ಸಾಕಲು ಕಷ್ಟವಾಗುತ್ತಿದೆ ಎಂದು ಮಗುವನ್ನು ಕೆರೆಗೆ ಎಸೆದು ಕೊಂದ ದುಷ್ಟ ತಂದೆ

Prasthutha|

ಮೈಸೂರು: ಸಾಕಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಒಂದೂವರೆ ವರ್ಷದ ಮಗನನ್ನು ಕೆರೆಗೆ ಎಸೆದಿದ್ದು, ಮಗು ಮೃತಪಟ್ಟ ಆಘಾತಕಾರಿ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮಾಕೋಡಿನಲ್ಲಿ ನಡೆದಿದೆ. ಪೊಲೀಸರು ಕ್ರೂರಿ ತಂದೆಯಾದ ಗಣೇಶ್​ (30)ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -

ಆರೋಪಿ ತನ್ನ ಮಗನನ್ನು ಸಾಕಲು ಆಗದ ಕಾರಣ ಕೆರೆಗೆ ಎಸೆದು ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಿರಿಯಾಪಟ್ಟಣ ಮೂಲದ ಗಣೇಶ್​ಗೆ 2014ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಲಕ್ಷ್ಮೀ ಎಂಬವವರ ಜತೆ ಮದುವೆಯಾಗಿತ್ತು. ದೇವನಹಳ್ಳಿಯಲ್ಲಿ ವಾಸವಿದ್ದ ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿದ್ದು, ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡುವ ವೇಳೆ ಲಕ್ಷ್ಮೀ ಮೃತಪಟ್ಟಿದ್ದಾರೆ.

- Advertisement -

ಲಕ್ಷ್ಮೀ ಮೃತಪಟ್ಟ ಬಳಿಕ ಇಬ್ಬರು ಹೆಣ್ಣುಮಕ್ಕಳನ್ನು ತಾಯಿ ಅಂಜನಮ್ಮ ಬಳಿ ಬಿಟ್ಟಿದ್ದ ಗಣೇಶ್ ಪುಟ್ಟ ಮಗು ಕುಮಾರ್​ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ. ಕೆಲ ದಿನಗಳ ಬಳಿಕ ಊರಿಗೆ ವಾಪಸ್​ ಆಗಿದ್ದ ಗಣೇಶ್​ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ. ನಾಲ್ಕು ದಿನಗಳ ಹಿಂದೆ ತಾಯಿಯೊಂದಿಗೆ ವಿಚಾರ ಒಂದಕ್ಕೆ ಜಗಳವಾಡಿದ್ದು, ಕೋಪದಲ್ಲಿ ತನ್ನ ಮಗನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾನೆ.

ಬಳಿಕ ಊರಿನ ಮುಂಭಾಗದಲ್ಲಿರುವ ಕೆರೆಗೆ ಮಗನನ್ನು ಎಸೆದು ಪರಾರಿಯಾಗಿದ್ದಾನೆ. ನೀರಿನಲ್ಲಿ ಮಗುವಿನ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿ ಶವವನ್ನು ಹೊರ ತೆಗೆದಿದ್ದಾರೆ.