ಯುದ್ಧ ಜರ್ಝರಿತ ಪ್ರದೇಶದಿಂದಲೂ ಭಾರತೀಯರ ಕರೆ ತರಲು ರಾಯಭಾರಿ ಕಚೇರಿ ಶ್ರಮಿಸುತ್ತಿದೆ: ಪಿ.ಎ. ಹಮೀದ್

Prasthutha|

ದೆಹಲಿ: ಯುದ್ಧ ಜರ್ಝರಿತ ಉಕ್ರೇನ್ ರಾಜಧಾನಿ ಕಿವ್ಯೂ, ಖಾರ್ಕಿವ್ ಮತ್ತು ಇತರ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆ ತರುವ ಕೆಲಸ ಮುಂದುವರೆದಿದೆ ಎಂದು ಉಡುಪಿ ಮೂಲದ ವಕೀಲ ಪಿ.ಎ.‌ ಹಮೀದ್ ಪಡುಬಿದ್ರಿ ತಿಳಿಸಿದ್ದಾರೆ.

- Advertisement -

 ಪ್ರಸಕ್ತ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಪಿ.ಎ. ಹಮೀದ್ ರಷ್ಯಾ- ಉಕ್ರೇನ್ ಯುದ್ಧ ಆರಂಭದ ದಿನದಿಂದಲೇ ಭಾರತೀಯ ವಿದೇಶಾಂಗ ಸಚಿವಾಲಯ, ಉಕ್ರೇನ್ ನಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಹಾಗೂ ಇದೀಗ ಪೋಲ್ಯಾಂಡ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ಅಲ್ಲದೇ, ಪೋಲ್ಯಾಂಡ್ ನಲ್ಲಿ ನೆಲೆಸಿರುವ ಹಾಗೂ ವಾಪಸ್ಸಾಗುತ್ತಿರುವ ವಿದ್ಯಾರ್ಥಿಗಳು ಕೂಡಾ ಪ್ರತಿಕ್ಷಣದ ಮಾಹಿತಿಯನ್ನು ಸಮಾಜ ಸೇವಕರೂ ಆದ ಪಿ.ಎ. ಹಮೀದ್ ಅವರ ಜೊತೆ ಫೋಟೋಗಳ ಸಮೇತ ಹಂಚಿಕೊಳ್ಳುತ್ತಿದ್ದಾರೆ.‌ ಹಮೀದ್ ಅವರಿಗೆ ವಿದ್ಯಾರ್ಥಿಗಳಾದ ಆಕಿಫ್ ಸೇಟ್, ರೋಹಿತ್ ಕ್ರೃಷ್ಣನ್ ಹಾಗೂ ಇತರ ವಿದ್ಯಾರ್ಥಿಗಳ ನೀಡಿದ ಮಾಹಿತಿಯ ಪ್ರಕಾರ, “ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ನಾವು ಬಂಕರ್‌ಗಳು ಮತ್ತು ಇತರ ಯುದ್ಧ-ವಿರೋಧಿ ಸೌಲಭ್ಯಗಳಲ್ಲಿ ಭಯಭೀತರಾಗಿದ್ದಾಗ ನಮ್ಮ ಕೂಗಿಗೆ ಪ್ರತಿಕ್ರಿಯಿಸಲು ವಿಫಲರಾಗಿದ್ದರು.

 ಆದರೆ, ಅವರು ಪೋಲ್ಯಾಂಡ್‌ನಲ್ಲಿ ಅಹೋರಾತ್ರಿ ಉತ್ತಮ ರೀತಿಯಲ್ಲಿ ಸತತ ಕೆಲಸ ಮಾಡುತ್ತಿದ್ದಾರೆ ಮತ್ತು ಭಾರತೀಯರನ್ನು, ವಿಶೇಷವಾಗಿ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕಳುಹಿಸುವ ಎಲ್ಲಾ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ, ಸ್ಲೋವಾಕ್, ರೊಮೇನಿಯಾ, ಹಂಗೇರಿಯಿಂದಲೂ ಈ ಬಗ್ಗೆ ವ್ಯವಸ್ಥೆ ಮಾಡಲಾಗುತ್ತಿವೆ. ರಷ್ಯಾದ ಆಕ್ರಮಣದಿಂದಾಗಿ ಉಕ್ರೇನಿಯನ್ನರು ಸೇರಿದಂತೆ ತಮ್ಮ ದೇಶದಿಂದ ಪಲಾಯನ ಮಾಡುವ ಜನರ ದೊಡ್ಡ ಗುಂಪು ನೆರೆಹೊರೆಯ ರಾಷ್ಟ್ರಗಳಲ್ಲಿ ಜಮಾವಣೆಗೊಂಡಿದೆ. ಸೌದಿ ಅರೇಬಿಯಾ ಸೇರಿದಂತೆ ವಿವಿಧ ಗಲ್ಫ್ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮಕ್ಕಳೂ ಈ ಪ್ರಯಾಣಿಕರಲ್ಲಿ ಸೇರಿದ್ದಾರೆ. ಮೂಲಗಳ ಪ್ರಕಾರ, ಸುಮಾರು 200ಕ್ಕೂ ಮಿಕ್ಕಿದ ಸೌದಿ ಅರೇಬಿಯಾದ ವಿವಿಧ ಪ್ರಾಂತ್ಯಗಳಲ್ಲಿ ಉದ್ಯೋಗಗಳಲ್ಲಿರುವ ಅನಿವಾಸಿ ಭಾರತೀಯರ ಮಕ್ಕಳು ಉಕ್ರೇನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪಿ.ಎ. ಹಮೀದ್ ಮಾಹಿತಿ ನೀಡಿದ್ದಾರೆ. ಹಮೀದ್ ಅವರು ನೀಡಿದ ಮಾಹಿತಿ ಪ್ರಕಾರ, ಇನ್ನೂ ಹಲವಾರು ಭಾರತೀಯರು ಅದರಲ್ಲೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿ ಸಮೂಹ ಪೋಲ್ಯಾಂಡ್‌ನಲ್ಲಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.

- Advertisement -

 ಅದೇ ರೀತಿ, ರೊಮೇನಿಯಾ, ಸ್ಲೊವ್ಯಾಕ್, ಹಂಗೇರಿಯಲ್ಲಿ ಕೂಡ ಅಧಿಕಸಂಖ್ಯೆಯಲ್ಲಿದ್ದಾರೆ. ಅದೂ ಅಲ್ಲದೆ, ಕೆಲವು ಮಂದಿ ಈಗಲೂ ಯುದ್ಧಜರ್ಝರಿತ ಉಕ್ರೇನ್ ರಾಜಧಾನಿ ಕಿವ್ಯೂ, ಖಾರ್ಕೈವ್ ಹಾಗೂ ಇತರ ಪ್ರದೇಶಗಳಲ್ಲಿದ್ದಾರೆ. ಅವರನ್ನು ಹೊರತರುವ ಪ್ರಯತ್ನ ರಾಯಭಾರ ಕಚೇರಿಯಿಂದ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾನು MEA ನಿಯಂತ್ರಣ ಕೊಠಡಿ ಮತ್ತು ರಾಯಭಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು,ಅವರು 24×7 ರಲ್ಲಿ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.‌ ಈ ಪ್ರಕ್ರಿಯೆ ಸುಗಮವಾಗಿ ನಡೆದರೆ ಒಂದು ವಾರದೊಳಗೆ ತೆರವು ಪ್ರಕ್ರಿಯೆ ಪೂರ್ಣಗೊಂಡು, ಉಕ್ರೇನ್ ನಲ್ಲಿರುವ ಭಾರತೀಯರ ಸಂಖ್ಯೆ ಶೂನ್ಯವಾಗುತ್ತದೆ ಎಂದು ಹಮೀದ್ ಭರವಸೆ ವ್ಯಕ್ತಪಡಿಸಿದ್ದಾರೆ.‌

Join Whatsapp