ದುಷ್ಟ ಶಕ್ತಿ ಬಿಡಿಸುವ ದುಸ್ಸಾಹಸ; ಅಪ್ರಾಪ್ತ ಮಗಳನ್ನು ಕೊಂದ ಪೋಷಕರು ಪೊಲೀಸ್ ಬಲೆಗೆ

Prasthutha|

ಹೊಸದಿಲ್ಲಿ: ಮಗಳ ಮೇಲೆ ದುಷ್ಟ ಶಕ್ತಿಯಿದೆ ಎಂದು ನಂಬಿದ ಪೋಷಕರು, ಅದನ್ನು ಓಡಿಸಲು ತಮ್ಮ ಐದು ವರ್ಷದ ಅಪ್ರಾಪ್ತ ಮಗಳನ್ನು ಹೊಡೆದು ಕೊಲೆಗೈದ ದಾರುಣ ಘಟನೆ ನಿನ್ನೆ ಮಧ್ಯರಾತ್ರಿ ನಾಗ್ಪುರದ  ಸುಭಾಷ್ ನಗರದಲ್ಲಿ ನಡೆದಿದೆ.

- Advertisement -

ಪ್ರಕರಣಕ್ಕೆಸಂಬಂಧಿಸಿ  ಆರೋಪಿಗಳಾದ ಮಗುವಿನ ತಂದೆ ಸಿದ್ಧಾರ್ಥ್ ಚಿಮ್ನೆ(45), ತಾಯಿ ರಂಜನಾ(42) ಮತ್ತು ಚಿಕ್ಕಮ್ಮ ಪ್ರಿಯಾ ಬನ್ಸೋದ್(32) ಎಂಬವರನ್ನು ಬಂಧಿಸಿದ್ದಾರೆ.

ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ  ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ಯೂಟ್ಯೂಬ್ನುಲ್ಲಿ ಸ್ಥಳೀಯ ಸುದ್ದಿ ವಾಹಿನಿ  ನಡೆಸುತ್ತಿರುವ  ಸಿದ್ಧಾರ್ಥ್ ಚಿಮ್ನೆ, ಕಳೆದ ತಿಂಗಳು ಗುರು ಪೂರ್ಣಿಮಾದಂದು ತನ್ನ ಪತ್ನಿ ಮತ್ತು 5 ಮತ್ತು 16 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್ಘಾಮಟ್ ಪ್ರದೇಶದ ದರ್ಗಾಕ್ಕೆ ಹೋಗಿದ್ದ. ಈ ಮಧ್ಯೆ  ತನ್ನ ಕಿರಿಯ ಮಗಳ ವರ್ತನೆಯ ಬದಲಾವಣೆಗಳನ್ನು ಅನುಮಾನಿಸಿದ ಈತ ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾಳೆ ಎಂದು ನಂಬಿದ್ದ. ಈ ಹಿನ್ನೆಲೆಯಲ್ಲಿ ದುಷ್ಟ ಶಕ್ತಿಯನ್ನು ಓಡಿಸಲು ಇಂತಹ ಅಮಾನವೀಯ ಕೃತ್ಯ ಎಸಗಿದ್ದಾನೆ  ಎಂದು ತಿಳಿಸಿದ್ದಾರೆ.

- Advertisement -

ರಾತ್ರಿಯಿಡೀ ಪೋಷಕರು ಮತ್ತು ಚಿಕ್ಕಮ್ಮ ಬಾಲಕಿಗೆ ಚೆನ್ನಾಗಿ ಹೊಡೆದುದನ್ನು ಚಿತ್ರೀಕರಿಸಿದ ದೃಶ್ಯ  ಪೊಲೀಸರಿಗೆ ಸಿಕ್ಕಿದ್ದು, ಆರೋಪಿಗಳು ಬಾಲಕಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಆದರೆ ಆ ಪುಟ್ಟ ಬಾಲಕಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ  ಅದಕ್ಕೆ ಉತ್ತರಿಸಲಿಲ್ಲ. ಈ ವೇಳೆ ಮೂವರು ಆರೋಪಿಗಳು ಮಗುವಿನ ಕಪಾಳಕ್ಕೆ ಹೊಡೆದು ತೀವ್ರವಾಗಿ ಥಳಿಸಿದ್ದಾರೆ. ಇದರಿಂದಾಗಿ ಬಾಲಕಿ ಪ್ರಜ್ಞಾಹೀನಳಾಗಿ ನೆಲದ ಮೇಲೆ ಕುಸಿದು ಬಿದ್ದಿದ್ದಾಳೆ ಎಂದು ವಿವರಿಸಿದ್ದಾರೆ.

ಆರೋಪಿಗಳು ಶನಿವಾರ ಬೆಳಗ್ಗೆ ಮಗುವನ್ನು ದರ್ಗಾಕ್ಕೆ ಕರೆದೊಯ್ದ ಬಳಿಕ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಓಡಿ ಹೋಗಿದ್ದಾರೆ. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಅನುಮಾನಗೊಂಡು ಅವರ ಕಾರಿನ ಫೋಟೋ ಕ್ಲಿಕ್ಕಿಸಿದ್ದಾರೆ. ನಂತರ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದ  ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿದ್ದು, ಕಾರಿನ ಫೋಟೋದಿಂದ ಆರೋಪಿಗಳನ್ನು ಗುರುತಿಸಲಾಗಿದೆ. ರಾಣಾ ಪ್ರತಾಪ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಗಳ ಮನೆಗೆ ತಲುಪಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

Join Whatsapp