ಟೋಕಿಯೋ: ಕಳೆದೊಂದು ದಶಕದಿಂದ ಜಗತ್ತಿನ ಎಲ್ಲ ಕಡೆ ಜನಪ್ರಿಯವಾಗಿರುವ ಸುಡೊಕು ಪಝಲಿಗೆ ಆ ಜನಪ್ರಿಯತೆ ಒದಗಿಸಿದ ಮಕಿ ಕಾಜಿ ಟೋಕಿಯೋದಲ್ಲಿ ಆಗಸ್ಟ್ 10ರಂದು ನಿಧನರಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸುಡೊಕು ಎಂದರೆ ಎಲ್ಲ ಸಮಾನ ಅಂಕಿಗಳು ಎಂದು. ಈ ಜಪಾನೀ ಹೆಸರನ್ನು ನೀಡಿದವರು ಮಕಿ ಆಗಿದ್ದು, ಅದೀಗ ಲೋಕಪ್ರಿಯವಾಗಿದೆ.
18ನೇ ಶತಮಾನದಲ್ಲಿ ಸ್ವಿಜರ್ ಲ್ಯಾಂಡ್ನ ಲೆಯಾನ್ ಹಾರ್ಟ್ ಎಂಬ ಗಣಿತ ತಜ್ಞರು ಈ ಸಂಖ್ಯೆ ಚೋದ್ಯವನ್ನು ರೂಪಿಸಿದರು. ಆದರೆ ಅದು ಮೂಲೆಯಲ್ಲೇ ಇತ್ತು. 1980ರಲ್ಲಿ ಅಮೆರಿಕದಲ್ಲಿ ಅದು ಕೆಲವೆಡೆ ಪ್ರಕಟವಾಯಿತಾದರೂ ಜನಪ್ರಿಯತೆ ಗಳಿಸಲಿಲ್ಲ. ಮಕಿ ಕಾಜಿಯವರು ಜಪಾನ್ ಮತ್ತು ಅಮೆರಿಕದ ಪತ್ರಿಕೆಗಳಲ್ಲಿ ಸುಡೊಕು ಎಂದು ಹೆಸರಿಟ್ಟು ಪರಿಚಯಿಸಿದರು. ಅದು ಕಳೆದೊಂದು ದಶಕದಿಂದ ಲೋಕ ಪ್ರಸಿದ್ಧ ಎನಿಸಿದೆ.