ತೊಕ್ಕೊಟ್ಟು ಚೊಂಬುಗುಡ್ಡೆ ನಿವಾಸಿಗಳಿಗೆ ಇದ್ದೂ ಇಲ್ಲದಂತಾದ ರಸ್ತೆ: ಅನಾರೋಗ್ಯ ಪೀಡಿತರನ್ನು ಹೊತ್ತೊಯ್ಯಬೇಕಾದ ದುರವಸ್ಥೆ

Prasthutha|

ಮುಖ್ಯರಸ್ತೆ ಬರಲು ಹರಸಾಹಸ ಪಡುತ್ತಿರುವ ನಿವಾಸಿಗಳು

- Advertisement -

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ತೊಕ್ಕೊಟ್ಟು ಚೊಂಬುಗುಡ್ಡೆಯಲ್ಲಿ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದ ಪರಿಣಾಮ 15ಕ್ಕೂ ಅಧಿಕ ಕುಟುಂಬಗಳು ಮುಖ್ಯ ರಸ್ತೆಗೆ ಬರಲು ಹರಸಾಹಸ ಪಡುತ್ತಿದ್ದಾರೆ.

ಚೊಂಬುಗುಡ್ಡೆ ‘ಮಂಗಳೂರು ಒನ್’ ಶಾಲೆಯ ಬಳಿ ಮುಖ್ಯ ರಸ್ತೆಯಿಂದ ಎಡಕ್ಕೆ ಸಣ್ಣ ರಸ್ತೆಯಿತ್ತು. ಈ ರಸ್ತೆಯಲ್ಲಿ ದ್ವಿಚಕ್ರ ವಾಹನ, ಆಟೋ ಓಡಾಡುತ್ತಿತ್ತು. ಆದರೆ 9 ವರ್ಷಗಳ ಹಿಂದೆ ಪಾಲಿಕೆಯವರು ಒಳಚರಂಡಿ ವ್ಯವಸ್ಥೆ ಕಲ್ಪಿಸುವಾಗ ರಸ್ತೆಯನ್ನು ಅಗೆದು ಹಾಕಿ ರಸ್ತೆ ಮಧ್ಯದಲ್ಲೇ ಒಳಚರಂಡಿ ಗಟಾರ ಹಾಕಿ ರಸ್ತೆಯ ಸ್ವರೂಪವನ್ನೇ ಹಾಳುಗೆಡವಿದ್ದಾರೆ. ಇದಾದ ಬಳಿಕ ಆಟೋ ರಿಕ್ಷಾ ಕೂಡ ಸಂಚರಿಸಲು ಸಾಧ್ಯವಾಗುತ್ತಿಲ್ಲ.

- Advertisement -

ಈ ಪ್ರದೇಶದ ನಿವಾಸಿಗಳ ಪೈಕಿ ಯಾರಿಗಾದರೂ ಅನಾರೋಗ್ಯ ಉಂಟಾದರೆ ಅವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಮುಖ್ಯರಸ್ತೆಯವರೆಗೂ ಹೊತ್ತೊಯ್ಯಬೇಕಾದ ಪರಿಸ್ಥಿತಿ ಇದೆ. ಒಂದು ಮನೆಯಲ್ಲಿ ವಿಕಲಚೇತನರಿದ್ದು ಅವರನ್ನು ಕೂಡ ಕುಟುಂಬಸ್ಥರು ಮುಖ್ಯರಸ್ತೆವರೆಗೂ ಹೊತ್ತು ತರುವುದು ಅನಿವಾರ್ಯವಾಗಿದೆ. ಈ ರಸ್ತೆಯಲ್ಲಿ ಆ್ಯಂಬುಲೆನ್ಸ್ ಕೂಡ ಬರಲು ಅಸಾಧ್ಯವಾದುದರಿಂದ ಆಸ್ಪತ್ರೆಗೆ ಹೋಗುವಾಗ ಮತ್ತು ಕರೆ ತರುವಾಗ ಸ್ಟ್ರೇಚರ್ ಮೇಲೆ ಮಲಗಿಸಿ ರೋಗಿಗಳನ್ನು ಕೊಂಡೊಯ್ಯಬೇಕಾಗಿದೆ. ಯಾರಾದರೂ ಮೃತಪಟ್ಟರೆ ಮೃತದೇಹವನ್ನು ಹೊತ್ತು ಕೊಂಡೇ ಹೋಗಬೇಕಾಗಿದೆ ಎಂದು ಸ್ಥಳೀಯರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಈ ಬಗ್ಗೆ ಈಗಾಗಲೇ ಹಲವು ಬಾರಿ ಪಾಲಿಕೆಗೆ, ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಳಚರಂಡಿ ವ್ಯವಸ್ಥೆಯ ಹೆಸರಿನಲ್ಲಿ ಇದ್ದ ರಸ್ತೆಯನ್ನೂ ಹಾಳುಗೆಡವಿ ನಮ್ಮ ಬದುಕನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಹಲವು ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡುತ್ತಿರುವ ಮಹಾನಗರ ಪಾಲಿಕೆ ತೊಕ್ಕೊಟ್ಟು ಚೊಂಬುಗುಡ್ಡೆಯ ಈ ಪ್ರದೇಶದ ಬಗ್ಗೆ ಗಮನಹರಿಸಬಹುದೇ ಎಂಬುದನ್ನು ಕಾದುನೋಡಬೇಕಾಗಿದೆ.

Join Whatsapp