ಚಕ್ರತೀರ್ಥರಂತಹ ಹುಚ್ಚಾಟ ಮಾಡುವವರನ್ನು ಪರಿಷ್ಕರಣೆ ಸಮಿತಿಯಲ್ಲಿ ಸೇರಿಸಿರುವುದು ಸರಿಯಾದ ಕ್ರಮವಲ್ಲ: ಬಿಜೆಪಿ ಮುಖಂಡ ಬಿ.ಸ್ವಾಮಿರಾವ್

Prasthutha|

ರಿಪ್ಪನ್‌ಪೇಟೆ: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಬಸವಣ್ಣ, ರಾಷ್ಟ್ರಕವಿ ಕುವೆಂಪು ಹಾಗೂ ನಾರಾಯಣಗುರುಗಳ ಬಗ್ಗೆ ಪಠ್ಯ ಪುಸ್ತಕದಲ್ಲಿ ಅವಮಾನಿಸಿರುವ ಬಗ್ಗೆ ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ಬಿ.ಸ್ವಾಮಿರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ಮತ್ತು ಬಸವಣ್ಣ, ನಾರಾಯಣಗುರುಗಳ ಇತಿಹಾಸವನ್ನರಿಯದ ರೋಹಿತ್ ಚಕ್ರತೀರ್ಥರಂತಹ ಹುಚ್ಚಾಟ ಮಾಡುವವರನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಸೇರಿಸಿರುವುದು ಸರ್ಕಾರದ ಸರಿಯಾದ ಕ್ರಮವಲ್ಲ ಎಂದು ಹೇಳಿದರು.


ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅನುಭವಿ ವಿದ್ವಾಂಸ, ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾದ ಹಿರಿಯ ಸಾಹಿತಿ ಲೇಖಕ ಬರಗೂರು ರಾಮಚಂದ್ರಪ್ಪರನ್ನು ಮುಂದುವರಿಸಬೇಕು. ಪರಿಷ್ಕೃತ ಪಠ್ಯಪುಸ್ತಕದ ಇತಿಹಾಸದ ಪಠ್ಯದಲ್ಲಿ ಇತ್ತೀಚೆಗೆ ಅಗಲಿದ ನಟ ಪುನೀತ್ ರಾಜ್ ಕುಮಾರ್ ಹೆಸರು ಸೇರ್ಪಡೆಯಾಗಬೇಕು. ಅವರ ಆದರ್ಶ ತತ್ವಗಳು ಮುಂದಿನ ಯುವಪೀಳಿಗೆಗೆ ಮಾದರಿಯಾಗಬೇಕು ಎಂದು ಆಶಿಸಿದರು.

- Advertisement -


ಬಸವಣ್ಣ, ನಾರಾಯಣಗುರು ಮತ್ತು ರಾಷ್ಟ್ರಕವಿ ಕುವೆಂಪು ಬಗ್ಗೆ ಅವಮಾನಿಸಿರುವ ರೋಹಿತ್ ಚಕ್ರತೀರ್ಥರ ಸಮಿತಿಯ ಪಠ್ಯಪರಿಷ್ಕರಣೆಯನ್ನು ತಕ್ಷಣ ರದ್ದುಗೊಳಿಸಿ ಈ ಹಿಂದಿನಂತೆಯೆ ಇರುವ ಪಠ್ಯ ಕ್ರಮವನ್ನು ಬೋಧಿಸಲು ಅವಕಾಶ ಮಾಡಿಕೊಡುವಂತೆ ಸರ್ಕಾರವನ್ನು ಬಿ.ಸ್ವಾಮಿರಾವ್ ಆಗ್ರಹಿಸಿದರು.



Join Whatsapp