ಫೇಸ್‌ ಬುಕ್‌ ನಲ್ಲಿ ಭಾರತೀಯ ಬಲಪಂಥೀಯರ ದ್ವೇಷಪೂರಿತ ಬರಹಗಳ ಹಿಂದೆ ಆರೆಸ್ಸೆಸ್

Prasthutha|

ಮೋದಿ ನೇತೃತ್ವದ ಬಿಜೆಪಿ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಸಾಂಪ್ರದಾಯಿಕ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ದೇಶದಲ್ಲಿ ದ್ವೇಷ ಬಿತ್ತುವ ಕೆಲಸವನ್ನು ಯಾವ ರೀತಿಯಲ್ಲಿ ವ್ಯವಸ್ಥಿತವಾಗಿ ಮಾಡುತ್ತಿವೆ ಎನ್ನುವುದನ್ನು ನಾವೆಲ್ಲ ಬಲ್ಲೆವು. ನಾಗರಿಕ ತಿದ್ದುಪಡಿ ಕಾನೂನಿನ ವಿರುದ್ಧದ ಪ್ರತಿಭಟನೆಗಳಿಂದ ಹಿಡಿದು ಇತ್ತೀಚಿನ ರೈತರ ಚಳುವಳಿಯವರೆಗೆ ಪ್ರತಿಭಟನಕಾರರನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತ ಸರಕಾರದ ಜನವಿರೋಧಿ ಕೃತ್ಯಗಳನ್ನು ಭಾರತೀಯ ಮಾಧ್ಯಮಗಳು ಬೆಂಬಲಿಸುತ್ತಲೇ ಬಂದಿವೆ. ಅಷ್ಟೇ ಅಲ್ಲದೆ, ಕೊರೋನಾ ಸಾಂಕ್ರಮಿಕ ರೋಗ ಹರಡಿದ್ದು ಕೂಡ ಅಲ್ಪಸಂಖ್ಯಾತ ಸಮುದಾಯದವರಿಂದ ಎನ್ನುವ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳು ಹರಡಿದ್ದು ನಾವು ನೋಡಿದ್ದೇವೆ. ವಿಚಿತ್ರ ಆಂಗಿಕ ಭಾಷೆಯ ಪ್ರದರ್ಶನ, ವಿಪರೀತ ಏರುಧ್ವನಿಯಲ್ಲಿ ಅನಗತ್ಯ ಅರಚಾಟ, ವಿರೋಧಿಗಳ ತೇಜೊವಧೆ ಇಂದಿನ ದೃಶ್ಯ ಮಾಧ್ಯಮಗಳ ಆಂಕರ್‌ ಗಳು ಯಾವ ನಾಚಿಕೆಯೂ ಇಲ್ಲದೆ ಮಾಡುತ್ತ ಬರುತ್ತಿರುವುದು ಸರ್ವೇಸಾಮಾನ್ಯವಾಗಿದೆ.

- Advertisement -

ಮೋದಿ ಸರಕಾರದ ದಮನಕಾರಿ ನೀತಿ ಮತ್ತು ದೇಶದ ಮಾಧ್ಯಮಗಳ ನಪುಂಸಕತ್ವದಿಂದ ಈ ದೇಶದ ಪ್ರಜ್ಞಾವಂತ ನಾಗರಿಕರು ತಮ್ಮ ಅಭಿವ್ಯಕ್ತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರದರ್ಶಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳ ಮೂಲಕವೇ ಅಧಿಕಾರಕ್ಕೆ ಬಂದಿರುವ ಮೋದಿ ಸರಕಾರ ಇಂದು ಅದೇ ಸೋಷಿಯಲ್‌ ಮೀಡಿಯಾಗಳನ್ನು ನಿಯಂತ್ರಿಸುವ ಮೂಲಕ ಜನರ ಅಭಿವ್ಯಕ್ತಿಗೆ ಸಂಚಕಾರ ತಂದಿರುವುದಷ್ಟೇ ಅಲ್ಲದೆ ದೇಶದಲ್ಲಿ ಕೋಮು ದ್ವೇಷವನ್ನು ವ್ಯವಸ್ಥಿತವಾಗಿ ಬಿತ್ತುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಪರಿಣಾಮಕಾರಿ ಆಗಿರುವ ಫೇಸ್‌ ಬುಕ್ ಅನ್ನು ಬಿಜೆಪಿ/ಸಂಘ ಪರಿವಾರ ವ್ಯವಸ್ಥಿತವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎನ್ನುವ ಅನುಮಾನಗಳು ದಟ್ಟವಾಗುತ್ತಿವೆ. ಅದಕ್ಕೆ ಪುಷ್ಟಿಯೊದಗಿಸುವಂತೆ ಇತ್ತೀಚೆಗೆ ಫೇಸ್‌ ಬುಕ್ ವಿಷ್ಟರ್ ಬ್ಲೋವರ್ ಎಂಬ ಶೀರ್ಷಿಕೆಯಲ್ಲಿ ಫೇಸ್ ಬುಕ್ ಮಾಜಿ ಉದ್ಯೋಗಿ ಫ್ರಾನ್ಸಿಸ್ ಹೌಗೆನ್ ಅವರು ಬಹಿರಂಗಪಡಿಸಿದ ಸ್ಫೋಟಕ ಸುದ್ದಿ ವಿಶ್ವದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿಸಿದೆ.ಈ ಸುದ್ದಿಯು ಭಾರತದಲ್ಲಿ ವಿಘಟನೆ ಹಾಗು ಜನಾಂಗೀಯ ದ್ವೇಷ ಹರಡುವ ಕುರಿತು ಅನೇಕ ಉಲ್ಲೇಖಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಗಳು ಫೇಸ್‌ ಬುಕ್ ಮೂಲಕ ಕೋಮು ದ್ವೇಷ ಹರಡುವ ಕಾರ್ಯಗಳ ಬಗ್ಗೆ ಹೌಗೆನ್ ಪ್ರಮುಖ ಟಿಪ್ಪಣಿ ಎಂದರೆ; ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ ಎಸ್‌ ಎಸ್)ಸಂಬಂಧಿಸಿದ ಫೇಸ್ ಬುಕ್ ಪೇಜುಗಳು ಜನರಲ್ಲಿ ಭಯ ಹುಟ್ಟಿಸುವಿಕೆ, ಮುಸ್ಲಿಂ ವಿರೋಧಿ ಭಾವನೆ ಕೆರಳಿಸುವ ಬರಹಗಳು ಭಾರತೀಯ ವಿವಿಧ ಭಾಷಾ ಎಡಿಟರ್‌ ಗಳ ಕೊರತೆಯಿಂದಾಗಿ ಫೇಸ್‌ಬುಕ್ ಅನ್ನು ಒಂದು ವೇದಿಕೆಯಾಗಿ ಬಳಸುತ್ತಿವೆ ಎನ್ನುವುದು. ಈ ಪೇಜುಗಳು ಮತ್ತು ವೈಯಕ್ತಿಕ ಖಾತೆಗಳು ಬಿಜೆಪಿ ಬೆಂಬಲಿಗರಿಗೆ ಸೇರಿದ ಏಕ ಬಳಕೆದಾರರ ಬಹು ಖಾತೆಗಳಾಗಿದ್ದು ಇವು ಭಾರತೀಯ ಮುಸ್ಲಿಮರ ಬಗ್ಗೆ ದ್ವೇಷ ಕಾರುತ್ತಿವೆ ಎನ್ನುವುದು ಆಕೆಯ ಪ್ರಮುಖ ಆರೋಪವಾಗಿದೆ. ಮಾಜಿ ಫೇಸ್‌ ಬುಕ್ ದತ್ತಾಂಶ ವಿಜ್ಞಾನಿ ಹೌಗೆನ್ ಇತ್ತೀಚೆಗೆ ಯುಎಸ್ ಕಾಂಗ್ರೆಸ್ ಮತ್ತು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ ಚೇಂಜ್ ಕಮಿಷನ್ (ಎಸ್‌ ಇಸಿ)ಗೆ ನೀಡಿರುವ ಹೇಳಿಕೆಯಲ್ಲಿ ಭಾರತವೂ ಸೇರಿದಂತೆ ಜಾಗತಿಕ ಸಾಮಾಜಿಕ ಮಾಧ್ಯಮ ಬೃಹತ್ ಪ್ರಮಾಣದಲ್ಲಿ ಜಾಗತಿಕ ವಿಘಟನೆ ಮತ್ತು ಜನಾಂಗೀಯ ಹಿಂಸೆಯನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿರುವ ಕುರಿತು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

- Advertisement -

ಫೇಸ್‌ ಬುಕ್‌ ನಲ್ಲಿ ದ್ವೇಷಪೂರಿತ ಬರಹ/ಭಾಷಣಗಳನ್ನು ಪತ್ತೆಹಚ್ಚಲು ಕಂಪನಿಯು ಗಮನಾರ್ಹ ಹೂಡಿಕೆಯನ್ನು ಮಾಡಿದ್ದು, ಅದರ ಪರಿಣಾಮವಾಗಿ ಆ ರೀತಿಯ ಘಟನೆಗಳು ಈಗ ತೀವ್ರವಾಗಿ ಕಡಿಮೆಯಾಗಿದೆ ಎಂದು ಫೇಸ್‌ ಬುಕ್ ವಕ್ತಾರರೊಬ್ಬರು ದಿ ಟೆಲಿಗ್ರಾಫ್ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ ಎಂದು ಕೂಡ ವರದಿಗಳು ಸ್ಪಷ್ಟಪಡಿಸಿವೆ. 37 ವರ್ಷ ವಯಸ್ಸಿನ ಹೌಗೆನ್ ಅವರು ಕಳೆದ ಮೇ ತಿಂಗಳಲ್ಲಿ ಜಾಗತಿಕ ಬೃಹತ್ ಸಾಮಾಜಿಕ ಮಾಧ್ಯಮ ಸಂಸ್ಥೆಯನ್ನು ತೊರೆದಿದ್ದು ಇದರಲ್ಲಿ ಅವರು ಈ ಹಿಂದೆ Civi Integrity Team ಭಾಗವಾಗಿದ್ದರು. ಅದು ಪ್ರಪಂಚದಾದ್ಯಂತ ಚುನಾವಣಾ ಹಸ್ತಕ್ಷೇಪ ಪ್ರಕರಣಗಳ ಮೇಲ್ವಿಚಾರಣೆ ಮಾಡುತ್ತಿತ್ತು. ಈ ಮೇಲ್ವಿಚಾರಣಾ ತಂಡವನ್ನು 2020ರ ಯುಎಸ್ ಅಧ್ಯಕ್ಷೀಯ ಚುನಾವಣೆಯ ನಂತರ ವಿಸರ್ಜಿಸಲಾಗಿತ್ತು ಎನ್ನುವ ಕುರಿತು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. ಕಳೆದ ತಿಂಗಳು ಆಕೆ ಯುಎಸ್ ಮಾರುಕಟ್ಟೆಗಳ ಕಾವಲುಗಾರ ಸಂಸ್ಥೆ ಎಸ್‌ ಇಸಿಗೆ ತಮ್ಮ ವಕೀಲರೊಂದಿಗೆ ಸೇರಿ ಕನಿಷ್ಠ ಎಂಟು ದೂರುಗಳನ್ನು ಸಲ್ಲಿಸಿದ್ದಾರಂತೆ. ಅದಷ್ಟೇ ಅಲ್ಲದೆ ಆಕೆ ಈ ವಾರದ ಆರಂಭದಲ್ಲಿ ಸಿಬಿಎಸ್ ನ್ಯೂಸ್‌ ನಲ್ಲಿ ಸಾರ್ವಜನಿಕವಾಗಿ ತನ್ನ ಆರೋಪಗಳನ್ನು ಮಾಡಿದ್ದಲ್ಲದೆ ನಂತರ ಯುಎಸ್ ಕಾಂಗ್ರೆಸ್‌ ಗೆ ಈ ಕುರಿತು ಮಹತ್ವದ ಸಾಕ್ಷ್ಯಗಳನ್ನು ನೀಡಿದ್ದಾರೆಂದು ವರದಿಗಳಾಗಿವೆ.

ಸೋರಿಕೆಯಾದ ಎಡ್ವರ್ಸರಿಯಲ್ ಹಾರ್ಮಫುಲ್ ನೆಟ್ ವರ್ಕ್ಸ್ -ಇಂಡಿಯಾ ಕೇಸ್ ಸ್ಟಡಿ ಎಂಬ ಫೇಸ್‌ ಬುಕ್‌ ನ ಆಂತರಿಕ ಸಮೀಕ್ಷಾ ದಾಖಲೆ ಸಿಬಿಎಸ್ ನ್ಯೂಸ್ ನ ವೆಬ್‌ ಸೈಟ್‌ ನಲ್ಲಿ ಅಪ್‌ ಲೋಡ್ ಮಾಡಿದ ಕುರಿತು ಎಸ್‌ ಇಸಿ ದೂರುಗಳಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಸೋರಿಕೆಯಾದ ಈ ದಾಖಲೆಯ ಒಂದು ಆಯ್ದ ಭಾಗವು ಹೀಗೆ ಹೇಳುತ್ತದೆ: ಆರ್‌ ಎಸ್‌ ಎಸ್ ಬೆಂಬಲಿತ ಫೇಸ್‌ ಬುಕ್ ಬಳಕೆದಾರರು ಮತ್ತು ಬಳಕೆದಾರರ ಗುಂಪುಗಳು ಹೊಂದಿರುವ ಪೇಜುಗಳು ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಭಯವನ್ನು ಹುಟ್ಟಿಸುತ್ತವೆ. ಮುಸ್ಲಿಮ್ ವಿರೋಧಿ ಬರಹಗಳು/ಭಾಷಣಗಳು ಹಿಂಸಾತ್ಮಕ ಮತ್ತು ದಹನಕಾರಿ ಉದ್ದೇಶ ಹೊಂದಿರುತ್ತವೆ. ಈ ಪೇಜುಗಳಲ್ಲಿ ಮುಸ್ಲಿಮರ ಬಗ್ಗೆ ತಪ್ಪುಅಭಿಪ್ರಾಯ ರೂಪಿಸುವ ಅನೇಕ ಸಂಗತಿಗಳಿದ್ದು ಮುಸ್ಲಿಮರನ್ನು ಹಂದಿ ಮತ್ತು ನಾಯಿಗಳಿಗೆ ಹೋಲಿಸುವ ಮತ್ತು ಹಲವಾರು ಅಮಾನವೀಯ ಪೋಸ್ಟ್‌ ಗಳು ಇವೆ. ಮುಸ್ಲಿಮ್ ಪುರುಷರು ತಮ್ಮ ಕುಟುಂಬದ ಮಹಿಳಾ ಸದಸ್ಯರ ಮೇಲೆ ಅತ್ಯಾಚಾರ ಮಾಡುತ್ತಾರೆ ಎನ್ನುವ ಸುಳ್ಳು ಸಂಗತಿಗಳು ಕೂಡ ಆ ಪೇಜುಗಳಲ್ಲಿ ಬರೆಯಲಾಗುತ್ತಿದೆ ಎನ್ನುತ್ತವೆ ಸೋರಿಕೆಯಾದ ಫೇಸ್‌ ಬುಕ್ ದಾಖಲೆಯ ಆ ಆಯ್ದ ಭಾಗ.

ಆ ದಾಖಲೆಯಲ್ಲಿ ನಮ್ಮ ಹಿಂದಿ ಮತ್ತು ಬಂಗಾಳಿ ವರ್ಗೀಕರಣದ ಕೊರತೆ ಎಂದರೆ ಈ ವಿಷಯದ ಹೆಚ್ಚಿನ ಭಾಗವನ್ನು ಎಂದಿಗೂ ಫ್ಲ್ಯಾಗ್ ಮಾಡಲಾಗಿಲ್ಲ ಅಥವಾ ಅಂತಹ ಬಳಕೆದಾರರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎನ್ನುವ ಮಾಹಿತಿ ಇದೆ ಎನ್ನುತ್ತವೆ ದಿ ಟೆಲಿಗ್ರಾಫ್ ವರದಿಗಳು. ಆರ್‌ ಎಸ್‌ ಎಸ್ ಮತ್ತು ಬಿಜೆಪಿ ಹೌಗೆನ್ ಅವರ ಈ ಗುರುತರ ಆರೋಪಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಕಳೆದ ವರ್ಷ, ವಾಲ್ ಸ್ಟ್ರೀಟ್ ಜರ್ನಲ್ ಹೆಸರಿಸಿದ ಪ್ರಸ್ತುತ ಮತ್ತು ಮಾಜಿ ಫೇಸ್‌ ಬುಕ್ ಸಿಬ್ಬಂದಿಯನ್ನು ಉಲ್ಲೇಖಿಸಿದ್ದು, ಇವರಿಬ್ಬರು ಫೇಸ್‌ ಬುಕ್ ವೇದಿಕೆಯು ಹಿಂಸಾಚಾರವನ್ನು ಪ್ರಚೋದಿಸುವ ಬಿಜೆಪಿ ಶಾಸಕರ ಪೋಸ್ಟ್ ಗಳನ್ನು ಪರೀಕ್ಷಿಸದೆ ಅನುಮತಿಸಿದೆ ಎಂದು ಹೇಳಿದ್ದು, ಈ ಕಾರ್ಯವು ಆರ್‌ಎಸ್‌ಎಸ್ ನೊಂದಿಗೆ ಸಂಬಂಧ ಹೊಂದಿರುವ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಾರ್ವಜನಿಕ ನೀತಿ ನಿರ್ದೇಶಕರಾದ ಆಂಖಿ ದಾಸ್ ಅವರ ಸಲಹೆಯ ಮೇರೆಗೆ ಮಾಡಲಾಗಿತ್ತು ಎನ್ನುವ ಸ್ಫೋಟಕ ಮಾಹಿತಿ ದಿ ಟೆಲಿಗ್ರಾಫ್ ಪತ್ರಿಕೆ ಹೊರಗೆಡವಿದೆ. ಫೇಸ್‌ ಬುಕ್ಕಿನ ದಿನಾಂಕವಿಲ್ಲದ ಆಂತರಿಕ ಸಮೀಕ್ಷೆಯೊಂದನ್ನು ಹೌಗೆನ್ ಉಲ್ಲೇಖಿಸಿ ಆ ತರಹದ ದ್ವೇಷ ಬಿತ್ತುವ ಫೇಸ್‌ ಬುಕ್ ಬರಹ/ದೃಶ್ಯಗಳಿಗೆ ಅತಿ ಹೆಚ್ಚು ವೀಕ್ಷಣೆಗಳು ಬಂದಿರುವುದು ನಕಲಿ ಎಂದು ಬಹಿರಂಗಗೊಂಡ ಬಗ್ಗೆ ದಿ ಟೆಲಿಗ್ರಾಫ್ ವರದಿ ಮಾಡಿದೆ.

ಹೌಗೆನ್ ಅವರ ಪ್ರಕಾರ ಸಂಘ ಪರಿವಾರ ಬೆಂಬಲಿಗರು ಫೇಸ್‌ ಬುಕ್ ಮೂಲಕ ಹರಡುವ ದ್ವೇಷಪೂರಿತ ಪೋಸ್ಟ್‌ ಗಳು ಎಷ್ಟು ಜನರು ವೀಕ್ಷಿಸಿದರು ಎನ್ನುವ ಅಂಕಿ ಸಂಖ್ಯೆಗಳು ಸಂಪೂರ್ಣ ನಕಲಿ ಎನ್ನಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿನ ಸಿವಿಕ್ ಪೋಸ್ಟರ್ ಗಳು 40% ನಕಲಿ/ಅನಧಿಕೃತ ಉನ್ನತ ವಿಪಿವಿ (ವಿವ್ಸ್ ಪೋರ್ಟ್ ವಿವ್ಸ್  ಅಥವಾ ಇಂಪ್ರೆಸ್ಸೆನ್ಸ್) ಆಗಿರುತ್ತವೆ ಎನ್ನುತ್ತವೆ ಮೂಲಗಳು. ಫೇಸ್‌ ಬುಕ್‌ ನ ಈ ಎಲ್ಲ ತಿರುಚುವಿಕೆಗಳನ್ನು ಹೌಗೆನ್ ಅವರು ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ಭಾರತೀಯ ರಾಜಕಾರಣಿಯೊಬ್ಬರು ಹಾಕಿದ್ದ ಮುಸ್ಲಿಮ್ ವಿರೋಧಿ ಹಾಗು ಪಾಕಿಸ್ತಾನ ವಿರೋಧಿ ಔಟ್- ಆಫ್- ಕಾಂಟೆಕ್ಸ್ಟ್ ವೀಡಿಯೊ ವಿಪರೀತ ಜನರು ವೈರಲ್ ಆಗಿ ಹಂಚಿಕೊಂಡಿದ್ದಾರೆ ಎನ್ನುವ ಫೇಸ್‌ ಬುಕ್ ದಾಖಲೆಗಳು ಕೂಡ ನಕಲಿ ಎನ್ನಲಾಗುತ್ತಿದೆ. ಲೋಟಸ್ ಮಹಲ್ ಎಂಬ ಇನ್ನೊಂದು ಸೋರಿಕೆಯಾದ ಫೇಸ್‌ ಬುಕ್‌ ನ ಆಂತರಿಕ ದಾಖಲೆಯನ್ನು ಉಲ್ಲೇಖಿಸಿ ಬಿಜೆಪಿ ತನ್ನ ಸದಸ್ಯರಿಗೆ ಒಂದಕ್ಕಿಂತ ಹೆಚ್ಚು ಫೇಸ್‌ ಬುಕ್ ಖಾತೆಗಳನ್ನು ಹೊಂದಲು ಪ್ರೋತ್ಸಾಹಿಸುತ್ತದೆ ಎನ್ನುವುದನ್ನು ಬಹಿರಂಗಗೊಳಿಸಿದೆ ಎನ್ನಲಾಗುತ್ತವೆ.

ಹೌಗೆನ್ ನೀಡಿದ ದೂರಿನ ಆಯ್ದ ಭಾಗವು ಹೇಳುವುದೇನೆಂದರೆ ಭಾರತದಲ್ಲಿ ಬಿಜೆಪಿ ಐಟಿ ಸೆಲ್ ಸಂಯೋಜಕರು ತಯಾರಿಸಿ ತನ್ನ ಕಾರ್ಯಕರ್ತರಿಗೆ ಹಂಚುವ ಈ ಬಗೆಯ ದ್ವೇಷಪೂರಿತ ಪೋಸ್ಟ್‌ ಗಳ ಅಭಿಯಾನವು ಫೇಸ್‌ ಬುಕ್‌ ನಲ್ಲಿ ಬಿಜೆಪಿ ಬೆಂಬಲಿಗರು ಐಟಿ ಸೆಲ್‌ ನ ಸಂದೇಶ ಹಾಗು ಸೂಚನೆಗಳಂತೆ ಅವುಗಳನ್ನು ಸಾಮೂಹಿಕವಾಗಿ ಕಾಪಿ ಪೇಸ್ಟ್ ಮಾಡುತ್ತಾರೆ.ಈ ಪೋಸ್ಟ್‌ ಗಳು ಬಹುತೇಕ ರಾಜಕೀಯ ಸೂಕ್ಷ್ಮ ಸಂಗತಿಗಳನ್ನು ಕೆರಳಿಸುವಂತವಾಗಿರುತ್ತವೆ ಹಾಗು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುತ್ತವೆ ಎಂದು ಟೆಲಿಗ್ರಾಫ್ ವರದಿಗಳು ಬಹಿರಂಗಪಡಿಸಿವೆ. ಆದರೆ ಫೇಸ್‌ ಬುಕ್ ವಕ್ತಾರರು ಟೆಲಿಗ್ರಾಫ್ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ; ಕಳೆದ ಕೆಲವು ವರ್ಷಗಳಲ್ಲಿ, ನಾವು ತಂತ್ರಜ್ಞಾನದಲ್ಲಿ ಗಣನೀಯವಾಗಿ ಹೂಡಿಕೆ ಮಾಡಿದ್ದೇವೆ. ದ್ವೇಷಪೂರಿತ ಬರಹ/ಭಾಷಣವನ್ನು ಜನರು ನಮಗೆ ರಿಪೋರ್ಟ್ ಮಾಡುವ ಮೊದಲೇ ಪತ್ತೆ ಹಚ್ಚುವ ಕಾರ್ಯ ಫೇಸ್‌ ಬುಕ್ ಮಾಡುತ್ತಿದೆ. ಹಿಂದಿ ಹಾಗು ಬೆಂಗಾಲಿ ಭಾಷೆಗಳನ್ನೊಳಗೊಂಡಂತೆ ಜಾಗತಿಕವಾಗಿ 40 ಭಾಷೆಗಳಲ್ಲಿ ಹಾಕಲಾಗುವ ಪೋಸ್ಟ್‌ ಗಳ ಫೇಸ್‌ ಬುಕ್ ನಿಯಮ ಉಲ್ಲಂಘಿಸುವ ವಿಷಯವನ್ನು ಪತ್ತೆಹಚ್ಚಲು ನಾವು ಈಗ ಈ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ.

ಇದರ ಪರಿಣಾಮವಾಗಿ, ನಾವು ಜಾಗತಿಕವಾಗಿ ದ್ವೇಷ ಹರಡುವ ಬರಹ/ಭಾಷಣಗಳ ಪ್ರಮಾಣವನ್ನು ಕಡಿಮೆ ಮಾಡಿದ್ದೇವೆ ಎಂದು ಹೇಳಿರುವ ಕುರಿತು ದಿ ಟೆಲಿಗ್ರಾಫ್ ವರದಿ ಮಾಡಿದೆ. ಮುಂದುವರೆದು ಹೇಳಿಕೆ ನೀಡಿರುವ ಫೇಸ್‌ ಬುಕ್ ವಕ್ತಾರರು: ಹೆಚ್ಚುವರಿಯಾಗಿ, ನಮ್ಮಲ್ಲಿ 20 ಭಾರತೀಯ ಭಾಷೆಗಳನ್ನು ಒಳಗೊಂಡ ವಿಷಯ ವಿಮರ್ಶಕರ ತಂಡವಿದೆ. ಮುಸ್ಲಿಮರು ಸೇರಿದಂತೆ ಶೋಷಿತರ ವಿರುದ್ಧ ದ್ವೇಷ ಹರಡುವ ಪೋಸ್ಟ್‌ಗಳು ಜಾಗತಿಕವಾಗಿ ಹೆಚ್ಚುತ್ತಲೇ ಇರುವುದರಿಂದ, ನಾವು ಇದನ್ನು ತಡೆಯಲು ಕಟ್ಟುನಿಟ್ಟಿನ ತಂತ್ರಗಳನ್ನು ಅನುಸರಿಸುವುದು ಮುಂದುವರಿಸುತ್ತೇವೆ ಮತ್ತು ಫೇಸ್‌ ಬುಕ್ ಆನ್‌ಲೈನ್ ನಲ್ಲಿ ಬರುವ ದ್ವೇಷದ ಮಾತುಗಳನ್ನು ಕೂಡ ತಡೆಯಲು ನಮ್ಮ ಈಗಿರುವ ನೀತಿಗಳನ್ನು ನವೀಕರಿಸಲು ಬದ್ಧರಾಗಿದ್ದೇವೆ ಎಂದದ್ದನ್ನು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಮಾರ್ಕ್ ಜುಕರ್ ಬರ್ಗ್ ಇತ್ತೀಚೆಗೆ ತನ್ನ ಫೇಸ್‌ ಬುಕ್ ಕಂಪನಿಯ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರಂತೆ. ಅದರಲ್ಲಿ ಅವರು ಹಾನಿಕಾರಕ ವಿಷಯದ ವಿರುದ್ಧ ಹೋರಾಡುವ ಬಗ್ಗೆ ನಾವು ಕಾಳಜಿ ವಹಿಸದಿದ್ದರೆ, ಕಂಪನಿ ಇಷ್ಟೊಂದು ಜನ ಕೆಲಸಗಾರರನ್ನು ಇಟ್ಟುಕೊಂಡು ಏನು ಪ್ರಯೋಜನ ಎಂದು ಪ್ರಶ್ನೆ ಹಾಕಿದ್ದಾರೆಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ಒಟ್ಟಾರೆಯಾಗಿ ಬಿಜೆಪಿ ಮತ್ತು ಸಂಘ ಪರಿವಾರ ಭಾರತೀಯ ಸಾಂಪ್ರದಾಯಿಕ ಮಾಧ್ಯಮಗಳ ಮೇಲೆ ಹೊಂದಿದ ನಿಯಂತ್ರಣದಂತೆ ಸೋಷಿಯಲ್ ಮೀಡಿಯಾ ಮೇಲೆ ಕೂಡ ನಿಯಂತ್ರಣ ಹೊಂದಲು ಮತ್ತು ಅವುಗಳನ್ನು ತನ್ನ ರಾಜಕೀಯ ಲಾಭಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಲು ಎಲ್ಲ ಬಗೆಯ ವಾಮ ಮಾರ್ಗಗಳನ್ನು ಬಳಸಿಕೊಳ್ಳುತ್ತಿದೆ ಎನ್ನುವುದು ಜಾಗತಿಕ ಮಟ್ಟದಲ್ಲಿ ಬಟಾ ಬಯಲಾದ ಸಂಗತಿ. ಇದು ಭಾರತೀಯರೆಲ್ಲರೂ ಬಿಜೆಪಿ ಮತ್ತು ಸಂಘ ಪರಿವಾರದ ಕುಕೃತ್ಯಗಳಿಂದ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ ಎನ್ನಲೇಬೇಕಿದೆ.

Join Whatsapp