ರಮಝಾನಿನ ಪ್ರಯೋಗಶೀಲತೆ

Prasthutha|

ಮನುಷ್ಯನ ಮನಸ್ಸಿನಲ್ಲಿ ಚೈತನ್ಯ ಮತ್ತು ಉಲ್ಲಾಸ ತುಂಬುವ ಹೊಸ ಅನುಭೂತಿಯಾದ ರಮಳಾನ್ ದೇಹಕ್ಕೆ ಮಾತ್ರವಲ್ಲ ಮನುಷ್ಯನ ಆತ್ಮಕ್ಕೂ ಶಕ್ತಿ ಮತ್ತು ಬೆಳಕನ್ನು ತುಂಬುತ್ತದೆ. ಪವಿತ್ರ ರಮಳಾನ್(ರಂಝಾನ್) ನಮ್ಮ ಮುಂದಿದೆ. ಮನಸ್ಸುಗಳ ಮಾಲಿನ್ಯವನ್ನು ಪರಿಶುದ್ಧ ಗೊಳಿಸುವ ಪಾಠದೊಂದಿಗೆ ಕಳೆದು ಹೋದ 2 ರಂಝಾನ್‌ ಗಳು ನೋವಿನ ಅನುಭವವನ್ನು ನೀಡಿದ್ದು ಈ ಸಂದರ್ಭದಲ್ಲಿ  ನೆನಪಿಸಿಕೊಳ್ಳಬೇಕು.

- Advertisement -

‘ಸುಟ್ಟುಹಾಕಿರಿ’ ಎನ್ನುವ ಸಂದೇಶ ಸಾರುವ ರಂಝಾನ್ ಕುರ್‌ ಆನಿನ ಮುಖಾಂತರ ಅಜ್ಞಾನವನ್ನು ಸುಟ್ಟು ಹಾಕುತ್ತಿರುವುದು ಅರ್ಥಪೂರ್ಣ ಈಮಾನಿನ ಶಕ್ತಿಯ ಮುಖಾಂತರ ಎಲ್ಲಾ ತ್ಯಾಗಗಳನ್ನು ಸಹಿಸಿ ಬದ್ರ್ ರಣಾಂಗದಲ್ಲಿ ವೈರಿಗಳ ಅಹಂಕಾರದ ರೆಕ್ಕೆಗಳನ್ನು ಸುಟ್ಟು ಹಾಕಿದ್ದು ಮತ್ತು ಸತ್ಯ ವಿಶ್ವಾಸದ ಬೆಳಕನ್ನು ಹರಡಿದ್ದು ಪವಿತ್ರ ರಂಝಾನಿನಲ್ಲಾಗಿತ್ತು. ಪ್ರಸಕ್ತ ಸನ್ನಿವೇಶದಲ್ಲಿ ಜಗತ್ತಿನಲ್ಲೇ ಒಂದು ರೀತಿಯ ಸಮರವನ್ನು ನಾವು ಕಾಣುತ್ತಿದ್ದೇವೆ. ಪ್ರತಿಯೊಬ್ಬನೂ ವೈಯುಕ್ತಿಕವಾಗಿಯೋ, ಸಾಮೂಹಿಕವಾಗಿಯೋ ಹೋರಾಟದಲ್ಲಿರುವುದು ಕಾಣುತ್ತಿದ್ದೇವೆ. ಪ್ರಸಕ್ತ ಭಾರತದಲ್ಲಿ ಈ ರಂಝಾನ್ ಮತ್ತೊಂದು ರೀತಿಯ ಕರಿಛಾಯೆಯೊಂದಿಗೆ ಆಗಮಿಸುತ್ತಿದೆ.

ಹಕ್ಕುಗಳು ಕಸಿಯಲ್ಪಟ್ಟು ಮರ್ದಿತರನ್ನು ಮತ್ತಷ್ಟು ಮರ್ದನಗೊಳಿಸುವ ಹುನ್ನಾರಗಳೊಂದಿಗೆ ರಾಜಿಯಾದ ಆಡಳಿತ ಮತ್ತು ಮತ್ತೊಮ್ಮೆ ನಮ್ಮನ್ನು ಪರೀಕ್ಷಿಸಲೆಂದೇ ಆಗಮಿಸಿದ ರಂಝಾನ್ ನಮ್ಮೆದುರಿಗಿದೆ. ಒಳಿತಿನೊಂದಿಗೆ ಸಾಮಿಪ್ಯ ಮತ್ತು ಕೆಡುಕಿನೊಂದಿಗೆ ಹೋರಾಟ ರಂಝಾನ್ ಸಾರುವ ಸಂದೇಶವೆಂದು ವಾದಿಸುವ ನಮಗೆ ಪ್ರಾಯೋಗಿಕವಾಗಿ ಇಳಿಯಲೆಂದೇ ಸೃಷ್ಟಿಕರ್ತನು ಇಂತಹ ಪರೀಕ್ಷೆಗಳೊಂದಿಗೆ ರಂಝಾನ್‌ನಲ್ಲಿ ನಮ್ಮನ್ನು ಒಂದುಗೂಡಿಸಿದ್ದಾನೆ.

- Advertisement -

ಈ ದೇಶದಲ್ಲಿ ಈಗಿರುವ ವ್ಯವಸ್ಥೆಗಳು ಅದು ಅಳಿಯುವಂತದಲ್ಲ. ಅದು ಹೀಗೆ ಇರಲಿದೆ, ನಮ್ಮಿಂದೇನೂ ಮಾಡಲಾಗುವುದಿಲ್ಲ ಎಂದು ಆಲೋಚಿಸಿ ಸುಮ್ಮನಿದ್ದು ಬಿಡುವವರ ಮನಸ್ಥಿತಿಯನ್ನು ಕುರ್‌ ಆನ್ ಖಂಡಿಸಿ ಮಾತನಾಡಲು ಹೊಸತನ್ನು ಬಯಸದ, ಬದಲಾವಣೆಗೆ ಒಡ್ಡಿಕೊಳ್ಳಲು ಸಿದ್ಧವಾಗದ ಸಮೂಹವನ್ನು ಅಲ್ಲಾಹನು ಬದಲಾಯಿಸುವುದಿಲ್ಲವೆಂದು ಪವಿತ್ರ ಕುರ್‌ ಆನ್ ಹೇಳುತ್ತದೆ. (13:11). ಮಾತ್ರವಲ್ಲ ಒಂದು ಸಮೂಹ ತುಳಿತಕ್ಕೊಳಗಾಗಿದ್ದರು ಬದಲಾವಣೆಯ ಪ್ರಜ್ಞೆಯು ಅದರಲ್ಲಿ ಜಾಗೃತವಾಗಿದ್ದರೆ ಅಲ್ಲಾಹನು ಅವರಿಗೆ ಪ್ರಭುತ್ವ ಕೊಡುತ್ತಾನೆ ಎಂದೂ ಕುರ್‌ ಆನ್ ಸಾರುತ್ತದೆ. (28:5) . ಇಸ್ಲಾಮ್ ಪ್ರವಾದಿ ಇಬ್ರಾಹೀಂ, ಮೂಸಾ, ಮುಹಮ್ಮದ್(ಸ) ರನ್ನು ಪರಿಚಯಿಸುವುದೇ ಪ್ರಯೋಗ ಶೀಲ ವ್ಯಕ್ತಿತ್ವಗಳಾಗಿ.

ತನ್ನ ವಿರುದ್ಧ ಯಾರೂ ಪ್ರಶ್ನಿಸಬಾರದು ಎಂಬ ನಿಲುವನ್ನು ಹೊಂದಿದ್ದ ಫಿರ್‌ ಔನ್‌ ನನ್ನು ಮೂಸಾ ಪ್ರಶ್ನಿಸುತ್ತಲೇ ಬೆಳೆದರು. ಪ್ರವಾದಿ ಇಬ್ರಾಹೀಂ(ಅ)ರಂತೂ ಅಪ್ಪನನ್ನೇ ಪ್ರಶ್ನಿಸುತ್ತಾ ಬೆಳೆದರು. ನಕ್ಷತ್ರ, ಸೂರ್ಯ, ಚಂದ್ರ, ಆಕಾಶ ಯಾವುದನ್ನು ಸೃಷ್ಠಿಕರ್ತನೆಂದು ಸ್ವೀಕರಿಸಲೇ ಇಲ್ಲ. ಪ್ರವಾದಿ (ಸ) ರಂತೂ ಮನುಕುಲದ ಎಲ್ಲಾ ಶೋಷಣೆಗಳ ವಿರುದ್ಧ ಹೋರಾಡುತ್ತಲೇ ಸಾಕ್ಷಿಯಾದರು.

ನಿಜವಾಗಿಯೂ ರಂಝಾನ್ ಎಂಬುದು ಪ್ರಯೋಗಶೀಲತೆಯ ಹೆಸರು. ರಂಝಾನ್ ಸಾರುವ ಪ್ರಯೋಗಶೀಲತೆಯ ಸಂದೇಶವನ್ನು ಸತ್ಯವಿಶ್ವಾಸಿಗಳು ಅರ್ಥಮಾಡಿಕೊಂಡರೆ ಒಂದು ಸಂಭ್ರಮದ ಈದುಲ್‌ ಫಿತ್ರನ್ನು ಆಚರಿಸಲು ಸಾಧ್ಯವಾಗಬಹುದು.

ರಂಝಾನ್ ಕಳೆದು ಶವ್ವಾಲ್‌ ನ ಚಂದ್ರ ದರ್ಶನವಾಗುವುದರೊಂದಿಗೆ ಮಸೀದಿಗಳಲ್ಲಿ ‘‘ಅಲ್ಲಾಹು ಅಕ್ಬರ್’’ ಎನ್ನುವ ತಕ್ಬೀರ್ ಧ್ವನಿಗಳು ಮೊಳಗುತ್ತವೆ. ಅದರೊಂದಿಗೆ ಸಂಭ್ರಮ ಆಚರಣೆಗೆ ಎಲ್ಲಾ ಸಿದ್ಧತೆಗಳು ಆರಂಭಗೊಳ್ಳುತ್ತದೆ. ಆದರೆ ಈ ವರ್ಷದ ಈದುಲ್ ಫಿತ್ರ್ ಪ್ರಸಕ್ತ ಪರಿಸ್ಥಿತಿಯಲ್ಲಿ ಯಾವ ರೀತಿ ಸಂಭ್ರಮಿಸಬೇಕೆಂಬುದನ್ನು ಅವಲೋಕನ ಮಾಡುವಲ್ಲಿ ಮನುಷ್ಯ ಮನಸ್ಸನ್ನು ಪ್ರೇರೇಪಿಸಬೇಕು. ಬರೀ ಆ ದಿನದ ಸಂಭ್ರಮ ಮಾತ್ರವೇ ನಮ್ಮಲ್ಲಿರಬಹುದು ಎಂದಾದರೆ ಶಾಶ್ವತ ಸಂಭ್ರಮಕ್ಕೆ ನಮ್ಮಿಂದೇನು ನೀಡಿದ್ದೇವೆ ಎನ್ನುವುದನ್ನೂ ಆಲೋಚಿಸಬೇಕು. ಪ್ರಾಯೋಗಿಕವಾಗಿ ಬದುಕಲು ಪಾಠ ಕಲಿಸಿದ ರಂಝಾನ್‌ ನಿಂದ ನಾವೆಷ್ಟು ಕಲಿತಿದ್ದೇವೆ ಎಂಬುವುದು ಪುನಾವರ್ತನೆಯಾಗಬೇಕು. ಬದಲಾವಣೆ ಎಂದರೆ ಬರೀ ನಮ್ಮ ಆಚಾರ-ನಡೆ-ನುಡಿ ಇಬಾದತ್‌ ಗಳಲ್ಲಿ ಮಾತ್ರವಲ್ಲ ಸಮಾಜವು ಎದುರಿಸುತ್ತಿರುವ ಪ್ರತೀ ದೌರ್ಜನ್ಯಗಳ, ಮರ್ದನಗಳ ಬದಲಾವಣೆಗೆ ನಾವೆಷ್ಟು ತಯಾರಾದೆವು ಎಂಬುವುದೂ ಅವಲೋಕನವಾಗಬೇಕು. ಬದಲಾವಣೆಯ ಬಗ್ಗೆ ಆಲೋಚಿಸಿದ, ಪ್ರಯೋಗಕ್ಕೆ ಒಡ್ಡಿಕೊಳ್ಳದ, ಹೊಸತನ್ನು ಕನವರಿಸದ ಸ್ಥಿತಿಯಿಂದ ನಾವು ಯಾವಾಗ ಹೊರ ಬರಬೇಕು ಎನ್ನುವುದೂ ಅವಲೋಕನವಾಗಬೇಕು. ಅಲ್ಲಾಹನು ಸಹಾಯ ಮಾಡುವುದು ಹೊಸ ಸಮಾಜವೊಂದನ್ನು ಕಟ್ಟುವ ಕನಸೇ ಇಲ್ಲದ, ಇರುವುದರ ಜೊತೆಗೆ ಹೊಂದಿಕೊಂಡು ಬದುಕುವ ಸಮಾಜಕ್ಕಲ್ಲ; ಬದಲಾಗಿ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಮನಸ್ಥಿತಿಯ ಸಮಾಜಕ್ಕೆ ಎನ್ನುವ ಪಾಠವನ್ನು ಕಲಿಸುವ ರಂಝಾನ್‌ ನ ಸಂದೇಶವನ್ನು ಸಮಾಜಕ್ಕೆ ಅರ್ಥಮಾಡಿಕೊಡಲು ಈ ವರ್ಷದ ಈದ್-ಉಲ್-ಫಿತ್ರ್ ಸಾಕ್ಷಿಯಾಗಬೇಕು. ನಮ್ಮೊಳಗಿರುವ/ ನಮ್ಮ ಮಧ್ಯೆಯಿರುವ ಕಪಟ ವಿಶ್ವಾಸಿಗಳ ನಂಬಿಕೆಗಳನ್ನು ಹುಸಿಗೊಳಿಸಲು ಸಾಧ್ಯವಾಗಬೇಕು. ಜನರ ಮಧ್ಯೆ ಬಿಕ್ಕಟ್ಟನ್ನು, ಗೊಂದಲಗಳನ್ನು ಸೃಷ್ಟಿಸುತ್ತಾ, ಮರ್ದಿಸುವ ಜನರಿಗೆ ಸಹಾಯವಾಗುವ ರೀತಿಯಲ್ಲಿ ಕೆಲಸಕಾರ್ಯಗಳನ್ನು ಮಾಡುತ್ತಾ ಐಹಿಕ ಜೀವನವನ್ನು ಪ್ರೀತಿಸುವ ಜನರ ಎಲ್ಲಾ ಪ್ರಯತ್ನಗಳೂ ವಿಫಲವಾಗುವ ರೀತಿಯಲ್ಲಿ ಈ ರಂಝಾನ್ ನಮ್ಮನ್ನು ಶುಭ್ರಗೊಳಿಸುವಂತಾಗಬೇಕು. ಹಾಗಾದರೆ ಮಾತ್ರ ಕುರ್‌ ಆನ್ ಸ್ಥಾಪಿಸ ಬಯಸುವ ಸಮಾಜದ ನಿರ್ಮಾಣ ಸಾಧ್ಯ. ಆದ್ದರಿಂದ ಈ ಬಾರಿಯ ಈದುಲ್‌ ಫಿತ್ರ್ ಹೊಸ ಅರ್ಥ, ಹೊಸ ವ್ಯಾಖ್ಯಾನಗಳೊಂದಿಗೆ ಬದಲಾವಣೆಯ ಪ್ರಜ್ಞೆಯನ್ನು, ಪ್ರಯೋಗಶೀಲ ಮನಸ್ಸನ್ನು ಪಡೆಯುವ ಮುಖಾಂತರ ಸಂಭ್ರಮಿಸೋಣ.

Join Whatsapp