ಆತ್ಮಹತ್ಯೆಗೀಡಾಗುವ ವಿದ್ಯಾರ್ಥಿಗಳಲ್ಲಿ ದಮನಿತ ವರ್ಗದವರೇ ಹೆಚ್ಚು; ವಾಸ್ತವದಿಂದ ನ್ಯಾಯಾಧೀಶರು ವಿಮುಖರಾಗಲಾಗದು: ಸಿಜೆಐ

Prasthutha|

ಹೈದರಾಬಾದ್: ಸಮಾಜದ ಅಂಚಿನ ಸಮುದಾಯಗಳಿಂದ ಬಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಹೆಚ್ಚುತ್ತಿದ್ದು ಅವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ದಲಿತ, ಆದಿವಾಸಿ ಸಮುದಾಯಗಳಿಂದ ಬಂದವರು ಎಂದು ಸಂಶೋಧನೆ ತಿಳಿಸಿರುವುದಾಗಿ ಸುಪ್ರೀಂ ಕೋರ್ಟ್ ಮಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಆತಂಕ ವ್ಯಕ್ತಪಡಿಸಿದರು.

- Advertisement -


ಹೈದರಾಬಾದ್’ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಕಾನೂನು ವಿಶ್ವವಿದ್ಯಾಲಯ (ಎನ್’ಎಎಲ್’ಎಸ್’ಎಆರ್) ಶನಿವಾರ ಏರ್ಪಡಿಸಿದ್ದ 19ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಿಜೆಐ ಮಾತನಾಡಿದರು.
ಸಹಾನುಭೂತಿಯ ಕೊರತೆಯಿಂದ ಉಂಟಾದ ತಾರತಮ್ಯವೇ ಇದಕ್ಕೆ ಕಾರಣ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸಿಜೆಐ ಮಾತಿನ ಪ್ರಮುಖಾಂಶಗಳು:
ಆತ್ಮಹತ್ಯೆಯಿಂದ ಸಾವನ್ನಪ್ಪಿದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ದಲಿತರು ಮತ್ತು ಆದಿವಾಸಿಗಳಾಗಿದ್ದು ಇದು ನಾವು ಪ್ರಶ್ನಿಸಬೇಕಾದ ಮಾದರಿಯನ್ನು ತೋರಿಸುತ್ತದೆ ಎಂದು ಪ್ರೊ. ಸುಖದೇವ್ ಥೋರಟ್ ಹೇಳಿದ್ದಾರೆ.

- Advertisement -


ಕಳೆದ 75 ವರ್ಷಗಳಲ್ಲಿ ಪ್ರತಿಷ್ಠಿತ ಸಂಸ್ಥೆಗಳ ನಿರ್ಮಾಣದತ್ತ ಗಮನಹರಿಸಿದ್ದೇವೆ. ಆದರೆ ಅದಕ್ಕಿಂತ ಹೆಚ್ಚಿನದನ್ನು ಮಾಡಬೇಕಿದೆ. ತಾರತಮ್ಯಕ್ಕೂ ಅನುಭೂತಿಯ ಕೊರತೆಗೂ ನೇರ ಸಂಬಂಧ ಇರುವುದರಿಂದ ಈ ಮಾತುಗಳನ್ನಾಡುತ್ತಿದ್ದೇನೆ.


ನ್ಯಾಯಾಂಗ ಸಂವಾದ ಎಂಬುದು ಜಗತ್ತಿನಾದ್ಯಂತ ಒಂದೇ ರೀತಿ ಇದ್ದು ನ್ಯಾಯಾಧೀಶರು ಸಾಮಾಜಿಕ ವಾಸ್ತವಗಳಿಂದ ದೂರ ಸರಿಯುವಂತಿಲ್ಲ.
ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಪೊಲೀಸರ ದಬ್ಬಾಳಿಕೆಯಿಂದ ಕೆಲ ವರ್ಷಗಳ ಹಿಂದೆ ಹತ್ಯೆಗೀಡಾದಾಗ ಕಪ್ಪು ಆಂದೋಲನವೊಂದು ಹುಟ್ಟಿಕೊಂಡಿತು. ಆಗ ಕಪ್ಪುವರ್ಣೀಯರ ಅವನತಿಗೆ ದೂಡುವ ಮತ್ತು ಅಪಮೌಲ್ಯೀಕರಿಸುವುದರ ವಿರುದ್ಧವಾಗಿ ಬಗ್ಗೆ ಅಮೆರಿಕ ಸುಪ್ರೀಂ ಕೋರ್ಟ್ನ ಎಲ್ಲಾ 9 ನ್ಯಾಯಮೂರ್ತಿಗಳು ನ್ಯಾಯಿಕ ವರ್ಗಕ್ಕೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದರು.
ಕಪ್ಪು ಸಮುದಾಯಕ್ಕೆ ಶಿಕ್ಷಣ ನೀಡಲು ನಾಗರಿಕ ಹಕ್ಕುಗಳ ವಕೀಲರು ಮಾಡಿದ ಕೆಲಸವನ್ನು ಜನ ಮರೆತುಬಿಡುತ್ತಾರೆ ಎಂದು ಹಾರ್ವರ್ಡ್ ಕಾನೂನು ಶಾಲೆಯ ಪ್ರಾಧ್ಯಾಪಕರು ಹೇಳುತ್ತಾರೆ.

ಭಾರತದ ನ್ಯಾಯಾಧೀಶರು ಸಹ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಸಮಾಜದೊಂದಿಗೆ ಸಂವಾದದಲ್ಲಿ ತೊಡಗಿರುತ್ತಾರೆ.


(ಜಾತಿ ಆಧಾರಿತ ಪ್ರತ್ಯೇಕತೆಗೆ ಕಾರಣವಾಗುವ) ಪ್ರವೇಶಾತಿ ಪರೀಕ್ಷೆಯಲ್ಲಿ ಗಳಿಸಿದ ಅಂಕ ಆಧರಿಸಿ ಹಾಸ್ಟೆಲ್ ಕೊಠಡಿ ಹಂಚಿಕೆ, ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಗಳಿಸಿದ ಅಂಕದ ಬಗ್ಗೆ ಹಾಗೂ ಆಂಗ್ಲಭಾಷೆಯಲ್ಲಿ ಅವರಿಗಿರುವ ಪ್ರೌಢಿಮೆಯ ಕೊರತೆಯ ಬಗ್ಗೆ ಅಪಹಾಸ್ಯ ಮಾಡುವುದಕ್ಕೆ ಅಂತ್ಯ ಹಾಡಬೇಕು.
ನಿಂದನೆ ಮತ್ತು ಬೆದರಿಕೆ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳದಿರುವುದು, ಸೂಕ್ತ ಬೆಂಬಲ ವ್ಯವಸ್ಥೆ ಒದಗಿಸದಿರುವುದು, ಫೆಲೋಶಿಪ್ ಕೊನೆಗೊಳಿಸುವುದು, ಅಪಹಾಸ್ಯದ ಮೂಲಕ ಸಾಮಾನ್ಯೀಕರಿಸುವುದು ಪ್ರತಿ ಶಿಕ್ಷಣ ಸಂಸ್ಥೆ ನಿಲ್ಲಿಸಬೇಕಾದ ಕೆಲ ಮೂಲಭೂತ ವಿಚಾರಗಳಾಗಿವೆ.


ನನ್ನ ದೃಷ್ಟಿಯಲ್ಲಿ ಎನ್’ಎಲ್’ಯುಗಳು ಮಾಡಬೇಕಿರುವುದು ಗುಣಮಟ್ಟದ ಕಾನೂನು ಶಿಕ್ಷಣಕ್ಕೆ ಅವಕಾಶ ಕಲ್ಪಿಸಬಹುದಾದ ಸಂಸ್ಥೆಗಳನ್ನು ರೂಪಿಸುವುದೇ ವಿನಾ ಗಣ್ಯವರ್ಗಕ್ಕೆ ಬೇಕಾದಂತಹ ಸಂಸ್ಥೆಗಳನ್ನು ನಿರ್ಮಿಸುವುದಲ್ಲ. ಆದರೂ ಸಮಾಜದ ವ್ಯಾಪಕ ವರ್ಗಕ್ಕೆ ಅವಕಾಶ ಕಲ್ಪಿಸಲು ಎನ್’ಎಲ್’ಯುಗಳು ಹೆಣಗುತ್ತಿವೆ.
ಈ ವಿವಿಗಳ ಪ್ರವೇಶಾತಿ ಬಗ್ಗೆನಿರಂತರವಾಗಿ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಎನ್’ಎಲ್’ಯುಗಳ ಪರೀಕ್ಷಾ ಮಾದರಿಯು ಇಂಗ್ಲಿಷ್ ಅಷ್ಟು ಗೊತ್ತಿಲ್ಲದ ವಿದ್ಯಾರ್ಥಿಗಳಿಗೆ ತಡೆಗೋಡೆಯಾಗಿ ಪರಿಣಮಿಸಿದೆ.
ಎನ್’ಎಲ್’ಯುಗಳು ಸಮಾಜದಂಚಿನಲ್ಲಿರುವ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸದೆ ಕೇವಲ ಪ್ರವೇಶಾತಿ ಪರೀಕ್ಷೆಯ ಮಾದರಿ ಬದಲಾಯಿಸುವುದು ವ್ಯರ್ಥವಾಗುತ್ತದೆ.
(ಕೃಪೆ: ಬಾರ್ & ಬೆಂಚ್)



Join Whatsapp