ನವದೆಹಲಿ: WWF ಅಖಾಡದಲ್ಲಿ ‘ದಿ ಗ್ರೇಟ್ ಖಲಿ’ ಎಂದೇ ಪ್ರಸಿದ್ಧಿ ಪಡೆದಿದ್ದ ಪಂಜಾಬ್ ಮೂಲದ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ನವದೆಹಲಿಯಲ್ಲಿರುವ ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಜಿತೇಂದ್ರ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಮುಖಂಡರ ಸಮ್ಮುಖದಲ್ಲಿ ದಲೀಪ್ ಸಿಂಗ್ ರಾಣಾರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಬಿಜೆಪಿ ಸೇರ್ಪಡೆಯ ಬಳಿಕ ಮಾತನಾಡಿದ ಮಾಜಿ WWE ಸ್ಟಾರ್, ಪ್ರಧಾನಿ ಮೋದಿಯವರು ದೇಶಕ್ಕಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಕೆಲಸಗಳೇ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲಿದೆ. ಬಿಜೆಪಿಯ ರಾಷ್ಟ್ರೀಯ ನೀತಿಯಿಂದ ಪ್ರಭಾವಿತನಾಗಿ ಪಕ್ಷ ಸೇರಿದ್ದೇನೆ ಎಂದು ಹೇಳಿದ್ದಾರೆ.
ಪಂಜಾಬ್ ಚುನಾವಣೆಯ ಹೊಸ್ತಿಲಲ್ಲೇ ದಲೀಪ್ ಸಿಂಗ್ ರಾಣ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಕುತೂಹಲ ಮೂಡಿಸಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ಒಂದೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.