ಪ್ರಬುದ್ಧ ಸಮಾಜ ನಿರ್ಮಾಣದ ಗುರಿ; ಗ್ರಾಮೀಣ ಗ್ರಂಥಾಲಯಗಳು ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೆ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಸಾರ್ವಜನಿಕರಲ್ಲಿ ವಿದ್ಯೆ, ಜ್ಞಾನ, ಓದಿನ ಬಗೆಗೆ ಅಭಿರುಚಿ ಬೆಳೆಸಲು ಮುಕ್ತ ಸಾರ್ವಜನಿಕ ವ್ಯವಸ್ಥೆಯಾದ ಗ್ರಾಮ ಪಂಚಾಯತಿ ಗ್ರಂಥಾಲಯಗಳು ಶ್ರೀಸಾಮಾನ್ಯರ ವಿಶ್ವವಿದ್ಯಾಲಯಗಳಾಗಿ ಸಮಾಜದ ಜ್ಞಾನಾರ್ಜನೆಗೆ ಅರ್ಥಪೂರ್ಣ ಸಾಧನಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವುಗಳನ್ನು ಆಧುನೀಕರಣಗೊಳಿಸಿ ಅರಿವು ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

- Advertisement -

ಬಸವಣ್ಣನವರ “ಅರಿವೇ ಗುರು” ತತ್ವ ನಮ್ಮ ಸಮಾಜದ ಪ್ರತಿಯೊಬ್ಬರಲ್ಲೂ ಮಾರ್ದನಿಸಬೇಕು. ಅರಿವಿನೆಡಿಗಿನ ಸಮಾಜದ ಪ್ರತಿಯೊಬ್ಬರ ಪ್ರಯಾಣದ ಸಾಥಿಯಾಗಿ ನಮ್ಮ ಇಲಾಖೆ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯಗಳನ್ನು ಒದಗಿಸಲು ವಿಶೇಷ ಕಾರ್ಯಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ಸಾರ್ವಜನಿಕರಿಗೆ ಸಹಾಯವಾಗುವಂತೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ವಾರಾಂತ್ಯದಲ್ಲಿಯೂ ತೆರೆಯಲು ಅನುವು ಮಾಡಿಕೊಡಲಾಗುವುದು. ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಪ್ರಬುದ್ಧ ಸಮಾಜ ನಿರ್ಮಾಣದತ್ತ ಇರಿಸಿರುವ ಪ್ರಮುಖ ಹೆಜ್ಜೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಈ  ಕಾರ್ಯದ ಜೊತೆಯಾಗಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ (KRIDL) ತನ್ನ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (CSR) ಅನುದಾನದಡಿ ಕಲಬುರಗಿ ಜಿಲ್ಲೆಯ ಎಲ್ಲಾ 261 ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವಂತಹ ತಲಾ 41 ಕಲಿಕಾ ಪುಸ್ತಕಗಳನ್ನು ಒದಗಿಸಲು ಮುಂದೆ ಬಂದಿದ್ದು, ಇದಕ್ಕಾಗಿ 26 ಲಕ್ಷ ರೂ.ಗಳನ್ನು  ಕಲಬುರಗಿ ಜಿಲ್ಲಾ ಪಂಚಾಯತಿಗೆ ನೀಡುತ್ತಿದೆ. ಅಧ್ಯಯನ ಪುಸ್ತಕಗಳು ಐಎಎಸ್, ಕೆಎಎಸ್ ಸೇರಿದಂತೆ  ಪೊಲೀಸ್ ಕಾನ್ಸಟೇಬಲ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ,  ಗ್ರೂಪ್ ಸಿ, ಎಸ್ ಎಸ್ ಸಿ, ಐಬಿಪಿಎಸ್, ಆರ್ ಆರ್ ಬಿ ಪರೀಕ್ಷೆಗಳಿಗೆ ಪೂರಕವಾಗಲಿವೆ.



Join Whatsapp