ಶಿರವಸ್ತ್ರ ಮುಸ್ಲಿಮರ ಸಾಂವಿಧಾನಿಕ ಹಕ್ಕು, ಅದನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ: ವಿಮೆನ್ ಇಂಡಿಯಾ ಮೂವ್ಮೆಂಟ್

Prasthutha|

ಬೆಂಗಳೂರು: ಉಡುಪಿಯ ಪದವಿ ಪೂರ್ವ ಕಾಲೇಜು ಮತ್ತು ರಾಜ್ಯದ ಹಲವು ಕಾಲೇಜುಗಳಲ್ಲಿ ಮುಸ್ಲಿಂ ವಿಧ್ಯಾರ್ಥಿನಿಯರು ತಮ್ಮ ಧಾರ್ಮಿಕ ಹಕ್ಕಾಗಿರುವ ಶಿರವಸ್ರ್ರ ಧರಿಸಿರುವುದಕ್ಕೆ ನಿರ್ಬಂಧ ಹೇರುತ್ತಿರುವ ಕಾಲೇಜು ಆಡಳಿತ ಮಂಡಳಿ ಹಾಗು ಪ್ರಾಂಶುಪಾಲರ ನಡೆಯು ಕಾನೂನು ವಿರೋಧಿ ಹಾಗೂ ಅಸಂವಿಧಾನಿಕವಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಿರವಸ್ತ್ರ ಎಂಬುದು ಸಂವಿಧಾನ ನೀಡಿದಂತಹ ಹಕ್ಕಾಗಿರುತ್ತದೆ. ಎಲ್ಲಾ ಧರ್ಮದವರಿಗೂ ಅವರವರ ಧಾರ್ಮಿಕ ವಿಧಿ ವಿಧಾನದಂತೆ ಜೀವಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಅದರ ಒಂದು ಭಾಗವಾಗಿದೆ ಮುಸ್ಲಿಂ ಮಹಿಳೆಯರಿಗೆ ನೀಡಿದ ಧಾರ್ಮಿಕ ಸ್ವಾತಂತ್ರ್ಯ ಇದರ ಒಂದು ಭಾಗವಾಗಿದೆ ಶಿರವಸ್ತ್ರ. ಇದನ್ನು ಬಿಜೆಪಿ ಸಂಘಪರಿವಾರ ತಮ್ಮ ಹಿಂದು ರಾಷ್ಟ್ರ ನಿರ್ಮಾಣದ ಅಜೆಂಡಾದ ಭಾಗವಾಗಿ ತೆಗೆದುಕೊಂಡು ಕೋಮು ಧ್ರುವೀಕರಣ ಮಾಡಲು ಹೊರಟಿದೆ. ಇದನ್ನು ಭಾರತದ ಪ್ರಜ್ಞಾವಂತ ಜನರು ಅರ್ಥೈಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಸಾಚಾರ್ ವರದಿಯ ಪ್ರಕಾರ ಮುಸ್ಲಿಂ ಮಹಿಳೆಯರು ಶೈಕ್ಷಣಿಕ ಕ್ಷೇತ್ರದಲ್ಲಿ ಭಾರಿ ಹಿನ್ನಡೆಯಲ್ಲಿದ್ದಾರೆ ಎಂಬ ವರದಿ ಬಹಿರಂಗ ಗೊಂಡಿತ್ತು. ಅದರ ನಂತರ ನಿರಂತರವಾದ ಜಾಗೃತಿಯಿಂದ ಮುಸ್ಲಿಂ ಮಹಿಳೆಯರು ಶಿಕ್ಷಣ ಪಡೆಯಲು ಮುಂದುವರಿಯುತ್ತಿರುವುದನ್ನು ಕಾಣಲು ಸಾಧ್ಯವಾಗಿದೆ ಮಾತ್ರವಲ್ಲದೆ ಉನ್ನತ ಹುದ್ದೆಯನ್ನು ಪಡೆಯಲು ಮುಸ್ಲಿಂ ಮಹಿಳೆಯರು ಪಡೆಯಲು ಸಾಧ್ಯ ವಾಗಿದೆ. ಇದನ್ನು ಕಂಡು ಸಹಿಸದ ಸಂಘಪರಿವಾರ ಮುಸ್ಲಿಂ ಮಹಿಳೆಯರನ್ನು ಭಯಭೀತ ಗೊಳಿಸಿ ಶಿಕ್ಷಣವನ್ನು ಮೊಟಕು ಗೊಳಿಸಬೇಕೆಂಬ ದೃಷ್ಟಿಯಿಂದ ಈ ರೀತಿಯ ಅಜೆಂಡಾಗಳನ್ನು ಸೃಷ್ಟಿ ಮಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ಉಡುಪಿ, ಕುಂದಾಪುರ, ಕೊಪ್ಪ ,ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸೇರಿದಂತೆ ಹಲವಾರು ಕಾಲೇಜುಗಳಲ್ಲಿ ಇಂತಹ ವಿವಾದವನ್ನು ಹುಟ್ಟುಹಾಕಿ ಸಂವಿಧಾನವು ಮುಸ್ಲಿಂಮರಿಗೆ ನೀಡಿದ ಶಿರವಸ್ತ್ರ ಹತ್ತಿಕ್ಕುವಂತಹ ವ್ಯವಸ್ಥಿತ ಷಡ್ಯಂತರವನ್ನು ರೂಪಿಸಿರುವ ಸಂಘಪರಿವಾರದ ಕಿರಾತಕರ ವಿರುದ್ಧ ಪೋಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇಂತಹ ವಿವಾದ ಉಂಟಾದಾಗ ಪ್ರಾಂಶುಪಾಲರೇ ವಿವಾದವನ್ನು ತಣ್ಣಗಾಗಿಸುವ ಬದಲು ಸ್ಥಳೀಯ ರಾಜಕೀಯ ಜನ ಪ್ರತಿನಿಧಿಗಳನ್ನು ಸೇರಿಸಿಕೊಂಡು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುವ ಕ್ರಮ ಖಂಡನೀಯ ವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರ ಸಬಲೀಕರಣ ಮತ್ತು ಸುರಕ್ಷಿತೆಗೆ ಬೇಕಾಗುವ ಎಲ್ಲಾ ರೀತಿಯ ಕ್ರಮಗಳನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಹಾಗೂ ಈ ವಿವಾದವನ್ನು ಸಂವಿಧಾನ ನೀಡಿರುವ ಹಕ್ಕಿನಂತೆ ನಿಯಂತ್ರಿಸಿ ಹಾಗೂ ಮುಸ್ಲಿಂ ವಿಧ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ಶಾಲೆಗೆ ಹೋಗುವಂತಹ ವ್ಯವಸ್ಥೆಯನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮಾಡಿಕೊಡಬೇಕು ಎಂದು ಶಾಹಿದಾ ತಸ್ನೀಂ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.



Join Whatsapp