ರಾಜಕೀಯ ಸಮಾವೇಶಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು: ಹೈಕೋರ್ಟ್

Prasthutha|

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಜನವರಿ 4ರಂದು ಹೊರಡಿಸಿರುವ ಪ್ರಮಾಣಿತ ಕಾರ್ಯಸೂಚಿಯನ್ನು (ಎಸ್ ಒಪಿ) ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಎಸ್ ಒಪಿ ಜಾರಿಯಲ್ಲಿರುವವರೆಗೆ ಯಾವುದೇ ಪ್ರತಿಭಟನೆ ಅಥವಾ ರಾಜಕೀಯ ಸಮಾವೇಶಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಶುಕ್ರವಾರ ನಿರ್ದೇಶಿಸಿರುವ ಕರ್ನಾಟಕ ಹೈಕೋರ್ಟ್, ಎಲ್ಲಾ ಮನವಿಗಳನ್ನು ವಿಲೇವಾರಿ ಮಾಡಿದೆ.

- Advertisement -

ಕೋವಿಡ್ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಎ.ವಿ. ನಾಗೇಂದ್ರ ಪ್ರಸಾದ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ರಾಜ್ಯ ಸರ್ಕಾರವು ಜನವರಿ 12ರಂದು ವಿಪತ್ತು ನಿರ್ವಹಣೆ ಕಾಯಿದೆ 2005ರ ಸೆಕ್ಷನ್ 24 (ಎಬಿ) ಅನ್ವಯ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ನಮ್ಮ ನೀರು, ನಮ್ಮ ಹಕ್ಕು ಪಾದಯಾತ್ರೆಯನ್ನು ನಿಷೇಧಿಸಿದೆ. ಆರನೇ ಪ್ರತಿವಾದಿಯಾದ ಕಾಂಗ್ರೆಸ್ ಸ್ವಯಂಪ್ರೇರಿತವಾಗಿ ಪಾದಯಾತ್ರೆ ರದ್ದುಪಡಿಸುವುದಾಗಿ ತಿಳಿಸಿದೆ. ಹೀಗಾಗಿ, ಮನವಿಯನ್ನು ಬಾಕಿ ಉಳಿಸಿಕೊಳ್ಳುವ ಅಗತ್ಯವಿಲ್ಲ” ಎಂದು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿತು.

- Advertisement -

ವಿಚಾರಣೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ “ಎರಡು ದಿನಗಳ ಹಿಂದೆ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯ ಮತ್ತು ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಾವು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ರಾಜ್ಯ ಸರ್ಕಾರವು ಎಸ್ ಒಪಿ ಜಾರಿಯಲ್ಲಿ ತಾರತಮ್ಯದ ನೀತಿ ಅನುಸರಿಸುತ್ತಿದೆ. ಎಲ್ಲೆಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬುದನ್ನು ನಮ್ಮ ಆಕ್ಷೇಪಣೆಯಲ್ಲಿ ವಿವರಿಸಿದ್ದೇವೆ. ಇತರೆ ರಾಜಕೀಯ ಪಕ್ಷಗಳು ಸಭೆ, ಸಮಾರಂಭ ನಡೆಸಿವೆ. ನಮ್ಮ ಪಾದಯಾತ್ರೆಯನ್ನು ಮಾತ್ರ ನಿಷೇಧಿಸಿದ್ದಾರೆ. ಉಳಿದ ಉಲ್ಲಂಘನೆಗಳ ಬಗ್ಗೆ ಚಕಾರವೆತ್ತಿಲ್ಲ. ಜನವರಿ 4ರಂದು ಎಸ್ಒಪಿ ಜಾರಿಗೆ ಬಂದ ಬಳಿಕ ಸರ್ಕಾರದ ಆದೇಶ ಉಲ್ಲಂಘಿಸಿದ ಎಲ್ಲರ ವಿರುದ್ಧವೂ ಕ್ರಮಕೈಗೊಳ್ಳಬೇಕು” ಎಂದು ಪೀಠಕ್ಕೆ ಕೋರಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್ ಸುಬ್ರಹ್ಮಣ್ಯ, “ಎರಡು ದಿನಗಳ ಹಿಂದೆ ನ್ಯಾಯಾಲಯದ ಆದೇಶದ ಅನ್ವಯ ಅಂದೇ ವಿಪತ್ತು ನಿರ್ವಹಣಾ ಕಾಯಿದೆ ಅಡಿ ಕಾಂಗ್ರೆಸ್ ಪಾದಯಾತ್ರೆಯನ್ನು ನಿಷೇಧಿಸಲಾಗಿದೆ. ಅಂತರ ಜಿಲ್ಲಾ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದ್ದು, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಟಕ್ಕೆ ತಡೆ ವಿಧಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಆಯುಕ್ತರಿಗೆ ಕಟ್ಟುನಿಟ್ಟಾಗಿ ಎಸ್ಒಪಿ ಜಾರಿ ಮಾಡುವಂತೆ ನಿರ್ದೇಶಿಸಲಾಗಿದೆ. ಸಾರಿಗೆ ಆಯುಕ್ತರಿಗೆ ಸಹಕಾರ ನೀಡಲು ಆದೇಶ ಮಾಡಲಾಗಿದೆ” ಎಂದರು.

ಹೊಳ್ಳ ಅವರು “ಸಾಂಕ್ರಾಮಿಕವು ನಿಯಂತ್ರಣಕ್ಕೆ ಬಂದ ಮೇಲೆ ನಾವು ಪಾದಯಾತ್ರೆ ಮುಂದುವರಿಸುತ್ತೇವೆ. ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ 16 ಟಿಎಂಸಿ ನೀರು ಸಿಗಲಿದೆ” ಎಂದರು.

ಇದಕ್ಕೆ ಪೀಠವು “ಈ ವಿಚಾರ ನಮಗೆ ಸಂಬಂಧಿಸಿದ್ದಲ್ಲ. ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಎಸ್ಒಪಿ ಪಾಲಿಸಬೇಕು” ಎಂದಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಹೊಳ್ಳ ಅವರು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದರು. ಆಗ ಪೀಠವು “ಕಡೆಗೂ ಉತ್ತಮ ನಿರ್ಣಯ” ಎಂದಿತು. ಪೀಠದ ಅಭಿಪ್ರಾಯ ಗೌರವಿಸಿದ್ದೇವೆ ಎಂದು ಹೊಳ್ಳ ಅವರು ಹೇಳಿದಾಗ “ನಿಮ್ಮ ನಡೆಗೆ ನಮ್ಮ ಮೆಚ್ಚುಗೆ ಇದೆ” ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿತು.

Join Whatsapp