ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿಗಾಗಿ ಲೋಕಾಯುಕ್ತ ಮನವಿ: ವಿಷಯವನ್ನೇ ಮುಚ್ಚಿಟ್ಟ ರಾಜ್ಯಪಾಲ!

Prasthutha|

ಬೆಂಗಳೂರು: ಮುಡಾ ಹಗರಣ ವಿಷಯವಾಗಿ ವಿಳಂಬಿಸದೇ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಮಾಜಿ ಸಿಎಂ ಸಿಎಂ ಕುಮಾರಸ್ವಾಮಿಯನ್ನು ರಕ್ಷಿಸಲು 10 ತಿಂಗಳಿಂದ ಯತ್ನಿಸುತ್ತಿದ್ದಾರೆಂಬ ಗಂಭೀರ ಆರೋಪಕ್ಕೆ ಈಡಾಗಿದ್ದಾರೆ.

- Advertisement -

ಎಂಸಿಆರ್‌ ನಿಯಮಾವಳಿಗಳನ್ನು ಉಲ್ಲಂಘಿಸಿ 550 ಎಕರೆ ಭೂಮಿ ಮಂಜೂರು ಮಾಡಲು ಒಳಸಂಚು ರೂಪಿಸಿದ್ದಾರೆ ಎಂದು ಆರೋಪದಲ್ಲಿ ತನಿಖೆ ನಡೆಸಿದ ಲೋಕಾಯುಕ್ತದ ಸಿಟ್ ತಂಡ ಕುಮಾರಸ್ವಾಮಿ ತಪ್ಪಿತಸ್ಥರೆಂದು ಕಂಡುಬಂದ ಬಳಿಕ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದರೂ ಹತ್ತು ತಿಂಗಳಿಂದಲೂ ಆ ವಿಚಾರದಲ್ಲಿ ರಾಜ್ಯಪಾಲರು ಯಾವುದೇ ತೀರ್ಮಾನ ತೆಗೆದುಕೊಳ್ಳದೇ ವಿಷಯವನ್ನು ಮರೆಮಾಚಿದ್ದಾರೆ ಎನ್ನಲಾಗಿದೆ.

2006ರಲ್ಲಿ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿಯಾಗಿದ್ದ ಹೆಚ್‌ ಡಿ ಕುಮಾರಸ್ವಾಮಿ ಎಂಸಿಆರ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ವಿನೋದ್‌ ಗೋಯಲ್‌ ಎಂಬ ವ್ಯಕ್ತಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿನ 550 ಎಕರೆ ಭೂಮಿ ಮಂಜೂರು ಮಾಡಲು ಒಳಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -

ವಿನೋದ್ ಗೋಯಾಲ್ ಅವರಿಗೆ ಭೂಮಿ ಮಂಜೂರು ಮಾಡುವಲ್ಲಿ ಅಧಿಕಾರಿಗಳು ಜೊತೆ ಹೆಚ್ ಡಿ ಕುಮಾರಸ್ವಾಮಿ ಕೂಡ ಶಾಮೀಲಾಗಿದ್ದು, ವಿನೋದ್‌ ಗೋಯಲ್‌ ಅವರನ್ನು ಪ್ರಥಮ ಆರೋಪಿಯೆಂದೂ, ಎಚ್‌ ಡಿ ಕುಮಾರಸ್ವಾಮಿ ಅವರನ್ನು ಎರಡನೇ ಆರೋಪಿಯೆಂದೂ, ಇಲಾಖೆಯ ಅಧಿಕಾರಿ ಕೆ. ಜಯಚಂದ್ರ ಅವರನ್ನು ಮೂರನೇ ಆರೋಪಿಯೆಂದೂ ಮತ್ತು FDA ಜವರೇಗೌಡ ಅವರನ್ನು ನಾಲ್ಕನೇ ಆರೋಪಿಯಾಗಿ ಲೋಕಾಯುಕ್ತ ಸಿಟ್ ಪ್ರಕರಣ ದಾಖಲಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳಾದ 420, 465, 468, 409 ಜೊತೆಗೆ 120ಬಿ ಮತ್ತು ಐಪಿಸಿ ಸೆಕ್ಷನ್‌ 511, ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಮತ್ತು ಎಂಎಂಆರ್‌ಡಿ ಕಾಯಿದೆಯ ಸೆಕ್ಷನ್‌ಗಳಾದ 21(2) ಮತ್ತು 23 ಅಡಿ ದಾಖಲಾಗಿರುವ ಪ್ರಕರಣದಲ್ಲಿ
ಲೋಕಾಯುಕ್ತದ ಎಸ್‌ಐಟಿಯು ತನಿಖೆಯನ್ನು ಶುರು ಮಾಡಿತ್ತು. ತನಿಖೆಯಲ್ಲಿ ಹೆಚ್‌.ಡಿ. ಕುಮಾರಸ್ವಾಮಿಯವರು ತಪ್ಪೆಸಗಿದ್ದಾರೆ ಎಂದು ಲೋಕಾಯುಕ್ತಕ್ಕೆ ಮನವರಿಕೆಯಾಗಿ ಚಾರ್ಚ್‌ಶೀಟ್‌ ಹಾಕಲಾಗಿತ್ತು. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಪ್ರಾಸಿಕ್ಯೂಷನ್‌ ಮಂಜೂರಾತಿ ನೀಡುವಂತೆ ರಾಜ್ಯಪಾಲರಿಗೆ ಲೋಕಾಯುಕ್ತದ SIT 2023ರ ಸೆಪ್ಟೆಂಬರ್‌ನಲ್ಲಿ ಮನವಿ ಮಾಡಿದೆ. ಆದರೆ ಹತ್ತು ತಿಂಗಳಿಂದಲೂ ರಾಜ್ಯಪಾಲರು ಅನುಮತಿ ನೀಡಲಿಲ್ಲ. ಸಿಎಂ ಸಿದ್ದರಾಮಯ್ಯನವರ ಮೇಲೆ ಯಾವ ತನಿಖಾ ಏಜೆನ್ಸಿ ಅನುಮತಿ ಕೇಳಿರದಿದ್ದರೂ ದೂರುದಾರರೊಬ್ಬರ ದೂರನ್ನಷ್ಟೇ ಆಧರಿಸಿ ಕೇವಲ ಒಂದು ದಿನದಲ್ಲಿ ಶೋಕಾಸ್‌ ನೋಟೀಸ್‌ ನೀಡಿದ್ದ ರಾಜ್ಯಪಾಲರು ಕಳೆದ 10 ತಿಂಗಳಿಂದ ತನಿಖಾ ಸಂಸ್ಥೆ ಕುಮಾರಸ್ವಾಮಿ ವಿರುದ್ಧ ಮಾಡಿದ ಮನವಿಗೆ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ.



Join Whatsapp