ನವದೆಹಲಿ: ಜಾರಿ ನಿರ್ದೇಶನಾಲಯವು ತನ್ನ 13 ಮೇ, 2022ರ ಪತ್ರಿಕಾ ಪ್ರಕಟನೆಯಲ್ಲಿ ಮಾಡಿದ ಪ್ರತಿಪಾದನೆಗಳನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ತಳ್ಳಿ ಹಾಕಿದ್ದಾರೆ.
ಜಾರಿ ನಿರ್ದೇಶನಾಲಯವು 13 ಮೇ, 2022ರಂದು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಪತ್ರಿಕಾ ಪ್ರಕಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ ಮತ್ತು ಏಜೆನ್ಸಿಯಿಂದ ಇತ್ತೀಚಿಗೆ ಬಂಧಿತರಾದ ಸಂಘಟನೆಯ ಇಬ್ಬರು ನಾಯಕರ ವಿರುದ್ಧದ ಪೂರಕ ಪ್ರಾಸಿಕ್ಯೂಷನ್ ದೂರುಗಳನ್ನು ದಾಖಲಿಸಿದೆ ಎಂದು ತಿಳಿಸಿದೆ. ಈ ಎಲ್ಲಾ ಆರೋಪಗಳನ್ನೂ ಪಾಪ್ಯುಲರ್ ಫ್ರಂಟ್ ತಳ್ಳಿ ಹಾಕುತ್ತದೆ. ಯಾವುದೇ ಸಂಬಂಧವಿರದ ಘಟನೆಗಳಲ್ಲಿ ಸಂಪರ್ಕ ಕಲ್ಪಿಸುವ ಮೂಲಕ ಈಡಿ ಪಾಪ್ಯುಲರ್ ಫ್ರಂಟ್ ವಿರುದ್ಧ ಕಲ್ಪಿತ ಕಥೆಯನ್ನು ಕಟ್ಟುತ್ತಿದೆ. ಪ್ರಸಕ್ತ ಪತ್ರಿಕಾ ಪ್ರಕಟನೆಯು ಪಾಪ್ಯುಲರ್ ಫ್ರಂಟ್, ಅದರ ನಾಯಕರು ಮತ್ತು ಸದಸ್ಯರನ್ನು ಕಿರುಕ್ಕೊಳಪಡಿಸಲು ತಯಾರಿಸಲಾದ ಅದೇ ಕಥೆಯ ಹೊಸ ರೂಪವಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನವರಿ 2022ರ ವೇಳೆ ಈಡಿ ಕೇರಳದ ಪಾಪ್ಯುಲರ್ ಫ್ರಂಟ್ ಸದಸ್ಯರ ಕಚೇರಿ ಮತ್ತು ನಿವಾಸಗಳ ದಾಳಿಯನ್ನು ನಡೆಸಿತ್ತು. ಈ ದಾಳಿಯಲ್ಲಿ ಅದಕ್ಕೆ ಏನೂ ದೊರಕಿರಲಿಲ್ಲ. ಈ ಒಟ್ಟು ಪ್ರಕ್ರಿಯೆಯು ರಾಜಕೀಯ ಪ್ರೇರಿತವಾಗಿತ್ತು. ಇದು ಬಿಜೆಪಿ ಸರಕಾರದಿಂದ ಸಂಘಟನೆಯ ವಿರುದ್ಧ ನಡೆಸಲಾದ ಬೇಟೆಯಾಡುವ ಕ್ರಮದ ಭಾಗವಾಗಿತ್ತು. ಪಿ.ಎಂ.ಎಲ್.ಎ ಪ್ರಕರಣ ಮತ್ತು ಎಲ್ಲಾ ಆರೋಪಗಳೂ ಕಪೋಲಕಲ್ಪಿತ ಎಂದು ಅರಿತಿರುವ ಹೊರತಾಗಿಯೂ, ಕಾನೂನುಬದ್ಧವಾಗಿ ಕಾರ್ಯಾಚರಿಸುವ ಸಂಘಟನೆಯಾಗಿ ಪಾಪ್ಯುಲರ್ ಫ್ರಂಟ್ ಮತ್ತು ಅದರ ಸದಸ್ಯರು ಎಲ್ಲಾ ತನಿಖೆಗಳಿಗೂ ಸಹಕರಿಸುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಮ್ಮ ಸದಸ್ಯ ಅಬ್ದುಲ್ ರಝಾಕ್ ಮತ್ತು ಕೇರಳ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಕೆ.ಅಶ್ರಫ್ ರ ನಂತರ ನಡೆದ ಬಂಧನಗಳು ಮುಂದುವರಿದ ಕಿರುಕುಳದ ಭಾಗವಾಗಿದೆ. ಅವರು ಸ್ವತಂತ್ರ ಉದ್ದಿಮೆದಾರರಾಗಿದ್ದಾರೆ ಮತ್ತು ಅವರು ಮುಸ್ಲಿಮರಾಗಿರುವುದು ಹಾಗೂ ಪಾಪ್ಯುಲರ್ ಫ್ರಂಟ್ ನ ಮಾನವೀಯ ಕಾರ್ಯಚಟುವಟಿಕೆಗಳಗೆ ಸಹಕಾರ ನೀಡಿರುವುದು ಹೊರತುಪಡಿಸಿದರೆ, ಅವರು ಯಾವುದೇ ಅಪರಾಧಗಳನ್ನು ನಡೆಸಿಲ್ಲ. ಈಡಿ ಪತ್ರಿಕಾ ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿರುವ ಮುನ್ನಾರ್ ವಿಲ್ಲಾ ವಿಸ್ತಾ ಪ್ರಾಜೆಕ್ಟ್ ಮತ್ತು ಯುಎಇಯಲ್ಲಿರುವ ದರ್ಬಾರ್ ರೆಸ್ಟೋರೆಂಟ್ ಗೆ ಪಾಪ್ಯುಲರ್ ಫ್ರಂಟ್ ನೊಂದಿಗೆ ಯಾವುದೇ ಸಂಬಂಧವಿಲ್ಲ. ಅವು ಕಾನೂನುಬದ್ಧವಾಗಿ ನಡೆಯುತ್ತಿರುವ ವ್ಯಾಪಾರೋದ್ಯಮಗಳಾಗಿವೆ. ಈ ತನಿಖೆಯ ಸೋಗಿನಲ್ಲಿ ಈಡಿ ಕಾನೂನುಬದ್ಧ ಮುಸ್ಲಿಮ್ ಉದ್ದಿಮೆದಾರರನ್ನು ಗುರಿಪಡಿಸುತ್ತಿದೆ.
ಅದರ ಕಥೆಯು ಕೋರ್ಟ್ ನಲ್ಲಿ ನಿಲ್ಲಲಾರದು ಎಂಬ ವಿಚಾರ ಈಡಿಗೆ ಚೆನ್ನಾಗಿ ತಿಳಿದಿದ್ದು, ಈ ನಿಟ್ಟಿನಲ್ಲಿ ಈ ಪತ್ರಿಕಾ ಪ್ರಕಟನೆಯು ಸಂಘಟನೆಯ ವರ್ಚಸ್ಸಿಗೆ ಕಳಂಕ ತರುವ ಉದ್ದೇಶವನ್ನು ಹೊಂದಿರುವುದು ಸ್ಪಷ್ಟವಾಗಿದೆ. ವಿಚಾರಣೆಗಳನ್ನು ಮತ್ತು ಏಜೆನ್ಸಿಯು ಬಂಧಿಸಿರುವ ಅಮಾಯಕರ ಬಂಧನವನ್ನು ವಿಸ್ತರಿಸುವ ಮೂಲಕ ಈಡಿ ಕಿರುಕುಳವನ್ನು ಮುಂದುವರಿಸಲು ಬಯಸುತ್ತದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
ಈ ಪ್ರಕರಣಗಳ ಮೂಲಕ ಪಾಪ್ಯುಲರ್ ಫ್ರಂಟನ್ನು ಬೆದರಿಸಲಾಗದು. ಕಾನೂನುಬದ್ಧವಾಗಿ ಕಾರ್ಯಾಚರಿಸುತ್ತಿರುವ ಸಂಘಟನೆಯನ್ನು ಏಜೆನ್ಸಿ ಗುರಿಪಡಿಸುತ್ತಿರುವುದು ಇದು ಮೊದಲೇನಲ್ಲ. ಏಜೆನ್ಸಿಯು ಅಧಿಕಾರದಲ್ಲಿರುವವರ ಕಿರುಕುಳ ನೀಡುವ ಅಸ್ತ್ರವಾಗಿ ಮಾರ್ಪಟ್ಟಿದೆ ಮತ್ತು ಇತರ ಹಲವಾರು ರಾಜಕೀಯ ಪಕ್ಷಗಳು ಮತ್ತು ನಾಯಕರೊಂದಿಗೂ ಅದು ಇದೇ ರೀತಿ ವ್ಯವಹರಿಸಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಕಿರುಕುಳವನ್ನು ಕಾನೂನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಹಾದಿಯಲ್ಲಿ ಎದುರಿಸಲಿದೆ ಎಂದು ಒಎಂಎ ಸಲಾಂ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.