ಬೆಂಗಳೂರು; ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಕೆಪಿಸಿಸಿ ಮತ್ತು ಏಐಸಿಸಿ ಆಶಯಗಳಿಗೆ ತಕ್ಕಂತೆ ಯುವ ಸಮೂಹವನ್ನು ಪರಿಣಾಮಕಾರಿಯಾಗಿ ಸಂಘಟನೆ ಮಾಡಲು ಪ್ರದೇಶ ಯುವ ಕಾಂಗ್ರೆಸ್ ಸಮಿತಿ [ಕೆಪಿವೈಸಿಸಿ] ತೀರ್ಮಾನ ಕೈಗೊಂಡಿದೆ. ಬಿಜೆಪಿ ಮತ್ತು ಸಂಬಂಧಿತ ಮತೀಯ ಶಕ್ತಿಗಳು ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುವುದನ್ನು ತಡೆಯಲು ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.
ಹೊಸಪೇಟೆಯಲ್ಲಿ ನಡೆದ ಮೂರು ದಿನಗಳ ಕೆ.ಪಿ.ವೈ.ಸಿ.ಸಿಯ “ಯುವ ಕ್ರಾಂತಿಗೆ ಬುನಾದಿ” ಕುರಿತಾದ ನಾಯಕತ್ವ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಘಟಕಗಳ ಜತೆ ಸಮನ್ವಯತೆಯಿಂದ ಹಾಗೂ ಭುಜಕ್ಕೆ ಭುಜ ಕೊಟ್ಟು ಕಾರ್ಯನಿರ್ವಹಿಸಲು ಮತ್ತು ಬಿಜೆಪಿ ಮತ್ತು ಮತೀಯ ಶಕ್ತಿಗಳ ವಿರುದ್ಧ ಯುವ ಪಡೆಯನ್ನು ಸಜ್ಜುಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಗೆ ಉತ್ಸಾಹಿ ಯುವ ನಾಯಕರು ಹೆಚ್ಚಿನ ಪ್ರಮಾಣದಲ್ಲಿ ಸೇರ್ಪಡೆಯಾಗುತ್ತಿದ್ದು, ಯುವ ಶಕ್ತಿ ಕಾಂಗ್ರೆಸ್ ನತ್ತ ಆಸಕ್ತವಾಗಿರುವ ಸೂಚನೆ ಇದಾಗಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದ್ದು, ಪಕ್ಷದ ಪ್ರಮುಖ ಘಟಕಗಳಿಗೆ ಯುವ ಶಕ್ತಿ ಇನ್ನಷ್ಟು ಉತ್ಸಾಹ ಮತ್ತು ಚೈತನ್ಯ ತುಂಬಬೇಕು ಎಂದು ಸೂಚಿಸಲಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಉಪ ಚುನಾವಣೆಗಳಲ್ಲಿ ಯುವ ಕಾಂಗ್ರೆಸ್ ಪರಿಣಾಮಕಾರಿಯಾಗಿ ತೊಡಗಿಕೊಂಡು ಜನ ವಿರೋಧಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ಹಾಗೂ ಕಾಂಗ್ರೆಸ್ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಲು ಶಕ್ತಿ ಮೀರಿ ಶ್ರಮಿಸಲು ನಿರ್ಧರಿಸಿದೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ತಜ್ಞರಿಂದ ನಾಯಕತ್ವ ತರಬೇತಿ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.
ಯುವ ಕಾಂಗ್ರೆಸ್ ಗೆ ಶೇ 90 ರಷ್ಟು ಹೊಸಬರು ಆಯ್ಕೆಯಾಗಿದ್ದು, ಯುವ ನಾಯಕರಿಗೆ ಅಗತ್ಯ ತರಬೇತಿ ದೊರಕಿಸಿ ಭವಿಷ್ಯದ ನಾಯಕರನ್ನಾಗಿ ರೂಪಿಸುವುದು ಈ ಕಾರ್ಯಗಾರದ ಉದ್ದೇಶವಾಗಿತ್ತು. ಹೂವಿನ ಹಡಗಲಿಯ ಸ್ಥಳೀಯ ಕಾಂಗ್ರೆಸ್ ಶಾಸಕ ಬಿ.ಟಿ ಪರಮೇಶ್ವರ್ ನಾಯ್ಕ, ಸ್ತ್ರೀವಾದಿ, ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ಹಿರಿಯ ಪತ್ರಕರ್ತ, ದಿನೇಶ್ ಅಮಿನ್ ಮಟ್ಟು, ಕೆಪಿಸಿಸಿ ಮಾಧ್ಯಮ ವಕ್ತಾರ, ಚಿಂತಕ ನಿಕೇತ್ ರಾಜ್ ಮೌರ್ಯ ಅವರು ವಿವಿಧ ವಿಷಯಗಳ ಕುರಿತು ಬೆಳಕು ಚೆಲ್ಲಿದರು. ಭಾರತೀಯ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಲಂಬಾ, ಅನಿಲ್ ಕುಮಾರ್ ಯಾದವ್, ಕಾರ್ಯದರ್ಶಿಗಳಾದ ವಿದ್ಯಾ ಬಾಲಕೃಷ್ಣ, ದ್ವಿವೇದಿ ಸುರಭಿ ಮತ್ತಿತರರು ಪಾಲ್ಗೊಂಡು ಯುವ ಕಾರ್ಯಕರ್ತರಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ, ಜನ ವಿರೋಧಿ ನೀತಿಗಳ ವಿರುದ್ಧ ನಿರ್ಣಾಯಕ ಹೋರಾಟ ಮಾಡುವ ಕುರಿತು ಮಾಹಿತಿ ನೀಡಿದರು.
ಪ್ರತಿದಿನದ ಕಾರ್ಯಾಗಾರಕ್ಕೂ ಮುನ್ನ ಎಲ್ಲಾ ಪದಾಧಿಕಾರಿಗಳು ಹೊಸಪೇಟೆಯ ಗಾಂಧಿ ಪ್ರತಿಮೆ ಸೇರಿ ವಿವಿಧ ಭಾಗಗಳಲ್ಲಿ ಶ್ರಮದಾನ ಮಾಡಿ ಪರಿಸರ ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಕುರಿತು ಮಾಹಿತಿ ನೀಡಿದ ಎಂ.ಎಸ್. ರಕ್ಷಾ ರಾಮಯ್ಯ, ಬೆಲೆ ಏರಿಕೆ ಸೇರಿದಂತೆ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡುವ, ಕೋವಿಡ್ ಸೇರಿದಂತೆ ಯಾವುದೇ ರೀತಿಯ ಆಪತ್ಕಾಲೀನ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಕುರಿತಂತೆ ಯುವ ನಾಯಕರನ್ನು ಸಜ್ಜುಗೊಳಿಸುವ ಪ್ರಯತ್ನ ನಡೆಸಲಾಯಿತು ಎಂದರು.
ಜನ ವಿರೋಧಿ ನೀತಿಗಳ ವಿರುದ್ಧ ಯುವ ಕಾಂಗ್ರೆಸ್ ಪರಿಣಾಮಕಾರಿಯಾಗಿ ಹೋರಾಟ ಮಾಡಿದ ಸಂದರ್ಭಗಳಲ್ಲಿ ಸರ್ಕಾರಗಳು ಬದಲಾಗಿದ್ದು, ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದೆ. ಇದು ಕೂಡ ಬದಲಾವಣೆ ಕಾಲವಾಗಿದ್ದು, ಎಲ್ಲಾ ಜನತೆ, ಅದರಲ್ಲೂ ವಿಶೇಷವಾಗಿ ಯುವ ಸಮೂಹವನ್ನು ಬದಲಾವಣೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರಕ್ಷಾ ರಾಮಯ್ಯ ಹೇಳಿದರು.