ಕೈಕಾಲು ಕಟ್ಟಿ, ಹಲ್ಲೆಗೈದು ಲಕ್ಷಾಂತರ ‌ನಗ,ನಗದು ದೋಚಿದ್ದ ಉಪ ಅರಣ್ಯಾಧಿಕಾರಿ ಮತ್ತು 10 ಮಂದಿಯ ಬಂಧನ

Prasthutha|

ಬೆಂಗಳೂರು: ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆಗೈದು, ಕೈ ಕಾಲು ಕಟ್ಟಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದ 11 ಮಂದಿ ಡಕಾಯಿತರನ್ನು ಪೀಣ್ಯ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. 11 ಮಂದಿಯಲ್ಲಿ ಓರ್ವ ಉಪ ಅರಣ್ಯಾಧಿಕಾರಿ ಎಂಬುದು ವಿಶೇಷ. ಕೃತ್ಯದ ಸಂದರ್ಭದಲ್ಲಿ ಪೊಲೀಸ್ ಎಂದು ಹೇಳಿಕೊಂಡವರಲ್ಲಿ‌‌ ಓರ್ವ ಚಿಕ್ಕ ಮಗಳೂರು ಮೂಲದ ಚನ್ನಗಿರಿ ಅರಣ್ಯವಲಯದಲ್ಲಿನ ಉಪ ಅರಣ್ಯಾಧಿಕಾರಿಯಾಗಿರುವುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.
ಇಬ್ಬರು ರೌಡಿಶೀಟರ್ ಕೂಡ ಇದರಲ್ಲಿ ಸೇರಿದ್ದಾರೆ.

- Advertisement -

ಹೆಚ್‌ಎಂಟಿ ಲೇಔಟ್‌ನಲ್ಲಿ ವಾಸವಾಗಿರುವ ರೂಪೇಶ್ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ಸ್‌ಪೆಕ್ಟರ್ ಅನಿಲ್ ಕುಮಾ‌ರ್ ನೇತೃತ್ವದ ತಂಡ ತನಿಖೆ ನಡೆಸಿ ಕೃತ್ಯದಲ್ಲಿ ಶಾಮೀಲಾಗಿದ್ದ ತುಮಕೂರಿನ ಸುರೇಶ್‌, ದಾವಣಗೆರೆ ಜಿಲ್ಲೆ ಚೆನ್ನಗಿರಿ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ಸುರೇಂದ್ರ, ಚಿತ್ರದುರ್ಗದ ಹಣ್ಣಿನ ವ್ಯಾಪಾರಿ ಶ್ರೀಧರ್‌, ನೆಲಮಂಗಲದ ಫೈನಾನ್ಸಿಯರ್ ವಸಂತ್ ಕುಮಾ‌ರ್, ಅನಿಲ್ ಕುಮಾರ್, ಚಾಲಕ ನಾಗರಾಜ್, ಕೆ.ಜಿ. ಹಳ್ಳಿಯ ರೌಡಿಶೀಟರ್‌ಗಳಾದ ನವಾಝ್, ಶೇಖ್ ಶಹಬಾಝ್, ಅವರ ಸಹಚರರಾದ ರಾಹಿಲ್‌ಪಾಷಾ, ಉಸ್ಮಾನ್ ಖಾನ್ ಎಂಬುವರನ್ನು ಅರೆಸ್ಟ್ ಮಾಡಿದ್ದಾರೆ. ಅವರಿಂದ 45.52 ಲಕ್ಷ ಬೆಲೆಬಾಳುವ 273 ಗ್ರಾಂ ಚಿನ್ನ, 370 ಗ್ರಾಂ ಬೆಳ್ಳಿ, 23 ಲಕ್ಷ ರೂ. ನಗದು, 13 ಮೊಬೈಲ್‌ಗಳು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತರಲ್ಲಿ ಓರ್ವ ನಾಗರಾಜ್
ಹೆಚ್‌ಎಂಟಿ ಲೇಔಟ್‌ನಲ್ಲಿ ರೂಪೇಶ್ ತಂದೆಯ ಬಳಿ ಚಾಲಕನಾಗಿದ್ದನು. ರೂಪೇಶ್ ತಂದೆ ಮನೋಹರ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಈತ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆಲಸ ತೊರೆದಿದ್ದ. ಮಾಲೀಕನ ಹಣದ ವ್ಯವಹಾರ ಬಗ್ಗೆ ಹತ್ತಿರದಿಂದ ನಾಗರಾಜ್ ಗಮನಿಸಿದ್ದ. ಸ್ನೇಹಿತ ಅನಿಲ್ ಕುಮಾರ್ ಬಳಿ ತಮ್ಮ ಮಾಲೀಕನ ಬಳಿ ಸಾಕಷ್ಟು ಹಣವಿದ್ದು, ನೋಟು ಎಣಿಸುವ ಯಂತ್ರಗಳಿವೆ ಎಂದಿದ್ದ.

- Advertisement -

ಅನಿಲ್ ಗೆಳೆಯನಾಗಿದ್ದ ಫೈನಾನ್ಸಿಯ‌ರ್ ಅಗಿ ನಷ್ಟಕ್ಕೆ ಒಳಗಾಗಿದ್ದ ವಸಂತ್ ಬಳಿ ಈ ಬಗ್ಗೆ ಮಾತನಾಡಿದ್ದ. ಶ್ರೀಧರ್ ಹಾಗೂ ಸುರೇಶ್ ಉಪ ಅರಣ್ಯಾಧಿಕಾರಿ ಸುರೇಂದ್ರ ಬಳಿ ವಿಷಯ ತಿಳಿಸಿ ಡಕಾಯಿತಿ ಮಾಡಲು ಒಪ್ಪಿಸಿದ್ದರು. ಸುರೇಂದ್ರ ಜೂಜಾಟದ ಚಟ ಹೊಂದಿದ್ದನು. ಹಣದ ಅವಶ್ಯಕತೆ ಇದ್ದಿದ್ದರಿಂದ ಕೃತ್ಯವೆಸಗಲು ಒಪ್ಪಿಕೊಂಡಿದ್ದನು. ಎಲ್ಲರೂ ಸುರೇಶ್‌ಗೆ ಪರಿಚಯಸ್ಥರಾಗಿದ್ದ ಜೊತೆಗೆ ಕೆ.ಜಿ. ಹಳ್ಳಿಯಿಂದ ಐವರನ್ನು ಕರೆಯಿಸಿಕೊಂಡು ಡಕಾಯಿತಿಗೆ ಸಂಚು ರೂಪಿಸಿದ್ದರು.

ಉಪ ಅರಣ್ಯಾಧಿಕಾರಿಯಾಗಿದ್ದ ಸುರೇಂದ್ರನ ಸಮವಸ್ತ್ರ ಖಾಕಿಯಾಗಿದ್ದರಿಂದ ಪೊಲೀಸ್ ಸೋಗಿನಲ್ಲಿ ಹೋಗುವಂತೆ ಸಹಚರರು ಸೂಚಿಸಿದ್ದರು. ಇದರಂತೆ ಡಿ.4ರಂದು ಸಂಜೆ ಮನೆ ಬಳಿ ಡಕಾಯಿತರ ತಂಡವೇ ದಾಂಗುಡಿ ಇಟ್ಟಿತ್ತು. ಮನೆಯಲ್ಲಿ ರೂಪೇಶ್ ಹಾಗೂ ಆತನ ತಾಯಿ ಇಬ್ಬರೇ ಇದ್ದರು. ಪೊಲೀಸ್ ಸೋಗಿನಲ್ಲಿ ಸುರೇಂದ್ರ ಬಾಗಿಲು ತಟ್ಟಿದ್ದಾನೆ. ಮನೆಯೊಳಗಿನ ಕಿಟಕಿಯಿಂದ ಇಣುಕಿ ನೋಡಿದ ರೂಪೇಶ್, ಪೊಲೀಸರೆಂದು ಭಾವಿಸಿ ಬಾಗಿಲು ತೆರೆದಿದ್ದಾರೆ. ಪೊಲೀಸ್‌ ಎಂದು ಪರಿಚಯಿಸಿಕೊಂಡು ಮನೆಯೊಳಗೆ ಸುರೇಂದ್ರ ಎಂಟ್ರಿಯಾಗಿದ್ದ. ಕ್ಷಣಮಾತ್ರದಲ್ಲಿ ಇನ್ನಿತರ ಆರೋಪಿಗಳು ಮನೆಗೆ ನುಗ್ಗಿದ್ದಾರೆ. ಲಾಂಗು- ಮಚ್ಚಿನಿಂದ ರೂಪೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಆಕೆಯ ತಾಯಿಗೂ ಬೆದರಿಸಿದ್ದಾರೆ. ಇಬ್ಬರನ್ನು ರೂಮ್‌ಗೆ ಕರೆದುಕೊಂಡು ಟೇಪ್‌ನಿಂದ ಸುತ್ತಿ ಕೂಡಿಹಾಕಿ ನಗದು, ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.

ಪೊಲೀಸರು ಮನೆಯ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ವಶಕ್ಕೆ ಪಡೆದು ಪರಿಶೀಲಿಸಿದಾಗ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿರುವುದು ಗೊತ್ತಾಗಿದೆ. ಅಲ್ಲದೆ ಕುಣಿಗಲ್ ಟೋಲ್ ದಾಟಿರುವುದು ತಿಳಿದುಬಂದಿತ್ತು. ಟವರ್ ಡಂಪ್ ಮೂಲಕ ಸುರೇಂದ್ರನ ನಂಬರ್ ಮಾತ್ರ ಆ್ಯಕ್ಟಿವ್ ಆಗಿತ್ತು. ಅಲ್ಲದೆ ಸಿಡಿಆರ್ (ಒಳಬರುವ ಕರೆ) ತೆಗದಾಗ ಶ್ರೀಧ‌ರ್, ವಸಂತ್ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಕೊನೆಗೂ ಪೊಲೀಸರು ಎಲ್ಲರನ್ನೂ ಬಂಧಿಸಿದ್ದಾರೆ.



Join Whatsapp