IPL-2022 ಮೆಗಾ ಹರಾಜಿಗೆ ಕ್ಷಣಗಣನೆ, ಶ್ರೇಯಸ್ ಅಯ್ಯರ್, ಶಾರುಖ್‌ ಖಾನ್‌, ಇಶಾನ್ ಕಿಶನ್, ವಾರ್ನರ್ ಮೇಲೆ ಎಲ್ಲರ ಕಣ್ಣು !

Prasthutha|

ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್-IPL ಟೂರ್ನಿಯ 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ನಡೆಯಲಿದೆ.

- Advertisement -

*10 ತಂಡ, 590 ಆಟಗಾರರು !*

ಈ ಬಾರಿಯ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು ಹೀಗಾಗಿ ಸ್ಟಾರ್ ಆಟಗಾರರ ಜತೆಗೆ ಕೆಲವು ದೇಶೀಯ ಕ್ಯಾಪ್ಡ್-ಅನ್’ಕ್ಯಾಪ್ಡ್ ಆಟಗಾರರಿಗೆ ಅದೃಷ್ಟ ಖುಲಾಯಿಸುವುದು ನಿಶ್ಚಿತವಾಗಿದೆ.
ಮೆಗಾ ಹರಾಜಿನಲ್ಲಿ 370 ಭಾರತೀಯ ಮತ್ತು 220 ವಿದೇಶಿ ಸಹಿತ ಒಟ್ಟು 590 ಆಟಗಾರರು ಕಣದಲ್ಲಿದ್ದಾರೆ. ಈ ಪೈಕಿ 228 ಮಂದಿ ಕ್ಯಾಪ್ಡ್  [ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವವರು], 355 ಅನ್’ಕ್ಯಾಪ್ಡ್  [ದೇಶೀಯ ಆಟಗಾರರು], 7  ಅಸೋಸಿಯೇಟ್ ದೇಶಗಳ ಆಟಗಾರರು ಒಳಗೊಂಡಿದ್ದಾರೆ.

- Advertisement -

*10 ಮಾರ್ಕಿ ಆಟಗಾರರಿಗೆ ಭಾರಿ ಡಿಮ್ಯಾಂಡ್ !*

ಡೇವಿಡ್ ವಾರ್ನರ್, ರಬಾಡ, ಬೌಲ್ಟ್ ಹಾಗೂ ಧವನ್, ಶಮಿ , ಶ್ರೇಯಸ್ ಅಯ್ಯರ್ ಸೇರಿದಂತೆ 10 ಮಂದಿಯನ್ನು ‘ಮಾರ್ಕಿ’ ಆಟಗಾರರಾಗಿ ಹೆಸರಿಸಲಾಗಿದ್ದು, ಇವರ ಮೂಲ ಬೆಲೆ 2 ಕೋಟಿ ನಿಗದಿಪಡಿಸಲಾಗಿದೆ. ಆದರೆ ಈ 10 ಆಟಗಾರರಲ್ಲಿ 5-7 ಆಟಗಾರರು ದಾಖಲೆಯ ಮೊತ್ತಕ್ಕೆ  ಮಾರಾಟವಾಗುವುದು ನಿಶ್ಚಿತ. ಇವರಲ್ಲದೆ ಇಶಾನ್ ಕಿಶನ್, ಶಾರ್ದೂಲ್ ಠಾಕೂರ್ ಹಾಗೂ ಶಾರೂಖ್ ಖಾನ್’ಗೂ ಬಂಪರ್ ಮೊತ್ತ ದೊರೆಯುವ  ನಿರೀಕ್ಷೆ ಇದೆ.
ಮಾರ್ಕಿ ಆಟಗಾರರ ಹರಾಜಿನೊಂದಿಗೆ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಬಳಿಕ ಕ್ಯಾಪ್ಡ್ ಹಾಗೂ ಅನ್ಯ ಕ್ಯಾಪ್ಡ್ ಆಟಗಾರರನ್ನು ಹರಾಜು ಕೂಗಲಾಗುತ್ತದೆ.

*ಹೇಗಿರುತ್ತೆ ಹರಾಜು ಪ್ರಕ್ರಿಯೆ?*

ಆಟಗಾರರನ್ನು ಬ್ಯಾಟರ್, ವೇಗದ ಬೌಲರ್,  ಸ್ಪಿನ್ ಬೌಲರ್, ವಿಕೆಟ್ ಕೀಪರ್, ಆಲ್ ರೌಂಡರ್ ಹೀಗೆ ವಿಭಾಗಿಸಲಾಗಿರುತ್ತದೆ.  ಮೊದಲ ದಿನವಾದ ಶನಿವಾರ 161 ಆಟಗಾರರನ್ನು ಹರಾಜಿಗೆ ಒಳಪಡಿಸಲಾಗುತ್ತದೆ. 2ನೇ ದಿನವಾದ ಭಾನುವಾರ, ಫ್ರಾಂಚೈಸಿಗಳು ಸೂಚಿಸುವ ಆಟಗಾರರನ್ನು ಮಾತ್ರ ಹರಾಜಿಗೆ ಒಳಪಡಿಸಲಾಗುತ್ತದೆ. ಈ ಪೈಕಿ ಮೊದಲ ದಿನ ಮಾರಾಟವಾಗದ ಆಟಗಾರರೂ ಸೇರಿರಬಹುದು.

*ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಸ್ಥಳ: ಐಟಿಸಿ ಗಾರ್ಡೇನಿಯಾ, ಬೆಂಗಳೂರು*
*ಆರಂಭ: ಬೆಳಗ್ಗೆ 11.00 (ಬಿಡ್ಡಿಂಗ್ 12ರಿಂದ)*
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ ಹಾಟ್’ಸ್ಟಾರ್

Join Whatsapp