ನವದೆಹಲಿ: ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ-ಎನ್ ಎಸ್ ಎಯಡಿ ಅಕ್ಟೋಬರ್ 18 ರವರೆಗೆ ಯಾರನ್ನೂ ಬೇಕಾದರೂ ಬಂಧಿಸುವ ಅಧಿಕಾರವನ್ನು ದೆಹಲಿ ಪೊಲೀಸರಿಗೆ ನೀಡಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಆದೇಶ ಹೊರಡಿಸಿದ್ದಾರೆ.
ಜುಲೈ 19 ರಿಂದ ಪೊಲೀಸ್ ಆಯುಕ್ತ ಬಾಲಾಜಿ ಶ್ರೀವಾಸ್ತವ ಅವರು ಈ ಅಧಿಕಾರ ಚಲಾಯಿಸಲು ಅಧಿಕಾರ ಹೊಂದಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾಯ್ದೆ 1980 ಕಾಲಂ 2 ರ ಷರತ್ತಿನನ್ವಯ ಸೆಕ್ಷನ್ 3 ಉಪವಿಭಾಗದಲ್ಲಿ ನೀಡಲ್ಪಟ್ಟ ಅಧಿಕಾರವನ್ನು ಚಲಾಯಿಸಲು ದೆಹಲಿ ಪೊಲೀಸ್ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ಈ ಹೊಸ ಆದೇಶದನ್ವಯ ಜುಲೈ 19 ರಿಂದ ಅಕ್ಟೋಬರ್ 18 ರ ವರೆಗೆ ಯಾವುದೇ ವ್ಯಕ್ತಿಯನ್ನು ದೇಶದ ಸುರಕ್ಷತೆಯ ಹಿತದೃಷ್ಟಿಯಿಂದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಬಂಧಿಸುವ ಅಧಿಕಾರವಿದೆ. ಇದು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜೋತ್ಸವದಂತಹ ಪ್ರಮುಖ ದಿನಗಳ ಮೊದಲು ಸಾಮಾನ್ಯವಾಗಿ ಹೊರಡಿಸುವ ವಾಡಿಕೆಯ ಆದೇಶವೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ಬಣ್ಣಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್.ಎಸ್.ಎ.)ಯಡಿಯಲ್ಲಿ ಯಾವುದೇ ವ್ಯಕ್ತಿಯನ್ನು ಅನುಮಾನಾಸ್ಪದ ಅಥವಾ ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗೆ ಬೆದರಿಕೆ ಹಿನ್ನೆಲೆಯಲ್ಲಿ ಮುಲಾಜಿಲ್ಲದೆ ಬಂಧಿಸಬಹುದೆಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕೇಂದ್ರದ ನೂತನ ಕೃಷಿ ಕಾನೂನುಗಳಿಗೆ ವಿರುದ್ಧವಾಗಿ ನೂರಾರು ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಆದೇಶ ಬಂದಿರುವುದು ಕುತೂಹಲಕಾರಿಯಾಗಿದೆ. ಆಗಸ್ಟ್ 13 ರಂದು ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನ ಮುಗಿಯುವವರೆಗೆ ಜಂತರ್ ಮಂತರ್ನಲ್ಲಿ ‘ಕಿಸಾನ್ ಸಂಸಾದ್ ಮುಂದುವರಿಯುತ್ತದೆ.
ಆಗಸ್ಟ್ 15 ರಂದು ದೇಶಾದ್ಯಂತ 75 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದಕ ದಾಳಿಯ ಬಗ್ಗೆ ಗುಪ್ತಚರ ಸಂಸ್ಥೆಗಳು ಸರ್ಕಾರವನ್ನು ಎಚ್ಚರಿಸಿದೆ ಮತ್ತು ಆಗಸ್ಟ್ 5 ರಂದು ಜಮ್ಮು, ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿದ್ದ 370 ನೇ ವಿಧಿಯನ್ನು ರದ್ದುಪಡಿಸಿದ್ದ ಎರಡನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲಕ ಭಯೋತ್ಪಾದಕರು ದೆಹಲಿಯನ್ನು ಗುರಿಪಡಿಸುವ ಸಾಧ್ಯತೆಯನ್ನು ಗುಪ್ತಚರ ಇಲಾಖೆ ವರದಿ ಮಾಡಿದೆ.