ಯಾವುದೇ ಕಾರಣಕ್ಕೂ ಜೆಡಿಎಸ್ ಬಿಡುವುದಿಲ್ಲ, ಕುಮಾರಸ್ವಾಮಿ ಅವರನ್ನು ಸಿಎಂ ಮಾಡದೇ ಬಿಡುವುದಿಲ್ಲ ಎಂದ ಜಿ.ಟಿ. ದೇವೇಗೌಡ

Prasthutha|

ಮೈಸೂರು: ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರು ಇಂದು ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರ ಮನೆಗೆ ಭೇಟಿ ನೀಡಿದ್ದಾರೆ.

- Advertisement -

ಮೈಸೂರಿನಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ಕಾರ್ಯಗಾರದಲ್ಲಿ ಪಾಲ್ಗೊಂಡ ನಂತರ ನೇರವಾಗಿ ಒಂಟಿಕೊಪ್ಪಲ್ ನಲ್ಲಿರುವ ಜಿ.ಟಿ. ದೇವೇಗೌಡರ ಮನೆಗೆ ಹೆಚ್.ಡಿ. ದೇವೇಗೌಡ ಅವರು ಆಗಮಿಸಿದ್ದಾರೆ. ಮನೆಗೆ ಬಂದ ಮಾಜಿ ಪ್ರಧಾನಿಗಳನ್ನು ಜಿ.ಟಿ. ದೇವೇಗೌಡರು ಕುಟುಂಬ ಸಮೇತರಾಗಿ ಆತ್ಮೀಯವಾಗಿ ಬರ ಮಾಡಿಕೊಂಡರು. ಬಳಿಕ ಕೆಲ ಹೊತ್ತು ಅವರ ಮನೆಯಲ್ಲೇ ಇದ್ದ ಹೆಚ್.ಡಿ. ದೇವೇಗೌಡರು, ಜಿಟಿ ದೇವೇಗೌಡರು, ಮತ್ತವರ ಕುಟುಂಬ ಸದಸ್ಯರ ಜತೆ ಕುಶಲೋಪರಿ ನಡೆಸಿದರು.

ಈ ಸಂದರ್ಭದಲ್ಲಿ ತೀವ್ರ ಭಾವೋದ್ವೇಗಕ್ಕೆ ಒಳಗಾದ ಜಿ.ಟಿ. ದೇವೇಗೌಡರು, ಗಳಗಳನೆ ಕಣ್ಣೀರಿಟ್ಟಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ದೇವೇಗೌಡ ಅವರು, ಜಿ.ಟಿ. ದೇವೇಗೌಡರನ್ನು ಮರಿ ದೇವೇಗೌಡ ಎಂದು ಕರೆಯುತ್ತೇನೆ. ನಾನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸಾ.ರಾ. ಮಹೇಶ್ ಬರುವ ಮೊದಲು ಜಿ.ಟಿ. ದೇವೇಗೌಡರು ನಮ್ಮ ಜತೆಯಲ್ಲಿ ಇದ್ದರು. ಜಿಟಿಡಿ ಬೆಳೆಯಲು ಬಿಡಬಾರದು ಎಂದು ಎಂಪಿ ಚುನಾವಣೆಯಲ್ಲಿ ಸೋಲಿಸಿದರು. ಹಾಗೆ ಸೋಲಿಗೆ ಕಾರಣರಾದವರು ಈಗ ನಮ್ಮ ಜತೆಯಲ್ಲಿ ಇಲ್ಲ ಎಂದು ಮಾಜಿ ಪ್ರಧಾನಿಗಳು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದರು.

- Advertisement -

ಜಿಟಿಡಿ ಬೆಳೆಯಲು ಬಿಟ್ಟರೆ ಆಕ್ರಮಣ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿ ಅವರ ಬೆಳವಣಿಗೆಯನ್ನು ತಡೆಯಲು ಪ್ರಯತ್ನ ಮಾಡಿದರು. ಎಲ್ಲವನ್ನೂ ತಿಳಿದುಕೊಂಡೆ ಜಿಟಿಡಿ ಮನೆಗೆ ಬಂದಿದ್ದೇನೆ. ಇವತ್ತು ನನಗೆ ಸಂತೋಷವಾಗಿದೆ. ಒಗ್ಗಟ್ಟಾಗಿ ಇರಬೇಕು. ಸಮಯ ಬಂದಿದೆ, ಎಲ್ಲಾ ಒಗ್ಗಟ್ಟಾಗಿ ಸೇರಿದ್ದೇವೆ, ತುಂಬಾ ಸಂತೋಷದ ವಿಷಯ ಇದು ಎಂದರು.

ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಎದುರಾಳಿಯನ್ನು ಎದುರಿಸುವ ಶಕ್ತಿ ಇದೆ. ಆ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಬಳಿಕ ಮಾತನಾಡಿದ ಜಿ.ಟಿ. ದೇವೇಗೌಡರು, ಹೆಚ್.ಡಿ. ದೇವೇಗೌಡರಿಗೆ ನನ್ನ ಬಗ್ಗೆ ಪ್ರೀತಿ ಇದೆ, ಮರಿ ದೇವೇಗೌಡ ಎಂದು ನನ್ನನ್ನು ಕರೆಯುತ್ತಿದ್ದರು. ಜಿಟಿಡಿ ಬಿಟ್ಟು ಹೋಗಲ್ಲ ಜೆಡಿಎಸ್ ಪಕ್ಷದಲ್ಲೆ ಇರುತ್ತಾನೆ ಎಂದು ಹೆಚ್.ಡಿ. ದೇವೇಗೌಡರು ಹೇಳಿದರು. ಅವರಿಗೆ ನನ್ನ ಮೇಲೆ ಇರುವ ವಿಶ್ವಾಸಕ್ಕೆ ಮನಸ್ಸು ತುಂಬಿ ಬಂದಿದೆ ಎಂದರು.


ಹಿಂದೆ ಹಲವು ಸ್ಥಾನಮನವನ್ನು ಮಾಜಿ ಪ್ರಧಾನಿಗಳು ನನಗೆ ನೀಡಿದ್ದರು. ಮೂರು ವರ್ಷ ದೂರ ಇದ್ದರೂ ನನ್ನ ಬಗ್ಗೆ ಅವರಲ್ಲಿನ ಪ್ರೀತಿ ಕಡಿಮೆ ಆಗಿರಲಿಲ್ಲ. ಎಂದೂ ನನ್ನ ಬಗ್ಗೆ ಲಘುವಾಗಿ ಒಂದು ಮಾತನ್ನೂ ಆಡಲಿಲ್ಲ. ಅವರು, ಪ್ರಾದೇಶಿಕ ಪಕ್ಷ ಕಟ್ಟಿ ಉಳಿಸಿ ಬೆಳೆಸಿದರು. ಹೆಚ್.ಡಿ. ದೇವೇಗೌಡರು ಕಂಡ ಕನಸನ್ನು ನನಸು ಮಾಡುತ್ತೇನೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ಮಾತನಾಡುತ್ತಲೇ ಭಾವುಕರಾದ ಜಿ.ಟಿ. ದೇವೇಗೌಡರು ಬಿಕ್ಕಿಬಿಕ್ಕಿ ಕಣ್ಣೀರಿಟ್ಟರು.


ದೊಡ್ಡವರು ನನ್ನನ್ನು ಪ್ರೀತಿಯ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ನಾನು ಜೆಡಿಎಸ್ ನಲ್ಲಿ ಉಳಿಯುತ್ತೇನೆ. ಯಾವುದೇ ತ್ಯಾಗ ಮಾಡಲು ಸಿದ್ದನಿದ್ದೇನೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆ. ಅದಕ್ಕಾಗಿ ದುಡಿಯುತ್ತೇನೆ. ಈಗ ನಮ್ಮಲ್ಲಿ ಯಾವುದೇ ಮುನಿಸು ಇಲ್ಲ. ಒಂದೇ ಒಂದು ದಿನ ಪಕ್ಷಕ್ಕೆ ಕಳಂಕ ಅಥವಾ ಧಕ್ಕೆ ತರುವ ಕೆಲಸ ಮಾಡಿಲ್ಲ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರುವಂತೆ ಕರೆದಿದ್ದರು. ಬಿಜೆಪಿಯವರೂ ಕರೆದಿದ್ದಾರೆ. ಆದರೆ ನಾನು ಜೆಡಿಎಸ್ ಬಿಟ್ಟು ಹೋಗಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಸಾ.ರಾ.ಮಹೇಶ್, ಸಿ.ಎಸ್. ಪುಟ್ಟರಾಜು ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಹಾಜರಿದ್ದರು.



Join Whatsapp