದ್ದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ನಿರ್ಧಾರವಾಗಿದೆ. ಈಗಾಗಲೆ ದೇಶದ ಉತ್ತರ ಪ್ರದೇಶ, ಹಿಮಾಚಲ, ಛತ್ತೀಸ್‌ ಗಡ, ಅರುಣಾಚಲ, ನಾಗಾಲ್ಯಾಂಡ್ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಚಾಲ್ತಿಯಲ್ಲಿದ್ದು, ಕರ್ನಾಟಕವೂ ಇವುಗಳ ಪಾಲಿಗೆ ಸೇರಿದಂತಾಗಿದೆ. ಈ ಮೂಲಕ ಬಿಜೆಪಿ ಧರ್ಮಧಾರಿತ ರಾಜಕಾರಣದ ತನ್ನ ವಿಭಜನಾ ಸಿದ್ಧಾಂತದ ನಡೆಯನ್ನು ಇನ್ನಷ್ಟು ಬಿರುಸುಗೊಳಿಸಿಕೊಳ್ಳುವತ್ತ ಸಾಗಿದೆ. ಮತಾಂತರದ ಕುರಿತಂತೆ ಸ್ವಾತಂತ್ರ್ಯ ಪೂರ್ವದಿಂದಲೇ ಚರ್ಚೆಗಳು ನಡೆಯುತ್ತಲೆ ಇವೆ. ಮನುಷ್ಯ ತಾನು ಹುಟ್ಟಿದ ಮತವೊಂದರ (ಧರ್ಮ) ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ನಂಬಿಕೆಗಳಿಂದ ಬಿಡುಗಡೆಗೊಂಡು ಇನ್ನೊಂದು ಧರ್ಮವು ಹೊಂದಿರಬಹುದಾದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ನಿಯಮಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುವುದನ್ನು ಸರಳವಾಗಿ ಮತಾಂತರ ಎನ್ನಬಹುದು. 

- Advertisement -

ಭಾರತದಲ್ಲಿ ಬಹುಸಂಖ್ಯಾತ ಹಿಂದೂ ಧರ್ಮ ರಾಜಕೀಯಾಧಿಕಾರ ಗಳಿಕೆಯ ಮಾರ್ಗವಾಗಿ ಬಳಕೆಯಾಗುತ್ತಿದೆ. ಸಂವಿಧಾನದತ್ತ ಭಾರತೀಯ ರಾಷ್ಟ್ರವಾದವನ್ನು  ಮನು ಸಿದ್ಧಾಂತ ಪ್ರಣೀತ ಹಿಂದೂ ರಾಷ್ಟ್ರೀಯವಾದವನ್ನಾಗಿಸುವ, ಜನರನ್ನು ಈ ದಿಕ್ಕಿನಲ್ಲಿ ಹಿಡಿದಿಟ್ಟುಕೊಂಡು ರಾಜಕೀಯ ಅಧಿಕಾರದಲ್ಲಿ ವಿಜೃಂಭಿಸುವ ಪ್ರಯೋಗಗಳು  ಮಾಡಿದ ಅನಾಹುತಗಳನ್ನು ಎಂದಿಗೂ ಮರೆಯಲಾಗದು. ಹಿಂದೂತ್ವದ ಪ್ರತಿಪಾದನೆ ಮೂಲಕ ರಾಷ್ಟ್ರಮಟ್ಟದಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಜನರನ್ನು ಧರ್ಮದ ಹೆಸರಿನಲ್ಲಿ ಓಟ್ ಬ್ಯಾಂಕ್ ಮಾಡಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದೆ. ಮತಾಂತರವನ್ನು ವಿರೋಧಿಸಿ ಬೊಬ್ಬೆ ಹೊಡೆಯುತ್ತಿರುವ ಮತೀಯ ಶಕ್ತಿಗಳು, ಮತ್ತು ಇದನ್ನು ಕಾಯ್ದೆ ರೂಪದಲ್ಲಿ ಜಾರಿಗೊಳಿಸಲು ಮುಂದಾಗಿರುವ ಸರ್ಕಾರ ಮತಾಂತರಕ್ಕೆ ಇರುವ ಕಾರಣಗಳನ್ನು ತುಂಬಾ ಹಗುರವಾಗಿ ಕಾಣುತ್ತಿವೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಮತಾಂತರ ನಿಷೇಧ ಕಾಯ್ದೆ ಎಂಬುದು  ಹಿಂದೂ ಧರ್ಮದಿಂದ ಕ್ರೈಸ್ತ, ಮುಸ್ಲಿಂ ಧರ್ಮಗಳಿಗೆ ಆಗುತ್ತಿರುವ ಮತಾಂತರವನ್ನು ತಡೆಯುವ ಏಕಮುಖ ಉದ್ದೇಶದಿಂದ ಕೂಡಿದೆ. ದೇಶದಲ್ಲಿ ಅಸ್ಪೃಶ್ಯರು ಕ್ರೈಸ್ತ ಮತದತ್ತ ಹೆಜ್ಜೆ ಹಾಕುತ್ತಿರುವುದು ಆಶ್ಚರ್ಯಕರ ಸಂಗತಿಯೇನಲ್ಲ.  ಇತ್ತೀಚೆಗೆ ಹಿಂದೂ ಯುವಕ /ಯುವತಿಯರು ವೈಯಕ್ತಿಕ ನೆಲೆಯಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುತ್ತಿರುವುದನ್ನು  ಹಿಂದೂ ಸಂಘಟನೆಗಳು ಲವ್ ಜಿಹಾದ್ ಹೆಸರಿನಲ್ಲಿ ವಿರೋಧಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಮತಾಂತರ ನಿಷೇಧ ಕಾಯ್ದೆ ಕ್ರೈಸ್ತರು, ಮುಸ್ಲಿಂ ವಿರೋಧಿ ಮನೋಭಾವದಿಂದ ಕೂಡಿರುವುದು ಸ್ಪಷ್ಟವಾಗಿದೆ.  ಭಾರತದ ಸಂವಿಧಾನದ ಆರ್ಟಿಕಲ್ 25ರ ಅನ್ವಯ ಈ ದೇಶದ ಯಾವೊಬ್ಬ ನಾಗರೀಕನೂ ತನಗಿಷ್ಟ ಬಂದ ಧರ್ಮದ ಆಚರಣೆಯ ಧಾರ್ಮಿಕ ಹಕ್ಕನ್ನು ನೀಡಿದ್ದರೂ ಈ ಮೂಲಭೂತ ಹಕ್ಕಿಗೆ ವಿರುದ್ಧವಾದ ನಿರ್ಧಾರಗಳು ರಾಜಕೀಯ ಪೀಡಿತವಾಗಿ ಜಾರಿಗೊಳ್ಳುತ್ತಿವೆ.

- Advertisement -

ಭಾರತದಲ್ಲಿ ಮತಾಂತರಕ್ಕೆ ಅನೇಕ ಕಾರಣಗಳನ್ನು ಗುರುತಿಸಬಹುದು.  ಭಾರತದ ಬಹುಸಂಖ್ಯಾತರ ಧರ್ಮವಾಗಿರುವ ಹಿಂದೂ ಧರ್ಮವು ಬಹುಮುಖ್ಯವಾಗಿ ಮತಾಂತರದ ಸವಾಲುಗಳನ್ನು ಎದುರಿಸುತ್ತಲೆ ಬರುತ್ತಿದೆ. ಇದಕ್ಕೆ ಕಾರಣ ಹಿಂದೂ ಧರ್ಮದೊಳಗಿನ ಜಾತಿಯತೆ, ಶ್ರೇಣೀಕೃತ ಜಾತಿ ವ್ಯವಸ್ಥೆ, ಶೋಷಣೆಯೇ ಆಗಿದೆ. ಇಂತಹ ಜಾತಿ ಆಧಾರಿತ ಕ್ರೌರ್ಯಗಳಿಂದ ಬೆಂದು ಬಸವಳಿದ ದಲಿತ, ದಮನಿತ ಸಮುದಾಯಗಳು ಹಿಂದೂ ಧರ್ಮವನ್ನು ತ್ಯಜಿಸಿ ಅನ್ಯಧರ್ಮಗಳಿಗೆ ಮತಾಂತರದತ್ತ ಮುಖಮಾಡಿವೆ.  ಇದರ ಆರಂಭವನ್ನು 1937ರಿಂದ ಗುರುತಿಸಬಹುದು.

ಮತಾಂತರವನ್ನು ಘೋರ  ಅಪರಾಧವೆಂಬಂತೆ ಬಿಂಬಿಸಲು ಹೊರಟಿರುವ ಹಿಂದೂ ಮತೀಯ ಶಕ್ತಿಗಳು ಮತಾಂತರದ  ಹಿಂದಿರುವ ಚಾರಿತ್ರಿಕ ಕಾರಣಗಳನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಡುತ್ತಿವೆ. ಪ್ರಾಚೀನ ಸಮುದಾಯದ  ಹಿಂದೂ ಧರ್ಮ ಎಂಬುದು ಅಸ್ಪೃಶ್ಯತೆಯ ತವರು ಮನೆ ಎಂದೇ ಕರೆಯಲಾಗುತ್ತದೆ. ವರ್ಣಾಶ್ರಮ ನೀತಿಯಿಂದ ಉಚ್ಚ-ನೀಚಗಳ ಶ್ರೇಣಿಕೃತ ಸಮಾಜವನ್ನು ಪೋಷಿಸಿಕೊಂಡು ಬಂದ ಹಿಂದೂ ಧರ್ಮ ಸಮಾನತೆಯಿಂದ ಇಂದಿಗೂ ಅಂತರ ಕಾಯ್ದುಕೊಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಧರ್ಮದೊಳಗಿನ ಬಹುಸಂಖ್ಯಾತ ಅಸ್ಪೃಶ್ಯರು ಮತಾಂತರದ ಹಾದಿ ಹಿಡಿಯಬೇಕಾಯಿತು. 

1936ರಲ್ಲಿ ಮುಂಬೈನಲ್ಲಿ ನಡೆದ ಅಸ್ಪೃಶ್ಯ ಸಮುದಾಯವಾಗಿರುವ ಮಹಾರ್ ಸಮುದಾಯದ ಸಮ್ಮೇಳನದಲ್ಲಿ ಹಿಂದೂ ಧರ್ಮವನ್ನು ತ್ಯಜಿಸಿ ಇತರೆ ಧರ್ಮಗಳನ್ನು ಸ್ವೀಕರಿಸುವುದೇ ಅಸ್ಪೃಶ್ಯತೆಯಿಂದ ಬಿಡುಗಡೆಗೊಳ್ಳಲು ಇರುವ ಏಕೈಕ ಮಾರ್ಗವೆಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಇದಕ್ಕೆ ಭಾರತದ ಇಡೀ ಅಸ್ಪೃಶ್ಯ ಸಮುದಾಯದ ಬೆಂಬಲ ಕೂಡ ವ್ಯಕ್ತವಾಯಿತು. ಈ ನಿರ್ಣಯ ಹಿಂದೂ ಧರ್ಮದೊಳಗೆ ಕೋಲಾಹಲವನ್ನೆ ಎಬ್ಬಿಸಿ ಹಿಂದೂ ಧರ್ಮದ ಅಡಿಪಾಯವೇ ಅಲುಗಾಡಿತು. ಈ ನಿರ್ಣಯದ ಹಿಂದಿದ್ದ ಅಸ್ಪೃಶ್ಯರ ವಿರುದ್ಧ ಇದೇ ಶಕ್ತಿಗಳು ಶಾಪಗಳನ್ನು, ಬೆದರಿಕೆಗಳನ್ನು ಹಾಕಿದವು. ಇದು ಈಗಲೂ ಆ ಮಾದರಿ ಮುಂದುವರೆದಿದೆ.

 ಮತಾಂತರ ಕಾಯ್ದೆ ಪ್ರಕಾರ ಯಾವುದೇ ವ್ಯಕ್ತಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಆಗಲು ಸಕ್ಷಮ ಪ್ರಾಧಿಕಾರ(ಜಿಲ್ಲಾಧಿಕಾರಿ)ಗಳ ಮುಂದೆ ಎರಡು  ತಿಂಗಳ ಮುಂಚೆಯೇ ಅರ್ಜಿ ಸಲ್ಲಿಸಿ ಪರಿಶೀಲನೆಗೊಳಪಟ್ಟು ಅನುಮತಿ ಪಡೆಯಬೇಕು. ಆಮಿಷ, ಬಲವಂತದ ಮತಾಂತರ ಅಪರಾಧ ಸ್ವರೂಪ ಕಾಯ್ದೆಗಳಡಿಯಲ್ಲಿ ಶಿಕ್ಷಾರ್ಹವಾದುದ್ದು, ಇದು ಜೈಲುವಾಸ, ಮತ್ತು ದಂಡ ರೂಪವಾಗಿಯೂ ಇರುತ್ತದೆ. ಹಿಂದೂ ಧರ್ಮದ ವ್ಯಕ್ತಿ ಬೌದ್ದ, ಸಿಖ್, ಜೈನ  ಧರ್ಮಗಳನ್ನು ಹೊರತು ಪಡಿಸಿ ಮುಸ್ಲಿಂ,  ಕ್ರೈಸ್ತ ಧರ್ಮಗಳಿಗೆ ಮತಾಂತರವಾದರೆ ಆತ ಹೊಂದಿರಬಹುದಾದ ಮೀಸಲು ಸೌಲಭ್ಯವನ್ನು ಕಳೆದುಕೊಳ್ಳುತ್ತಾನೆ. ಪ್ರಸ್ತುತ ಜಾಲ್ತಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಯ ಪ್ರಮುಖಾಂಶಗಳು. ಇದರಂತೆ ಹಿಂದೂ ಧರ್ಮದೊಳಗಿನ ಅಸ್ಪಶ್ಯರು ಈ ಶೋಷಣೆಯನ್ನು ಅನುಭವಿಸುತ್ತಲೇ ಅದೇ ಧರ್ಮದೊಳಗೆ ಕೊನೆಗಾಣಬೇಕು. ಸಮಾನತೆ, ಸ್ವಾತಂತ್ರ್ಯವನ್ನು ಎಂದಿಗೂ ಬಯಸಬಾರದು. ಮೇಲ್ಜಾತಿಗಳ ಧರ್ಮದ್ವೇಷದ ಸಂಘರ್ಷಗಳಿಗೆ ದಲಿತರು, ದಮನಿತರು ಬಲಿಯಾಗಲು ಸಿದ್ಧರಿರಬೇಕು ಎಂಬುದರ ತಾತ್ಪರ್ಯ ಮತಾಂತರ ನಿಷೇಧದ ಕಾಯ್ದೆಯ ಹಿಂದೆ ಅಡಗಿದೆ.  

ಮತಾಂತರಗೊಂಡ ಅಸ್ಪೃಶ್ಯರು ಮೀಸಲು ಸೌಲಭ್ಯವನ್ನು ಕಳೆದುಕೊಳ್ಳುತ್ತಾರೆ ಎಂಬುದು ಸರ್ಕಾರದ ಬೆದರಿಕೆಯೇ ಆಗಿದ್ದು, ಸಂವಿಧಾನದ ಅನುಚ್ಛೇದ 25ರಂತೆ ತನಗಿಷ್ಟ ಬಂದ ಮತವನ್ನು ಸ್ವೀಕರಿಸುವ ಹಕ್ಕಿಗೆ ವಿರುದ್ಧವಾದದ್ದು ಮತ್ತು ಬೆದರಿಕೆ ಹಾಕುವಂತಹದ್ದೇ ಆಗಿದೆ. 

ಇತ್ತೀಚೆಗೆ  ಉತ್ತರಪ್ರದೇಶದ ವಕ್ಫ್ ಬೋರ್ಡ್‌ನ ಮಾಜಿ ಮುಖ್ಯಸ್ಥ ವಸೀಂ ರಿಝ್ವಿ, ಕೇರಳದ ಸಿನಿಮಾ ನಿರ್ದೇಶಕ ಆಲಿ ಅಕ್ಬರ್ ಅವರು ಹಿಂದೂ ಧರ್ಮಕ್ಕೆ ಮತಾಂತರ ಗೊಂಡಿದ್ದು ದೊಡ್ಡ ಸುದ್ದಿ ಆಯಿತು. ಇದನ್ನು ಯಾವ ಮುಸ್ಲಿಂ ಸಂಘಟನೆಗಳು ಹಿಂದೂ ಜಿಹಾದ್ ಹೆಸರಿನಲ್ಲಿ ಖಂಡಿಸಿ ಬೀದಿಗಿಳಿದು ರಂಪ ಮಾಡಿದ ಸಂಗತಿಗಳು ನನ್ನ ಗಮನಕ್ಕೆ ಬಂದಿಲ್ಲ. ಹಿಂದೂ ಧರ್ಮಕ್ಕೆ ಮತಾಂತರಗೊಂಡ ರಿಝ್ವಿ  ಅವರನ್ನು ಹಿಂದೂ ಧರ್ಮದ ಉಚ್ಚ ಕುಲ ಎನ್ನಲಾಗುವ ಬ್ರಾಹ್ಮಣ ಸಮುದಾಯಕ್ಕೆ ಸೇರ್ಪಡೆಗೊಳಿಸಿಕೊಳ್ಳಲಾಗಿದೆ ಎಂಬ ಸುದ್ದಿ ಇದೆ. ಇನ್ನೂ ಕೇರಳ ಸಿನಿಮಾ ನಿರ್ದೇಶಕ ಆಲಿ ಅಕ್ಬರ್ ಅವರನ್ನು ಹಿಂದೂ ಧರ್ಮದ ಯಾವ ಜಾತಿಗೆ ಹಂಚಿಕೆ ಮಾಡಲಾಯಿತೋ ಗೊತ್ತಿಲ್ಲ. ಹಿಂದೂ ಧರ್ಮದ ವ್ಯಕ್ತಿಯೊಬ್ಬ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದರೆ ಅವನು ಮುಸ್ಲಿಂ ಮಾತ್ರ ಆಗಿ ಉಳಿಯುತ್ತಾನೆ. ಅದೇ ರೀತಿ ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಪ್ರಾಟೆಸ್ಟೆಂಟ್ ಯಾ ಕ್ಯಾಥೋಲಿಕ್ ಕ್ರೈಸ್ತನಾಗುವುದಕ್ಕಿಂತ ಮಿಗಿಲಾದ ಆಯ್ಕೆಗಳಿರುವುದಿಲ್ಲ. ಅದೇ ಹಿಂದೂ ಧರ್ಮಕ್ಕೆ ಮತಾಂತರವಾಗುವವರಿಗೆ ಅಲ್ಲಿ ಜಾತಿಯ ಆಯ್ಕೆಗಳಿರಲೇಬೇಕು. ಹಿಂದೂ ಧರ್ಮದಲ್ಲಿ  ನೂರಾರು ಜಾತಿಗಳಿವೆ. ಶ್ರೇಣೀಕೃತ ಸಮಾಜ ವ್ಯವಸ್ಥೆ ಇದೆ. ಘರ್ ವಾಪಸ್ಸಿ ಆಂದೋಲನ ನಡೆಸಿದ ಹಿಂದೂ ಸಂಘಟನೆಗಳು ಮರು ಮತಾಂತರಗೊಂಡ ಹಿಂದೂಗಳನ್ನು ವಾಪಸ್ ಕರೆತಂದು ಅವರವರ ಜಾತಿಗೆ ಬಿಡುತ್ತಿದ್ದಾರೆ. ಆದರೆ ಸಮಾನತೆಯನ್ನು ಎಂದಿಗೂ ಬಿಟ್ಟುಕೊಡುವ ಉದತ್ತತೆಯನ್ನು, ಮಾನವತೆಯನ್ನು ತೋರುಕೊಡುವುದಿಲ್ಲ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಹಿಂದೂ ಮತೀಯ ಶಕ್ತಿಗಳು ತನ್ನ  ರಾಜಕೀಯ ಶಕ್ತಿಯಾಗಿರುವ  ಬಿಜೆಪಿಯ ಮೂಲಕ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಸನಾತನವಾದ ಪ್ರೇಣಿತ ಹಿಂದೂ ಧರ್ಮವನ್ನು ಕಾಯ್ದುಕೊಳ್ಳಲು ಹೊರಟಿದೆ. 

ಹಿಂದೂ ಧರ್ಮದ ಸುಧಾರಣೆ ಬಯಸಿದ ಮಹಾತ್ಮ ಗಾಂಧಿಯನ್ನು ಇದೇ ಹಿಂದೂ ಧರ್ಮ ಕೊಂದಿತು ಎಂದು ಹೇಳಿದರೆ ತಪ್ಪಾದೀತಾ?!  ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1956ರಲ್ಲಿ ಹಿಂದೂ ಧರ್ಮವನ್ನು ತ್ಯಜಿಸಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ದ ಧರ್ಮವನ್ನು ಸ್ವೀಕರಿಸುತ್ತಾರೆ. ಇದಕ್ಕೂ ಮೊದಲೇ ಅವರು ಹಿಂದೂ ಆಗಿ ಹುಟ್ಟಿದ್ದೇನೆ. ಹಿಂದೂ ಆಗಿ ಸಾಯಲಾರೆ ಎಂದು ಘೋಷಿಸಿದ್ದರು. ಇದರರ್ಥ ಕನ್ನಡಿಯಷ್ಟೆ ಸ್ಪಷ್ಟ. ಹಿಂದೂ ಧರ್ಮ ಯಾವ ಕಾಲಕ್ಕೂ ಸುಧಾರಣೆಗೊಳ್ಳದ್ದನ್ನು  ಮನಗಂಡೇ ಅಂಬೇಡ್ಕರ್ ಮತಾಂತರಗೊಳ್ಳುತ್ತಾರೆ ಮತ್ತು ಅಸ್ಪೃಶ್ಯರು ಹಿಂದೂ ಧರ್ಮವನ್ನು ತೊರೆಯುವಂತೆ ಕರೆ ನೀಡುತ್ತಾರೆ ಕೂಡ. ಹಿಂದೂ ಧರ್ಮದ ಹೆಸರಿನಲ್ಲಿ ಬ್ರಾಹ್ಮಣ್ಯವನ್ನೆ ಸಾರ್ವತ್ರೀಕರಣಗೊಳಿಸುವ ಹುನ್ನಾರಗಳಿಗೆ ಅಂಬೇಡ್ಕರ್ ಕೊಟ್ಟ ದೊಡ್ಡ ಪೆಟ್ಟು ಇದು. ಇಂದಿಗೂ ಈ ದೇಶದಲ್ಲಿ ದೀನ ದಲಿತರ, ಆದಿವಾಸಿಗಳ ಬದುಕು ಸಮಸಮಾಜದ ಮುಖ್ಯಧಾರೆಗೆ ಬರಲು ಜಾತಿ ದೊಡ್ಡ ಅಡ್ಡ ಗೋಡೆಯಾಗಿದೆ.

ಮತಾಂತರ ವಿರೋಧಿಸುವ ಹಿಂದೂ ಧರ್ಮದ್ರಾಷ್ಟಾರರು ಹಿಂದೂ ಧರ್ಮದೊಳಗಿನ ಅಸಮಾನತೆ, ಶೋಷಣೆ ಹುಳುಕನ್ನು ತೆಗೆದು ಹಿಂದೂ ಧರ್ಮವನ್ನು ಸರ್ವ ಸಮಾನತೆಯ ತಿಳಿ ಜಲದ ಕೊಳವನ್ನಾಗಿ ಮಾಡಬಾರದೇಕೆ? ಕ್ರೈಸ್ತ ಮಿಷನರಿಗಳು ಶಿಕ್ಷಣ, ಆರೋಗ್ಯದ ಕ್ಷೇತ್ರಗಳಲ್ಲಿ  ತೋರುತ್ತಿರುವ ಉದಾತ್ತತೆಯನ್ನು, ಸಮಾನತೆಯನ್ನು ಸೋಕಾಲ್ಡ್ ಹಿಂದೂ ಧರ್ಮದ ಮಠ, ಮಂದಿರಗಳು ಏಕೆ ತೋರಿಸುತ್ತಿಲ್ಲ. ಮಠಗಳಲ್ಲಿ ಪಂಕ್ತಿಭೇದ, ಮಡೆಸ್ನಾನದಂತಹ ಅಮಾನವೀಯತೆಯ ಪರಿಪಾಲನೆ ಏನನ್ನು ಸೂಚಿಸುತ್ತದೆ. ? ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸಲು ಮೊಟ್ಟೆ ಕೊಡುವುದನ್ನೇ ಧರ್ಮದ ಹೆಸರಿನಲ್ಲಿ ವಿರೋಧಿಸುವ, ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಅಗ್ರಹಿಸುವ ಮಠಾಧಿಪತಿಗಳು, ಹಿಂದೂತ್ವವಾದಿಗಳು ಬಹುಜನರ ಶೈಕ್ಷಣಿಕ, ಆರೋಗ್ಯ ಸುಧಾರಣೆಗೆ ಕೊಟ್ಟ ಕೊಡುಗೆಗಳಾದರೂ ಏನು ಎಂಬುದನ್ನು  ಆತ್ಮ ವಿಮರ್ಶೆಗೊಳಪಡಿಸಿಕೊಳ್ಳಲು ಇನ್ನೆಷ್ಟು ಕಾಲ ಬೇಕಾಗುತ್ತದೆ.?

ಧರ್ಮ ಮಾನವ ಪ್ರಪಂಚದ ಒಂದು ಪ್ರಚಂಡ ಶಕ್ತಿ, ರಾಷ್ಟ್ರಗಳನ್ನು ಛಿದ್ರಗೊಳಿಸಿದ್ದು ಮತ್ತು ಒಗ್ಗೂಡಿಸಿದ್ದು, ಸಾಮ್ರಾಜ್ಯಗಳು ಹರಿದು ಹಂಚಿಹೋಗುವಂತೆ ಮಾಡಿದ್ದು ಮತ್ತು ಸಂಯುಕ್ತಗೊಳಿಸಿದ್ದು ಅತ್ಯಂತ ಕ್ರೂರ ಪಾಶವೀ ಕೃತ್ಯಗಳಿಗೆ, ಪದ್ಧತಿಗಳಿಗೆ ಸಮ್ಮತಿ ನೀಡಿದ್ದು ಧರ್ಮವೇ. ಅದ್ಬುತ ಶೌರ್ಯ, ಸಾಹಸ, ಪರಿತ್ಯಾಗ, ಭಕ್ತಿ, ಭೀಕರ ಯುದ್ಧ, ರಕ್ತಪಾತ, ಬಂಡಾಯ ಮತ್ತು ಶಿಕ್ಷೆಗಳು, ಜೊತೆಗೆ ರಾಷ್ಟ್ರಗಳ ಸ್ವಾತಂತ್ರ್ಯ, ಸಮೃದ್ಧಿ, ಶಾಂತಿ ಎಲ್ಲಕ್ಕೂ ಧರ್ಮವೇ ಪ್ರೇರಕ ಶಕ್ತಿ. ಒಮ್ಮೆ ದೌರ್ಜನ್ಯಗಳ ಪಕ್ಷಪಾತ, ಮತ್ತೊಮ್ಮೆ ಬಿಗಿದ ಶೃಂಖಲೆಗಳನ್ನು ಕತ್ತರಿಸುವುದು, ಮತ್ತೆ ವಾಸ್ತವ ಜೀವನದ ಹಿತಕ್ಕಾಗಿ ಸರ್ವ ಶ್ರೇಷ್ಠ ನಾಗರೀಕತೆಯ ಬೆಳವಣಿಗೆಗಾಗಿ ಕರೆ ಕೊಡುವುದು ಮತ್ತೆ ಕೆಲವು ಸಲ ಕಲೆ ವಿಜ್ಞಾನಗಳ ಕಡು ವೈರಿಯಾಗುವುದು ಎಂದು ಪ್ರೊ.ಟೇಲೆ ಅವರ ಪ್ರಕಾರ ಧರ್ಮ ಹೀಗೆ ವಿಶ್ಲೇಷಣೆಗೊಳಪಡುತ್ತದೆ.

ಭಾರತದಲ್ಲಿ ಧರ್ಮ ಮನುಷ್ಯರ ಕಡುವೈರಿಯಂತೆ ಬಳಕೆಯಾಗುತ್ತಿದೆ. ಅದು ಓಟು ತಂದು ಕೊಡಬಲ್ಲ ಸಾಧನವೂ, ಮಾಧ್ಯಮವೂ ಆಗಿದೆ ಎಂಬುದು ಮಾತ್ರ ದುರ್ದೈವ. ಹಿಂದೂಗಳು ತಮ್ಮ ರಾಷ್ಟ್ರೀಯತೆಯ ಆವೇಶದಲ್ಲಿ ತಮ್ಮ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಶಕ್ತಿಗಳ ದುರುಪಯೋಗದ ಮೂಲಕ   ಈ ದೇಶದೊಳಗಿನ ಸಹಧರ್ಮಗಳನ್ನು ಹತ್ತಿಕ್ಕಲು ಹೊರಟಿದ್ದಾರೆ.  ಕ್ರಮೇಣ ಅದು ಸಂವಿಧಾನದ ಅಡಿಪಾಯಕ್ಕೆ ಅಪಾಯವನ್ನು ತಂದೊಡ್ಡಬಲ್ಲದು ಎಂಬುದನ್ನು ಎಚ್ಚರವಹಿಸಿಬೇಕಾದ ಜವಾಬ್ದಾರಿ ಪ್ರತಿಯೊಬ್ಬರದ್ದು ಆಗಿರುತ್ತದೆ.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುನ್ನ  ಒಂದು ನಾಗರೀಕ ಸರ್ಕಾರವಾಗಿ ಈ ಮತಾಂತರದ ಹಿಂದಿರುವ ನೈಜ ಕಾರಣಗಳಾಗಿರುವ  ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ  ಕಡಿವಾಣ ಮತ್ತು  ಪರಿಹಾರಗಳನ್ನು ಕಂಡುಕೊಳ್ಳಬೇಕು. ಅದು ಬಿಟ್ಟು ಕೇವಲ ಧರ್ಮದ ಹೆಸರಿನಲ್ಲಿ ಭಾವನಾತ್ಮಕ ಪ್ರಚೋದನೆಯಿಂದ ಮತ ಕ್ರೋಢೀಕರಣದ ರಾಜಕೀಯವನ್ನು ನಡೆಸುವುದು ನಿಜವಾದ ದೇಶದ್ರೋಹವಾಗುತ್ತದೆ. ಯಾವುದೇ ವಿಫಲ ಸರ್ಕಾರ ಅಥವಾ ನಾಯಕ  ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಿಂಸೆ ಮತ್ತು ಭಯವನ್ನು ಹುಟ್ಟುಹಾಕುತ್ತಾನೆ ಎಂಬ ಮಾತಿದೆ. ಇದನ್ನೆ ವಿಸ್ತರಿಸಿ ಹೇಳುವುದಾದರೆ ಅಸಮರ್ಥ ಸರ್ಕಾರ ಅಥವಾ ನಾಯಕ ಜನರ ಧರ್ಮ, ಜಾತಿಯಂತಹ ಭಾವನಾತ್ಮಕ ಸಂಗತಿಗಳು ಮುಂದೊಡ್ಡಿ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನವನ್ನು ನಿರ್ಲಜ್ಯದಿಂದ ಮಾಡುತ್ತಾನೆ ಕೂಡ. 90ರ ದಶಕದಿಂದ ಧರ್ಮೋಃರಾಜಕಾರಣದ ರಥವೇರಿ ಹೊರಟಿರುವ ಬಿಜೆಪಿ ಮತ್ತದರ ಕಾಲಾಳು ಮತೀಯ ಸಂಘಟನೆಗಳು  ಹಿಂದೂ ರಾಷ್ಟ್ರೀಯವಾದದ ಮೂಲಕ ಮತ ಕ್ರೋಢೀಕರಣ ಹುನ್ನಾರ ನಡೆಸುತ್ತಿರುವುದು ಎಂಬುದಷ್ಟೆ ಸತ್ಯ. ಬ್ರಾಹ್ಮಣ್ಯ ಪ್ರೇಣಿತ ಹಿಂದೂ ಧರ್ಮವನ್ನೇ ಪ್ರತಿಪಾದಿಸುತ್ತಿರುವ ಆರೆಸ್ಸೆಸ್  ಬಿಜೆಪಿ ಮೂಲಕ ರಾಜಕೀಯ ಶಕ್ತಿಯನ್ನು ಮೈಗೂಡಿಸಿಕೊಂಡು ನೈತಿಕ ಗೂಂಡಾಗಿರಿ ಮೂಲಕವೂ, ಸಂವಿಧಾನವಿರೋಧಿ ಕಾನೂನುಗಳ ತರುವ ಮೂಲಕವೂ ಹಿಂದೂತ್ವವನ್ನು ಮುಸ್ಲಿಂ, ಯಾ ಕ್ರಿಶ್ಚಿಯನ್ ವಿರೋಧಿ ನೆಲೆಯಲ್ಲಿ ವ್ಯಾಖ್ಯಾನಿಸುತ್ತಾ ಧರ್ಮದ್ವೇಷದಲ್ಲಿ ತೊಡಗಿವೆ. ಮತಾಂತರದಿಂದ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂದು ಹೇಳುವವರು ಹಿಂದೂ ಧರ್ಮದೊಳಗೆ ಶತಮಾನಗಳಿಂದ ಪೋಷಿಸಿಕೊಂಡು ಬರುತ್ತಿರುವ ಅಸ್ಪೃಶ್ಯತೆ,  ಜಾತೀಯತೆ ಎಂಬ ಅಮಾನವೀಯತೆಯ ಬಗ್ಗೆ ಎಂದಿಗೂ ಮಾತನಾಡದಿರುವುದು ಶೋಚನೀಯ. ದಲಿತರು, ದಮನಿತರು ಶೋಷಣೆ ಪೀಡಿತ ಹಿಂದೂ ಧರ್ಮದಿಂದ ಬಿಡುಗಡೆಗೊಳ್ಳದಂತೆ ಮತಾಂತರ ನಿಷೇಧ ಕಾಯ್ದೆಯ ಶರಪಂಜರವನ್ನೆ ಹೆಣೆಯಲಾಗಿದೆ.

Join Whatsapp