ತ್ರಿಶೂರ್: ಯುವಕನ ಕಷ್ಟಕ್ಕೆ ಮರುಗಿದ ಸಚಿವೆಯೊಬ್ಬರು ತಮ್ಮ ಬಂಗಾರದ ಬಳೆಯನ್ನು ನೀಡುವ ಮೂಲಕ ನೆರವಾಗಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗುತ್ತಿದೆ ನೆಟ್ಟಿಗರು ಪ್ರಶಂಸೆಯ ಪ್ರವಾಹವನ್ನೇ ಹರಿಸಿದ್ದಾರೆ.
ಜೀವಂತ ಉಳಿಯಬೇಕಾದರೆ ಕಿಡ್ನಿ ಮರುಜೋಡಣೆ ಮಾಡಿಸಿಕೊಳ್ಳಲೇಬೇಕಾದ ಸ್ಥಿತಿಯಲ್ಲಿದ್ದ ವ್ಯಕ್ತಿಯ ಕಷ್ಟವನ್ನು ಗಮನಿಸಿದ ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ರವರು ತಮ್ಮ ಒಂದು ಬಂಗಾರದ ಬಳೆಯನ್ನೇ ಬಿಚ್ಚಿಕೊಟ್ಟಿದ್ದಾರೆ. ಮೊದಲ ದೇಣಿಗೆಯಾಗಿ ಸ್ವೀಕರಿಸಬೇಕೆಂದು ಕೇಳಿಕೊಂಡಿದ್ದಾರೆ. ಇದು ಭಾರೀ ಜನಮೆಚ್ಚುಗೆ ಪಡೆದಿದೆ.
ಈ ಘಟನೆ ನಡೆದಿದ್ದು ತ್ರಿಶೂರಿನ ಇರಿಂಜಾಲಕುಡದಲ್ಲಿ ಪ್ರದೇಶದಲ್ಲಿ. ಅಲ್ಲಿನ ವೈದ್ಯಕೀಯ ನೆರವು ಸಮಿತಿ ಕಿಡ್ನಿ ಮರುಜೋಡಣೆಗಾಗಿ ಒಂದು ಸಭೆ ನಡೆಸಿತ್ತು. ಅದರಲ್ಲಿ ಬಿಂದು ಅವರು ಪಾಲ್ಗೊಂಡಿದ್ದರು. ಈ ವೇಳೆ 27 ವರ್ಷದ ವಿವೇಕ್ ಪ್ರಭಾಕರ್ ಅವರ ದುಸ್ಥಿತಿಯನ್ನು ಗಮನಿಸಿದ ಕೂಡಲೇ ಅವರು ತಮ್ಮ ಬಳೆಯನ್ನು ಬಿಚ್ಚಿ ಕೊಟ್ಟಿದ್ದಾರೆ.
ಬಹಳಷ್ಟು ರಾಜಕಾರಣಿಗಳು ಕೇವಲ ಆಶ್ಚಾಸನೆ ನೀಡಿ, ನಂತರ ಶಿಫಾರಸ್ಸು ಮಾಡುತ್ತೇನೆ ಎಂದು ಹೇಳುವುದರ ನಡುವೆಯೇ ಸಚಿವೆ ಆರ್. ಬಿಂದು ರವರ ಮಾನವೀಯತೆಯ ನಡೆ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಇದು ಬರೀ ಕೇರಳಕ್ಕೆ ಮಾತ್ರವಲ್ಲ, ದೇಶದ ಇತರೆ ಭಾಗದ ಜನತೆಗೂ ಮಾದರಿಯಾಗಿದೆ ಎಂದು ನೆಟ್ಟಿಗರು ಆಡಿಕೊಳ್ಳುತ್ತಿದ್ದಾರೆ.