ಕಠ್ಮಂಡು: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆಗೆ ಕೋರ್ಟ್ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 18 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾಗಿ ಈ ಶಿಕ್ಷೆ ನೀಡಲಾಗಿದೆ.
ಸಂದೀಪ್ ಲಮಿಚಾನೆ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ದೋಷಿ ಎಂದು ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿದ್ದು, ಶಿಕ್ಷೆ ಕಾಯ್ದಿರಿಸಿತ್ತು. ಇದೀಗ 8 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಶಿಶಿರ್ ರಾಜ್ ಧಾಕಲ್ ವಿಚಾರಣೆ ನಂತರ 8 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
2022ರಲ್ಲಿ ಲಾಮಿಚಾನೆ ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿದ್ದ ಕೆರಿಬಿಯನ್ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗ ಅವರ ಮೇಲೆ ಅತ್ಯಾಚಾರದ ದೂರು ದಾಖಲಾಗಿದ್ದರೂ ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್ ಜಾಮೀನುರಹಿತ ವಾರಂಟ್ಹೊರಡಿಸಿತ್ತು. ಬಳಿಕ ತವರಿಗೆ ಮರಳುವಾಗ ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಕ್ಕೆ ಪಡೆದು ಕೋರ್ಟ್ಗೆ ಹಾಜರುಪಡಿಸಿದ್ದರು.
ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಅವರು ಮೂರು ತಿಂಗಳು ಜೈಲಿನಲ್ಲಿದ್ದರು. ಸಂದೀಪ್ ಮೇಲ್ಮನವಿ ಸಲ್ಲಿಸಿದ್ದರಿಂದ ಹೈಕೋರ್ಟ್ಅವರಿಗೆ ಜಾಮೀನು ನೀಡಿತ್ತು.
ಕಳೆದ ವರ್ಷ ಜ.12 ರಿಂದ ಲಾಮಿಚಾನೆ ಜಾಮೀನಿನ ಮೇಲೆ ಹೊರಬಂದಿದ್ದರು. ಅಲ್ಲದೆ ನೇಪಾಳ ಪರ ಕ್ರಿಕೆಟ್ ಕೂಡ ಆಡುತ್ತಿದ್ದರು. ಇದೀಗ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಆದ ಕಾರಣ ಮುಂದೆ ಕ್ರಿಕೆಟ್ ಆಡಲು ಸಾಧ್ಯವಾಗಲಿದೆಯೇ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
2022ರಲ್ಲಿ ಸಂದೀಪ್ ಲಮಿಚಾನೆ ವಿರುದ್ಧ ಹುಡುಗಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಈ ಆರೋಪದ ಬಳಿಕ ಲಾಮಿಚಾನೆ ಬಂಧನ ಕೂಡ ಆಗಿತ್ತು. ಕ್ರಿಮಿನಲ್ ಕೋಡ್ 2074 ರ ಸೆಕ್ಷನ್ 219 ರ ಅಡಿಯಲ್ಲಿ ಕ್ರಿಕೆಟಿಗನ ಮೇಲೆ ಆರೋಪ ಹೊರಿಸಲಾಗಿತ್ತು.
ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಪರ ಆಡಿದ್ದ ಸಂದೀಪ್ ಲಮಿಚಾನೆ ಒಟ್ಟು 9 ಪಂದ್ಯಗಳನ್ನು ಆಡಿ 13 ವಿಕೆಟ್ ಪಡೆದಿದ್ದಾರೆ. 2018 ಮತ್ತು 2019ರ ಆವೃತ್ತಿಯಲ್ಲಿ ಅವರು ಆಡಿದ್ದರು.