ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ದಿವಂಗತ ಪಿ ವಿ ನರಸಿಂಹ ರಾವ್ಗೆ ಭಾರತ ರತ್ನ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ, ರಾವ್ ಮೊಮ್ಮಗ ಎನ್ ವಿ ಸುಭಾಶ್ ಗಾಂಧಿ ಕುಟುಂಬದ ವಿರುದ್ಧ ಕಿಡಿ ಕಾರಿದ್ದಾರೆ.
ಪಿ.ವಿ. ನರಸಿಂಹರಾವ್ ಅವರು ಕಾಂಗ್ರೆಸ್ ಪಕ್ಷದವರಾಗಿದ್ದರೂ ಪ್ರಧಾನಿ ಮೋದಿ ಗೌರವ ನೀಡಿದ್ದಾರೆ. ಈಗ ನಾನು ಯುಪಿಎ ಸರ್ಕಾರವನ್ನು ಅದರಲ್ಲೂ ಗಾಂಧಿ ಕುಟುಂಬವನ್ನು ದೂರುತ್ತೇನೆ. 2004 ರಿಂದ 2014 ರವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತ ರತ್ನ ಕೊಡುವುದ ಬಿಡಿ ಅಥವಾ ಇನ್ನಾವುದೇ ಪುರಸ್ಕಾರಗಳನ್ನು ಕೊಡುವುದನ್ನು ಬಿಡಿ, ಕೇವಲ ಕಾಂಗ್ರೆಸ್ ಪಕ್ಷದ ವೈಫಲ್ಯಗಳಿಗೆ ನರಸಿಂಹರಾವ್ ಅವರನ್ನು ಬಲಿಪಶುವನ್ನಾಗಿ ಮಾಡುವಲ್ಲಿ ಗಾಂಧಿ ಕುಟುಂಬ ತುಂಬಾ ಪ್ರಮುಖ ಪಾತ್ರ ವಹಿಸಿದೆ ಎಂದು ಎನ್ ವಿ ಸುಭಾಷ್ ಹೇಳಿದ್ದಾರೆ.
ಇದು ನಮಗೆ ಗೌರವವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಸಮಯವು ತುಂಬಾ ಭಾವನಾತ್ಮಕವಾಗಿದೆ. ಏಕೆಂದರೆ ಭಾರತ ರತ್ನ ವಿಳಂಬವಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು ಎಂದೂ ಅವರು ಹೇಳಿದರು.
ಕೇಂದ್ರ ಸರ್ಕಾರವು ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಹಾಗೂ ಹಸಿರು ಕ್ರಾಂತಿ ಪಿತಾಮಹ ಎಂ.ಎಸ್.ಸ್ವಾಮಿನಾಥನ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿ ಘೋಷಿಸಿದೆ.