ಸರಗಳ್ಳರ ವಿರುದ್ಧ ಬರಿಗೈಯಲ್ಲಿ ಹೋರಾಡಿದ ಬಾಲಕಿ; ಸಾಹಸಮಯ ವೀಡಿಯೋ ವೈರಲ್

Prasthutha|

ಲಕ್ನೋ: ಬೈಕಿನಲ್ಲಿ ಬಂದು ಕಿವಿಯೋಲೆ ಕಿತ್ತು ಪರಾರಿಯಾಗಲು ಯತ್ನಿಸಿದ ಇಬ್ಬರು ಕಳ್ಳರ ವಿರುದ್ಧ ಬಾಲಕಿಯೊಬ್ಬಳು ಬರಿಗೈಯಲ್ಲಿ ಹೋರಾಡಿದ ಘಟನೆ ಉತ್ತರ ಪ್ರದೇಶದ ಮೀರತ್’ನಲ್ಲಿ ನಡೆದಿದೆ.

- Advertisement -


ಬೈಕಿನಲ್ಲಿ ಬಂದ ಕಳ್ಳರನ್ನು ತಡೆಯಲು ಬಾಲಕಿ ಮತ್ತು ಆಕೆಯ ಅಜ್ಜಿ ಪ್ರಯತ್ನಿಸಿದ್ದು, ಬಾಲಕಿಯು ಬರಿಗೈಯಲ್ಲಿ ಹೋರಾಡುವ ದೃಶ್ಯ ಅದೇ ರಸ್ತೆಯ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಡಿ.10ರಂದು ನಡೆದ ಘಟನೆಯ ವೀಡಿಯೋವನ್ನು ಟ್ವಿಟರ್ ಬಳಕೆದಾರರೊಬ್ಬರು ಡಿ. 11 ರಂದು ಉತ್ತರ ಪ್ರದೇಶದ ಪೊಲೀಸರನ್ನು ಟ್ಯಾಗ್ ಮಾಡಿ ಹಂಚಿಕೊಂಡಿದ್ದಾರೆ. ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದಂತೆಯೇ ಕಾರ್ಯ ಪ್ರವೃತ್ತರಾದ ಮೀರತ್ ಪೊಲೀಸರು, ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಬಂಧನದ ವೇಳೆ ತಪ್ಪಿಸಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೀರತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, “ಲಾಲ್ಕುರ್ತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಿವಿಯೋಲೆ ಲೂಟಿ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಪೊಲೀಸರು ಆರೋಪಿಗಳ ವಿವರಗಳನ್ನು ಸಿಸಿಟಿವಿ ದೃಶ್ಯ ಆಧರಿಸಿ, ಪತ್ತೆ ಹಚ್ಚಿದ್ದರು. ಬಳಿಕ ಬಂಧನ ನಡೆಸಲು ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಜೀವಕ್ಕೆ ಅಪಾಯ ಉಂಟಾಗುವಂತೆ ನಡೆದುಕೊಂಡರು. ಈ ಹಿನ್ನೆಲೆಯಲ್ಲಿ ಕಾಲಿಗೆ ಗುಂಡು ಹಾರಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೌಶಿಕ್ ಹಾಗೂ ಸಚಿನ್ ಎಂದು ಗುರುತಿಸಲಾಗಿದೆ. ಘಟನೆ ನಡೆದು ಕೇವಲ ಆರು ಗಂಟೆಯೊಳಗೆ ಇಬ್ಬರನ್ನೂ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.


ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಸಖತ್ ವೈರಲ್ ಆಗುತ್ತಿದ್ದು, ಬಾಲಕಿಯ ಸಾಹಸಕ್ಕೆ ನೆಟ್ಟಿಗರು ‘ಶಹಬ್ಬಾಸ್’ ಎಂದಿದ್ದಾರೆ.

Join Whatsapp