ಬೆಂಗಳೂರು: ನಮಗೆ ಬಂದ್ ಬೇಕಿಲ್ಲ, ಶಾಂತಿ ಸೌಹಾರ್ದತೆ, ಸಹಬಾಳ್ವೆ ಬೇಕು ಎಂದು ನನಗೆ ಸಹಕರಿಸಿ ಬೆಂಬಲ ಸೂಚಿಸಿರುವ ಚಾಮರಾಜಪೇಟೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಆಟದ ಮೈದಾನದ ಹೆಸರಿನಲ್ಲಿ ಇಲ್ಲಸಲ್ಲದ ಸುಳ್ಳು ವದಂತಿ ಹಬ್ಬಿಸಿ, ಬಂದ್ ಗೆ ಕರೆ ನೀಡಿರುವ ಕಿಡಿಗೇಡಿಗಳ ಬೇಳೆ ಬೇಯಲು ಚಾಮರಾಜಪೇಟೆ ಕ್ಷೇತ್ರದ ಜನತೆ ಅವಕಾಶ ನೀಡುವುದಿಲ್ಲ. ನಮಗೆ ಬಂದ್ ಬೇಕಿಲ್ಲ. ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಗೆ ನಾವು ಆದ್ಯತೆ ನೀಡುತ್ತೇವೆ. ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂದು ನನಗೆ ಸಹಕರಿ, ಬೆಂಬಲ ಸೂಚಿರುವುದಕ್ಕಾಗಿ ನನ್ನ ಕ್ಷೇತ್ರದ ಜನತೆಗೆ ಹೃದಯಪೂರ್ವಕ ಧನ್ಯವಾದಗಳು ಎಂದು ತಿಳಿಸಿದರು.
ಚಾಮರಾಜಪೇಟೆಯ ವೆಂಕಟರಾಮ್ ಕಲಾ ಭವನದಲ್ಲಿ ಇಂದು ನಡೆದ ಚಾಮರಾಜಪೇಟೆ ನಾಗರೀಕರ ಶಾಂತಿ ಸೌಹಾರ್ದತೆ ಸಭೆಯಲ್ಲಿ ಮಾತನಾಡಿದ ಅವರು, ಆಟದ ಮೈದಾನ ಇಂದು, ನಿನ್ನೆಯದಲ್ಲ. ನಾನು ಹುಟ್ಟುವ ಮೊದಲಿನಿಂದಲೂ ಅಲ್ಲಿ ಮೈದಾನ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ. ಅದನ್ನು ತೆಗೆಯುತ್ತೇವೆ ಎಂದು ಹೇಳಿದವರು ಯಾರು? ಈ ಕ್ಷೇತ್ರದ ಶಾಸಕನಾದ ನಾನಾಗಲೀ, ಪಾಲಿಕೆ ಆಯುಕ್ತರಾಗಲೀ, ವಕ್ಫ್ ಮಂಡಳಿ ಆಗಲೀ ಅಥವಾ ಇಲ್ಲಿನ ಪಾಲಿಕೆ ಸದಸ್ಯರಾಗಲೀ ಆ ಕುರಿತು ಚಿಂತಿಸಿಯೂ ಇಲ್ಲ. ಮಾತನಾಡಿಯೂ ಇಲ್ಲ. ಹಾಗಿದ್ದ ಮೇಲೆ ಬಂದ್ ಗೆ ಕರೆ ನೀಡುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದರು.
ಅಷ್ಟಕ್ಕೂ ‘ಆಟದ ಮೈದಾನ ಉಳಿಸಿ’ ಎಂದು ಇಲ್ಲದ ವದಂತಿ ಹಬ್ಬಿಸಿ 12ನೇ ತಾರೀಖು ಬಂದ್ ಗೆ ಕರೆ ನೀಡಿರುವ ಕಿಡಿಗೇಡಿಗೇಡಿಗಳಿಗೆ ನಾನು ಕೇಳಲು ಬಯಸುವುದೇನೆಂದರೆ, ಈಗ ಆಟದ ಮೈದಾನ ಎಲ್ಲಿ ಹೋಗಿದೆ? ನಾನು ಅಧಿಕಾರದಲ್ಲಿರುವವರೆಗೆ ಮೈದಾನ ತೆಗೆಯುವ ಪ್ರಶ್ನೆಯೇ ಇಲ್ಲ. ವಿಕೃತ ಮನಸಿನವರು ಈ ರೀತಿ ವಿಷ ಬೀಜ ಬಿತ್ತಿ ಅಶಾಂತಿ ಸೃಷ್ಟಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನ ಕ್ಷೇತ್ರದ ಜನತೆ ಅವಕಾಶ ಕೊಡುವುದಿಲ್ಲ. ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ. ಕಿಡಿಗೇಡಿಗಳ ಬಂದ್ ಗೆ ನಮ್ಮ ಬೆಂಬಲ ಇಲ್ಲ ಎಂದು ನನಗೆ ಸಹರಿಸಿದ ಚಾಮರಾಜಪೇಟೆಯ ಜನರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಖಾನ್, ಹಲವಾರು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮತ್ತು ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು.