1200 ಕಿ.ಮೀ.ಸೈಕಲ್ ತುಳಿದು ದೇಶಾದ್ಯಂತ ಸುದ್ದಿಯಾಗಿದ್ದ ಬಾಲಕಿಯ ತಂದೆ ಸಾವು

Prasthutha|

2020ರ ಮಾರ್ಚ್ ಅಂತ್ಯದಲ್ಲಿ ದೇಶಾದ್ಯಂತ ಹೇರಲಾದ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಹದಿಮೂರು ವರ್ಷದ ಜ್ಯೋತಿ ಕುಮಾರಿ ಎಂಬ ಬಾಲಕಿ ತನ್ನ ತಂದೆಯನ್ನು ಗುರುಗಾಂವ್ ನಿಂದ ಬಿಹಾರದಲ್ಲಿರುವ ತಮ್ಮ ಗ್ರಾಮಕ್ಕೆ ಕರೆತರಲು ಬರೋಬ್ಬರಿ 1200 ಕಿ.ಮೀ ಸೈಕಲ್ ತುಳಿದದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಈ ಘಟನೆಗೆ ಇಡೀ ವಿಶ್ವವೇ ಮರುಕ ಪಟ್ಟಿತ್ತು. ಇದೀಗ ಜ್ಯೋತಿಯ ತಂದೆ ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.ಜ್ಯೋತಿಯ ತಂದೆ ಮೃತಪಟ್ಟಿರುವುದನ್ನು ಜಿಲ್ಲಾಧಿಕಾರಿ ಡಾ.ಎಸ್.ಎಂ.ತ್ಯಾಗರಾಜನ್ ದೃಢಪಡಿಸಿದ್ದಾರೆ.

- Advertisement -

ತನ್ನ ಸಾಹಸಮಯ ಪ್ರಯಾಣದ ಕುರಿತು ಹೊರಬರುವ ಚಿತ್ರದಲ್ಲಿ ನಟಿಸಲು ಜ್ಯೋತಿ ಸಜ್ಜಾಗಿದ್ದಾರೆ. ಆತ್ಮನಿರ್ಭರ್ (ಸ್ವಾವಲಂಬಿ) ಎಂಬ ಹೆಸರಿನ ಚಿತ್ರದಲ್ಲಿ ಅವರು ಸ್ವತಃ ನಟಿಸಲಿದ್ದಾರೆ. ಈ ಮಧ್ಯೆಯೇ ಆಕೆಯ ತಂದೆ ವಿಧಿವಶರಾಗಿದ್ದಾರೆ. ಕಳೆದ ವರ್ಷ ಲಾಕ್ಡೌನ್ ವೇಳೆ ಬಿಹಾರ ಮೂಲದ ಬಾಲಕಿಯ ತಂದೆ ಮೋಹನ್ ಪಾಸ್ವಾನ್ ಗುರುಗಾಂವ್ ನಲ್ಲಿ ಸಿಲುಕಿಕೊಂಡಿದ್ದರು. ಯಾವುದೇ ವಾಹನ ಇಲ್ಲದ ಕಾರಣ ಪಾಸ್ವಾನ್ ಅವರ ಪುತ್ರಿ ಜ್ಯೋತಿ ಕುಮಾರಿ ತಂದೆಯನ್ನು ಸೈಕಲ್ ಹಿಂಭಾಗದಲ್ಲಿ ಕೂರಿಸಿ 1200 ಕಿ.ಮೀ.ದೂರದಲ್ಲಿರುವ ತಮ್ಮ ಹಳ್ಳಿಗೆ ಕರೆತಂದಿದ್ದಳು.

- Advertisement -

ಈ ಪ್ರಯಾಣದ ಬಗ್ಗೆ ಮಾಧ್ಯಮಗಳ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಬಿತ್ತರಗೊಂಡಿದ್ದವು. ಬಳಿಕ ಬಾಲಕಿ ಬಿಹಾರದ ‘ಸೈಕಲ್ ಹುಡುಗಿ’ ಎಂದೇ ಖ್ಯಾತಿ ಗಳಿಸಿದಳು. ಮಾತ್ರವಲ್ಲ ಅಧಿಕಾರಿಗಳು ಆಕೆಗೆ ಕ್ರೀಡಾ ಬೈಸಿಕಲ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಜೊತೆಗೆ ಕ್ರೀಡೆಯಲ್ಲಿ ತರಬೇತಿ ನೀಡಲು ಹಲವಾರು ರೀತಿಯ ನೆರವನ್ನು ಘೋಷಿಸಲಾಗಿತ್ತು

Join Whatsapp