ಉಡುಪಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ತೀವ್ರಗೊಳಿಸಲು ನಿರ್ಧಾರ: ಕ್ಯಾಂಪಸ್ ಫ್ರಂಟ್

Prasthutha: June 21, 2021

ಉಡುಪಿ : ಉಡುಪಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಅಸೀಲ್ ಅಕ್ರಂ ತಿಳಿಸಿದ್ದಾರೆ.


ಉಡುಪಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಗೆ ಒಂದು ಸುಸಜ್ಜಿತ ವೈದ್ಯಕೀಯ ಕಾಲೇಜು ಇರಬೇಕು ಎಂಬುದು ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ. ಆದರೆ ಆ ಬೇಡಿಕೆ ಇನ್ನೂ ಈಡೇರಿಲ್ಲ. ವಿದ್ಯಾರ್ಥಿಯೋರ್ವ ಆತನ ಶಾಲಾ ಜೀವನದಲ್ಲೇ ವೈದ್ಯನಾಗಬೇಕೆಂಬ ಕನಸನ್ನು ಇಟ್ಟುಕೊಂಡು ಅದರ ಹಿಂದೆ ಬಹಳಷ್ಟು ಶ್ರಮವಹಿಸುತ್ತಾನೆ. ಆದರೆ ನೀಟ್ ಪರೀಕ್ಷೆ ಬರೆದ ನಂತರ ಕಾಲೇಜು ಪ್ರವೇಶ ಸಮಯದಲ್ಲಿ ಅಲ್ಲಿಯ ಶುಲ್ಕ ಪ್ರಮಾಣ ನೋಡಿದಾಗ ಅವನ ಕನಸನ್ನು ಕೈಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಗಟ್ಟಲೆ ಫೀಸು ನೀಡಲು ಸಾಧ್ಯವಾಗದೆ, ಮತ್ತು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದೆ ಇರುವುದರಿಂದ ಆ ವಿದ್ಯಾರ್ಥಿ ಶಿಕ್ಷಣದಿಂದ ಹಿಂಜರಿಯುತ್ತಾನೆ. ಈ ವಿಚಾರದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಉಲ್ಲೇಖಿಸಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.


ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಉಡುಪಿ ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿ ಸರ್ಕಾರಿ ಭೂಮಿ ಇದ್ದರೂ ಜಿಲ್ಲಾಧಿಕಾರಿ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಸರ್ಕಾರದ ಭೂಮಿ ಇಲ್ಲ ಎಂದು ಹೇಳಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿ ಈ ರೀತಿಯ ಉತ್ತರ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಸುಮಾರು 19 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇವೆ. ಯಾವ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲವೋ, ಅಲ್ಲಿ ಇರುವಂತಹ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಇಂತಿಷ್ಟು ಶೇಕಡದಷ್ಟು ಸರ್ಕಾರದ ಕೋಟಾ ಇದೆ. ಬುದ್ಧಿವಂತರ ಜಿಲ್ಲೆ ಎಂದು ಖ್ಯಾತಿ ಪಡೆದ ಉಡುಪಿ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಕೂಡ ಇಲ್ಲ, ಇಲ್ಲಿರುವಂತಹ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರದ ಕೋಟಾ ಕೂಡ ಇಲ್ಲ. ಇದು ಉಡುಪಿ ಜಿಲ್ಲೆಗೆ ಆಗಿರುವಂತಹ ದೊಡ್ಡ ಅವಮಾನ ಮತ್ತು ದೊಡ್ಡ ಅನ್ಯಾಯ ಕೂಡ ಹೌದು. ಜಿಲ್ಲೆಯ ಉಸ್ತುವಾರಿ ಸಚಿವರಾದ ಗೃಹಮಂತ್ರಿಯವರಿಗೆ ಇದರ ಬಗ್ಗೆ ಗಮನ ಕೊಡಲು ಸಮಯವೇ ಇಲ್ಲದಾಗಿದೆ, ಜಿಲ್ಲೆಯ ಅಭಿವೃದ್ದಿಗೆ ಶ್ರಮವಹಿಸಲು ಸಾಧ್ಯವಾಗದ ಇವರು ರಾಜ್ಯದ ಗೃಹಮಂತ್ರಿ ಸ್ಥಾನವನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂದು ಅವರು ಪ್ರಶ್ನಿಸಿದರು.


ಈಗಾಗಲೇ ಈ ವಿಚಾರದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು ತಯಾರಾಗಿದೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ #UdupiDemandsGovtMedicalCollege ಎಂಬ ಚಳುವಳಿಯನ್ನು ಆರಂಭಿಸಿದ್ದು, ಇದರ ಭಾಗವಾಗಿ ಈಗಾಗಲೇ ಹಲವಾರು ಜನಸಾಮಾನ್ಯರನ್ನು, ಪ್ರಗತಿಪರ ಚಿಂತಕರನ್ನು ಮತ್ತು ಇಲ್ಲಿರುವಂತಹ ವಿವಿಧ ಸಾಮಾಜಿಕ ಮತ್ತು ವಿದ್ಯಾರ್ಥಿ ಸಂಘಟನೆಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಎಲ್ಲರೂ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ, ಮುಂದಿನ ದಿನಗಳಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಒಂದು ಐತಿಹಾಸಿಕ ಆಂದೋಲನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನೇತೃತ್ವದಲ್ಲಿ ನಡೆಯಲಿದೆ. ಉಡುಪಿಯ ಜನರು ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಹೋರಾಟವು ತೀವ್ರ ಸ್ವರೂಪ ಪಡೆಯಲಿಕ್ಕಿದೆ ಎಂದು ಅವರು ಎಚ್ಚರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಸೂದ್ ಮನ್ನಾ , ಕ್ಯಾಂಪಸ್ ಫ್ರಂಟ್ ಕುಂದಾಪುರ ಜಿಲ್ಲಾ ಕಾರ್ಯದರ್ಶಿ ಅನ್ಫಾಲ್ ಗಂಗೊಳ್ಳಿ , ಉಡುಪಿ ಜಿಲ್ಲಾ ಮುಖಂಡರಾದ ನವಾಜ್ ಉಡುಪಿ, ಝಮ್ ಝಮ್ ಉಪಸ್ಥಿತರಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!