ಕನ್ಯತ್ವ ಕಳೆದುಕೊಂಡಿದ್ದಾಳೆಂದು ಯುವತಿ ಮನೆಯವರ ಬಳಿ 10 ಲಕ್ಷ ರೂ. ಬೇಡಿಕೆ ಇಟ್ಟ ಗಂಡನ ಕುಟುಂಬ

Prasthutha|

ರಾಜಸ್ತಾನದಲ್ಲೊಂದು ಅಮಾನವೀಯ ‘ಕನ್ಯತ್ವ ಪರೀಕ್ಷೆ’ ಘಟನೆ ಬೆಳಕಿಗೆ

- Advertisement -

ಜೈಪುರ: ‘ಕನ್ಯತ್ವ ಪರೀಕ್ಷೆ’ಯಲ್ಲಿ ವಿಫಲಳಾಗಿದ್ದಾಳೆಂದು ಆರೋಪಿಸಿ ಯುವತಿಯೋರ್ವಳಿಗೆ ಆಕೆಯ ಗಂಡನ ಮನೆಯವರು ದೈಹಿಕ ದೌರ್ಜನ್ಯ ನಡೆಸಿದ್ದು, ಬಳಿಕ ಆಕೆಯ ತವರು ಮನೆಯವರ ಬಳಿ ಹತ್ತು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಘಟನೆ ರಾಜಸ್ತಾನದ ಬಿಲ್ವಾರಾದಲ್ಲಿ ನಡೆದಿದೆ.

ಮದುವೆಯಾಗಿ ಗಂಡನ ಮನೆಗೆ ಬಂದ 24 ವರ್ಷದ ಯುವತಿಯನ್ನು ಅಲ್ಲಿ ‘ಕುಕಡಿ ಪ್ರಥಾ’ (ಕನ್ಯತ್ವ ಪರೀಕ್ಷೆ) ಗೆ ಒಳಪಡಿಸಿದ್ದರು. ಈ ಪರೀಕ್ಷೆಯಲ್ಲಿ ಯುವತಿ ವಿಫಲಳಾಗಿದ್ದಾಳೆಂದು ಗಂಡನ ಮನೆಯವರು ಆರೋಪಿದ್ದು, ಮದುವೆಗೂ ಮೊದಲು ಕನ್ಯತ್ವ ಕಳೆದುಕೊಂಡಿದ್ದಾಳೆಂದು ಹಲ್ಲೆ ನಡೆಸಿದ್ದರು. ಅಲ್ಲದೇ ಅದೇ ದಿನ ಯುವತಿಯ ಮನೆಯವರ ಜೊತೆ ಕಾಪ್ ಪಂಚಾಯತ್ ನಿಂದ ಮಾತುಕತೆ ನಡೆಸಿದ್ದು, ಕನ್ಯತ್ವ ಕಳೆದುಕೊಂಡದಕ್ಕೆ ಪರಿಹಾರವಾಗಿ ಯುವತಿ ಮನೆಯವರು 10 ಲಕ್ಷ ರೂ. ನೀಡುವಂತೆ ಕೇಳಿಕೊಂಡಿದ್ದರು.

- Advertisement -

ಈ ಘಟನೆಯ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಭಾಗೋರ್ ಠಾಣೆಯ ಠಾಣಾಧಿಕಾರಿ ಅಯ್ಯೂಬ್ ಖಾನ್ ಹೇಳಿದ್ದಾರೆ.

ಈ ಘಟನೆ ಮೇ ತಿಂಗಳಲ್ಲಿ ನಡೆದಿದ್ದು, ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಕುಕಡಿ ಪ್ರಥಾ (ಕನ್ಯತ್ವ ಪರೀಕ್ಷೆ) ಇಲ್ಲಿನ ಸಂಸಿ ಅಲೆಮಾರಿ ಸಮುದಾಯದವರಲ್ಲಿ ಪ್ರಚಲಿತವಿರುವ ಸಂಪ್ರದಾಯವಾಗಿದೆ.

ಸಂತ್ರಸ್ತ ಯುವತಿಯು ಆಕೆಯ ಮದುವೆಗೆ ಮೊದಲು ನೆರೆಮನೆಯ ಯುವಕನಿಂದ ಅತ್ಯಾಚಾರಕ್ಕೆ ಒಳಗಾಗಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಯುವತಿಯ ಗಂಡನ ಮನೆಯವರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಂಡಲ್ ಉಪ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಕುಮಾರ್ ಹೇಳಿದ್ದಾರೆ.

Join Whatsapp