ಇಂದು 18ನೇ ಲೋಕಸಭೆಯ ಮೊದಲ ಅಧಿವೇಶನ

Prasthutha|

- Advertisement -

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೊಸದಾಗಿ ಆಯ್ಕೆಯಾದ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಳಿಕ ಸ್ಪೀಕರ್ ಆಯ್ಕೆ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಏಪ್ರಿಲ್-ಜೂನ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ನಂತರ ಇದು ಮೊದಲ ಲೋಕಸಭಾ ಅಧಿವೇಶನವಾಗಿದೆ. 18 ನೇ ಲೋಕಸಭೆಯಲ್ಲಿ ಎನ್ಡಿಎ 293 ಸ್ಥಾನಗಳೊಂದಿಗೆ ಬಹುಮತವನ್ನು ಹೊಂದಿದೆ. ಬಿಜೆಪಿ 240 ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ 99 ಸ್ಥಾನಗಳನ್ನು ಹೊಂದಿದೆ.

- Advertisement -

ಬೆಳಿಗ್ಗೆ 11 ಗಂಟೆಯಿಂದ ಪ್ರಧಾನಿ ಮೋದಿ ಮತ್ತು ಅವರ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸಲಿದೆ. ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇತರ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರ ನಂತರ, ವಿವಿಧ ರಾಜ್ಯಗಳ ಸಂಸದರು ವರ್ಣಮಾಲೆಯ ಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರರ್ಥ ಅಸ್ಸಾಂನಿಂದ ಹೊಸದಾಗಿ ಆಯ್ಕೆಯಾದ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 280 ಸದಸ್ಯರು ಇಂದು ಹಾಗೂ 264 ಸದಸ್ಯರು ಮಂಗಳವಾರ ಪ್ರಮಾಣ ಸ್ವೀಕರಿಸಲಿದ್ದಾರೆ.

ಹಂಗಾಮಿ ಸ್ಪೀಕರ್‌ ಆಗಿ ಆಯ್ಕೆಯಾದ ಹಿರಿಯ ಸದಸ್ಯ ಭತೃಹರಿಗೆ ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಬೆಳಗ್ಗೆ ಪ್ರಮಾಣ ವಚನ ಬೋಧಿಸುತ್ತಾರೆ. ಆ ಬಳಿಕ ಬೆಳಗ್ಗೆ 11ಗಂಟೆಗೆ ಸಂಸತ್‌ಗೆ ಆಗಮಿಸುತ್ತಾರೆ. ನೂತನ ಸ್ವೀಕರ್‌ ಆಯ್ಕೆವರೆಗೆ ಹಂಗಾಮಿ ಸ್ಪೀಕರ್‌ ಅಧಿವೇಶನದ ಕಲಾಪಗಳ ನಿರ್ವಹಿಸಲಿದ್ದಾರೆ. ಲೋಕಸಭೆ ಕಾರ್ಯದರ್ಶಿ ಉತ್ಪಲ್‌ ಕುಮಾರ್‌ ಸಿಂಗ್‌ ನೂತನ ಸಂಸತ್‌ ಸದಸ್ಯರಿಗೆ ಆಸನಗಳ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಿದ್ದಾರೆ.



Join Whatsapp