ಜನಪ್ರತಿನಿಧಿಗಳ ಬೇಜವಾಬ್ದಾರಿತನ; ಸಂಚಾರಯೋಗ್ಯ ರಸ್ತೆಯಿಲ್ಲದೇ ಪರದಾಡುತ್ತಿರುವ ಗ್ರಾಮಸ್ಥರು

Prasthutha|

ಕಳಸ: ಜನರು ನಿತ್ಯ ಸಂಚಾರ ಮಾಡಲು ಸರಿಯಾದ ರಸ್ತೆ ಇಲ್ಲದೇ ಪರದಾಡುವ ಸ್ಥಿತಿ ಉಂಟಾಗಿದ್ದು, ಸಂಚಾರಯೋಗ್ಯವಾದ ರಸ್ತೆ ಕಲ್ಪಿಸುವಂತೆ ತಾಲೂಕಿನ ಹೊಸೂರು ಗ್ರಾಮದ ಜನರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

- Advertisement -


ಹೊಸೂರು ಗ್ರಾಮದ ಜನ ತಮ್ಮ ಊರಿಗೆ ತಾವೇ ರಸ್ತೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಮಳೆಗಾಲದಲ್ಲಿ ಇಲ್ಲಿನ ರಸ್ತೆ ಕೊಚ್ಚಿ ಹೋಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ, ಈ ರಸ್ತೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಜನರು ಒತ್ತಾಯ ನಡೆಸುತ್ತಿದ್ದರೂ, ಅಧಿಕಾರಿಗಳು ಈ ಬಗ್ಗೆ ಯಾವುದೇ ಪರಿಹಾರ ಕ್ರಮ ಅಥವಾ ವ್ಯವಸ್ಥೆಗಳನ್ನು ಕಲ್ಪಿಸದೇ ಅಸಡ್ಡೆ ತೋರುತ್ತಿದ್ದಾರೆ.


ಸುಮಾರು 25 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಬಹುತೇಕರು ಆದಿವಾಸಿಗಳು. ಭಾರಿ ಮಳೆಗೆ ಸುತ್ತಮುತ್ತಲಿನ ಗುಡ್ಡದ ಮಣ್ಣು ಕುಸಿದು ರಸ್ತೆಯೇ ಇಲ್ಲದಂತಾಗುತ್ತದೆ.

- Advertisement -


ಹೊಸೂರು ಗ್ರಾಮದಿಂದ ಮುಖ್ಯ ರಸ್ತೆಗೆ ಸುಮಾರು ನಾಲ್ಕೈದು ಕಿಮೀ ದೂರವಿದ್ದು, ಇಲ್ಲಿನ ಜನರು ನಡೆದುಕೊಂಡೇ ಹೋಗಬೇಕಾದ ಸ್ಥಿತಿ ಇದೆ. ಈ ಮಾರ್ಗ ಕಲ್ಕೋಡು, ಕಾರ್ಲೆ, ಅಬ್ಬಿಕೂಡಿಗೆ, ಹೊರನಾಡು ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆಯಾದರೂ ರಸ್ತೆ ಸರಿ ಪಡಿಸಲು ಜನಪ್ರತಿನಿಧಿಗಳು ಮುಂದೆ ಬಾರದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.


ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿರುವ ಗ್ರಾಮದ ಜನರು ತಾವು ಬೆಳೆದ ಭತ್ತ, ಅಡಕೆ, ಕಾಫಿ, ಮೆಣಸು ಮಾರುಕಟ್ಟೆಗೆ ಸಾಗಿಸಲು ಸರಿಯಾದ ರಸ್ತೆ ಇಲ್ಲದೆ ಕಿಮೀ ಗಳಷ್ಟು ದೂರ ಹೊತ್ತುಕೊಂಡು ಬರಬೇಕಾದ ಪರಿಸ್ಥಿತಿಯುಂಟಾಗಿದೆ.



Join Whatsapp