ಬೆಂಗಳೂರು: ಅಶ್ಲೀಲ ವಿಡಿಯೋ ಹರಿಬಿಟ್ಟ ಕಾರಣದಿಂದ ವೈದ್ಯನ ಕೊಲೆ ಸಂಬಂಧ ಆತನ ಮಾಜಿ ಪ್ರೇಯಸಿಯನ್ನು ಬಂಧಿಸಿರುವ ಬೇಗೂರು ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಅಸಲಿ ಸತ್ಯ ಬಯಲಾಗಿದೆ.
ವೈದ್ಯ ವಿಕಾಸ್ ಪ್ರೀತಿಸುತ್ತಿದ್ದ ಪ್ರತಿಭಾ ಎಂಬ ಯುವತಿಗೆ ಮತ್ತೊಬ್ಬನ ಮೇಲೆ ಪ್ರೇಮಾಂಕುರವಾಗಿದ್ದು ಇದನ್ನು ತಿಳಿದು ಕೋಪಗೊಂಡ ವಿಕಾಸ್, ಪ್ರತಿಭಾಳ ಜೊತೆಗಿನ ಸಲುಗೆಯ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟಿದ್ದಾನೆ.
ಇದರಿಂದ ಆಕ್ರೋಶಗೊಂಡ ಪ್ರತಿಭಾ, ವಿಕಾಸ್ ನನ್ನು ಮುಗಿಸಿಬಿಡುವ ಹಂತಕ್ಕೆ ಹೋಗಿ ಸಂಚು ರೂಪಿಸಿ ವಿಕಾಸ್ ನನ್ನು ಮನೆಯಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ. ಪರಿಣಾಮವಾಗಿ ವಿಕಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ ಕೊಲೆ ಪ್ರಕರಣ ಇದಾಗಿದೆ.
ವಿಕಾಸ್ ಮತ್ತು ಪ್ರತಿಭಾ ಪರಸ್ಪರ ಪ್ರೀತಿಸುತ್ತಿದ್ದರು. ಕಾಲ ಉರುಳಿದಂತೆ ಪ್ರತಿಭಾಗೆ ಸುಶೀಲ್ ಎಂಬವನ ಮೇಲೆ ಪ್ರೇಮಾಂಕುರವಾಗುತ್ತದೆ. ಇದೇ ಪ್ರೀತಿ ದೈಹಿಕ ಸಂಪರ್ಕದವರೆಗೂ ಹೋಗಿದೆ. ಇವರ ಕಳ್ಳಾಟ ಪ್ರಿಯತಮ ವಿಕಾಸ್ ಗೆ ತಿಳಿದಾಗ ಅವರ ನಡುವೆ ಜಗಳವೂ ನಡೆಯುತ್ತದೆ. ಇಷ್ಟಾದರೂ ಮಾತು ಕೇಳದ ಪ್ರತಿಭಾಳ ಜೊತೆಗಿನ ಖಾಸಗಿ ಫೋಟೋ, ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾನೆ. ಅಂದಿನಿಂದ ಪ್ರತಿಭಾ ವಿಕಾಸ್ ನನ್ನು ಮುಗಿಸಲು ಸಂಚು ರೂಪಿಸುತ್ತಾಳೆ.
ಪ್ರತಿಭಾಳ ಸಂಚಿಗೆ ಪ್ರಿಯಕರ ಸುಶೀಲ್ ಕೂಡ ಕೈ ಜೋಡಿಸಿದ್ದು, ಅಂದುಕೊಂಡಂತೆ ತಮ್ಮ ಸಹಚರರೊಂದಿಗೆ ಸೇರಿಕೊಂಡು ವಿಕಾಸ್ ನನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸುತ್ತಾರೆ. ಗಂಭೀರವಾಗಿ ಏಟು ತಿಂದ ವಿಕಾಸ್ ಸಾವನ್ನಪ್ಪುತ್ತಾನೆ. ಸದ್ಯ ಪ್ರಕರಣ ಸಂಬಂಧ ಸುಶೀಲ್, ಗೌತಮ್, ಪ್ರತಿಭಾ, ಸೂರ್ಯ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಡಿಜಿಟಲ್ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.