ಬೆಂಗಳೂರು: ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದು ಜಗತ್ತಿನಾದ್ಯಂತ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಪ್ರಶಾಂತ್ ನೀಲ್ ನಿರ್ದೇಶನ ಮತ್ತು ಯಶ್ ಅಭಿನಯದ ಪ್ರತಿಯೊಂದು ಅಂಶಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು ಕೆಜಿಎಫ್ ಚಾಪ್ಟರ್ 2 ರ ಎಡಿಟರ್ ಉಜ್ವಲ್ ಕುಲಕರ್ಣಿಗೆ ಕೇವಲ 19 ವರ್ಷ ಎಂಬುದು ಚಿತ್ರದ ಮತ್ತೊಂದು ಕುತೂಹಲಕಾರಿ ವಿಷಯವಾಗಿದೆ.
ಇದಕ್ಕೂ ಮೊದಲು ಯಾವುದೇ ವೈಶಿಷ್ಟ್ಯ-ಉದ್ದದ ಚಲನಚಿತ್ರವನ್ನು ಸಂಪಾದಿಸದ 19 ರ ಹರೆಯದ ಉಜ್ವಲ್ ಬರಿಯ ಯೂಟೂಬ್ ಮತ್ತು ಕಿರುಚಿತ್ರಗಳಲ್ಲಷ್ಟೇ ಕಾರ್ಯ ನಿರ್ವಹಿಸಿದ್ದರು. ಯೂ ಟ್ಯೂಬ್ ನಲ್ಲಿ ಕಿರುಚಿತ್ರಗಳು ಮತ್ತು ಅಭಿಮಾನಿ-ನಿರ್ಮಿತ ಚಲನಚಿತ್ರಗಳನ್ನು ಸಂಪಾದಿಸಿರುವ ಅವರ ಹಿಂದಿನ ಕೆಲಸದಿಂದ ಪ್ರಭಾವಿತರಾದ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್, ಈ ಮೆಗಾ-ಬಜೆಟ್ ಚಿತ್ರವನ್ನು ಸಂಪಾದಿಸುವ ಜವಾಬ್ದಾರಿಯನ್ನು 19 ವರ್ಷದ ಯುವ ಸಂಪಾದಕರಿಗೆ ವಹಿಸಿದ್ದರು ಎನ್ನಲಾಗಿದೆ.
ಸಣ್ಣ ಪ್ರೊಜೆಕ್ಟ್ ನಂತರ ಇಂತಹ ಚಿಕ್ಕ ವಯಸ್ಸಿನಲ್ಲಿ ಕೆಜಿಎಫ್ ಎಂಬ ಈ ದೈತ್ಯ ಯೋಜನೆ ದೊರಕುವುದು ನಿಜಕ್ಕೂ ಪ್ರಶಂಸನೀಯ ಎಂಬ ಮಾತು ಸಾಮಾಜಿಕ ವಲಯದಲ್ಲಿ ಹರಿದಾಡುತ್ತಿದೆ. ಪ್ರಶಾಂತ್ ಇಡೀ ಚಿತ್ರವನ್ನು ಚಿತ್ರೀಕರಿಸಿದ ನಂತರ, ಉಜ್ವಲ್ ಸಂಪೂರ್ಣವಾಗಿ ಚಿತ್ರೀಕರಿಸಿದ ಚಿತ್ರದ ಟ್ರೈಲರ್ ಅನ್ನು ತಯಾರಿಸಿ ಅದನ್ನು ಪ್ರಶಾಂತ್ ಗೆ ತೋರಿಸಿದರು ಎಂದು ವರದಿಯಾಗಿದೆ. ಟ್ರೈಲರ್ ನಿಂದ ಪ್ರಶಾಂತ್ ಎಷ್ಟು ಪ್ರಭಾವಿತರಾದರೆಂದರೆ, ಅವರು ಇಡೀ ಚಿತ್ರವನ್ನು ಸಹ ಸಂಪಾದಿಸಲು ಅವಕಾಶ ನೀಡಲು ನಿರ್ಧರಿಸಿದರು ಎಂದು ಪ್ರಶಾಂತ್ ಹೇಳಿಕೊಂಡಿದ್ದಾರೆ.