ನವದೆಹಲಿ: ಭಾರತದಲ್ಲಿ ಜನರ ಒಟ್ಟಾರೆ ವೆಚ್ಚದಲ್ಲಿ ಆಹಾರದ ಪ್ರಮಾಣ ಕಡಿಮೆ ಆಗುತ್ತಾ ಬರುತ್ತಿದೆ. ಸರಾಸರಿ ಭಾರತೀಯನೊಬ್ಬನ ಒಟ್ಟಾರೆ ಮಾಸಿಕ ವೆಚ್ಚದಲ್ಲಿ ಆತ ಆಹಾರಕ್ಕಾಗಿ ಮಾಡುವ ವೆಚ್ಚ ಶೇ. 50ಕ್ಕಿಂತಲೂ ಕಡಿಮೆ ಆಗಿದೆ. ಕಳೆದ ಐದು ದಶಕದಲ್ಲಿ ಈ ಮಟ್ಟಕ್ಕಿಂತ ಕಡಿಮೆಗೆ ಇಳಿದಿರುವುದು ಇದೇ ಮೊದಲು. ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಆಹಾರದ ಮೇಲಿನ ವೆಚ್ಚವು ಕಡಿಮೆಯಾಗಿರುವುದು, ಜನರು ಹೆಚ್ಚು ಆದಾಯ ಗಳಿಸುತ್ತಿರುವುದರ ಸಂಕೇತವೆಂದು ಹೇಳಲಾಗುತ್ತಿದ್ದರೂ, ಪೌಷ್ಟಿಕತೆಯ ಅಂಕಿಅಂಶಗಳು ಜನರು ಬೆಲೆಏರಿಕೆ ಮತ್ತು ಇತರ ಮೂಲ ಸೌಕರ್ಯಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿದ್ದು, ಉತ್ತರ ಆಹಾರ ಖರೀದಿಯನ್ನು ಕಡಿಮೆ ಮಾಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ಎನ್ ಎಸ್ ಎಸ್ ಒ ಸಮೀಕ್ಷೆಯು ಗ್ರಾಮೀಣ ಮತ್ತು ನಗರ ಭಾಗಗಳೆರಡರಲ್ಲೂ ದತ್ತಾಂಶ ಕಲೆಹಾಕಿದೆ. ಎರಡೂ ಪ್ರದೇಶಗಳಲ್ಲಿ ಕಳೆದ 10 ವರ್ಷದಲ್ಲಿ ವೆಚ್ಚದಲ್ಲಿ ಆಹಾರದ ಪಾಲು ಕಡಿಮೆ ಆಗಿರುವುದು ವೇದ್ಯವಾಗಿದೆ. 2022-23ರ ಹಣಕಾಸು ವರ್ಷದ ದತ್ತಾಂಶವನ್ನು ಎನ್ ಎಸ್ ಎಸ್ ಒ ಬಿಡುಗಡೆ ಮಾಡಿದೆ.
ಗ್ರಾಮೀಣ ಭಾಗದಲ್ಲಿ ಗೃಹ ವೆಚ್ಚದಲ್ಲಿ ಆಹಾರದ ಪಾಲು ಎಷ್ಟು?
ಕರ್ನಾಟಕದಲ್ಲಿ ಇದು ಶೇ 54.2ರಿಂದ ಶೇ. 46.5ಕ್ಕೆ ಇಳಿದಿದೆ. ಚಂಡೀಗಡ ಶೇ. 41.2, ದೆಹಲಿ ಶೇ. 41.6, ಕೇರಳ ಶೇ. 42.5ರಷ್ಟು ಆಹಾರವೆಚ್ಚ ಪ್ರಮಾಣ ಇದೆ. ಇದು ಅತ್ಯಂತ ಕಡಿಮೆ ಮಟ್ಟದ ವೆಚ್ಚ. ಜಮ್ಮು ಕಾಶ್ಮೀರ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಅಸ್ಸಾಂ, ಅರುಣಾಚಲಪ್ರದೇಶ, ಸಿಕ್ಕಿಂ, ತ್ರಿಪುರ ಮತ್ತು ಗುಜರಾತ್ ರಾಜ್ಯಗಳಲ್ಲಿ ಆಹಾರ ವೆಚ್ಚದ ಪ್ರಮಾಣ ಶೇ. 50ಕ್ಕಿಂತ ಹೆಚ್ಚಿದೆ. ಅಸ್ಸಾಮ್ ಮತ್ತು ಬಿಹಾರದಲ್ಲಿ ಇದು ಶೇ. 54ಕ್ಕಿಂತ ಹೆಚ್ಚಿದೆ.
ದೇಶಕ್ಕೆ ಮಾದರಿ (ಗುಜರಾತ್ ಮಾದರಿ) ನೀಡುತ್ತೇವೆಂದು ಪ್ರಧಾನಿ ಮೋದಿ ಅವರು ಘೋಷಿಸುತ್ತಿದ್ದ ಗುಜರಾತ್ನಲ್ಲಿ ಜನರು ತಮ್ಮ ಒಟ್ಟು ಖರ್ಚಿನಲ್ಲಿ ಆಹಾರಕ್ಕಾಗಿ ವ್ಯಯಿಸುವ ಮೊತ್ತವು 50%ಕ್ಕಿಂತ ಹೆಚ್ಚಾಗಿದೆ ಎಂದೂ ಸಮೀಕ್ಷೆ ಗಮನ ಸೆಳೆದಿದೆ.
ದೆಹಲಿ, ಸಿಕ್ಕಿಂ, ಅಂಡಮಾನ್ ಮೊದಲಾದ ಕೆಲ ರಾಜ್ಯಗಳನ್ನು ಹೊರತುಪಡಿಸಿದರೆ ಬೇರೆ ಪ್ರದೇಶಗಳಲ್ಲಿ ಆಹಾರ ವೆಚ್ಚದ ಪ್ರಮಾಣ ಹತ್ತು ವರ್ಷದಲ್ಲಿ ಗಣನೀಯವಾಗಿ ಇಳಿದಿರುವುದು ಗಮನಿಸಬೇಕಾದ ಸಂಗತಿ.
ನಗರ ಭಾಗಗಳಲ್ಲಿ ಹೇಗಿದೆ ಬೆಳವಣಿಗೆ?
ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರ ಭಾಗದಲ್ಲಿ ಸರಾಸರಿಯಾಗಿ ಮನೆಯೊಂದು ಆಹಾರಕ್ಕೆ ಮಾಡುವ ವೆಚ್ಚದ ಪ್ರಮಾಣ ಕಡಿಮೆ ಇದೆ. ಸರಾಸರಿ ನಗರ ಕುಟುಂಬವೊಂದು ಮಾಡುವ ಆಹಾರ ವೆಚ್ಚದ ಪ್ರಮಾಣ ಶೇ. 41.9ರಷ್ಟಿದೆ. ಹತ್ತು ವರ್ಷದ ಹಿಂದೆ ಇದು ಶೇ. 48ರಷ್ಟಿತ್ತು.
ಭಾರತೀಯರ ಒಟ್ಟು ಖರ್ಚಿನಲ್ಲಿ ಆಹಾರಕ್ಕಾಗಿ ವೆಚ್ಚವು ಕಡಿಮೆಯಾಗಿರುವುದು ಪ್ರಗತಿಯ ಸಂಕೇತವಾಗಿದೆ. ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ಜನರ ದುಡಿಮೆ ಮತ್ತು ಉಳಿತಾಯ ಹೆಚ್ಚಾಗುತ್ತಿದೆ ಎಂದು ಹಲವರು ಬಣ್ಣಿಸುತ್ತಿದ್ದಾರೆ. ಅದಾಗ್ಯೂ, ದೇಶದಲ್ಲಿ ಆಹಾರಕ್ಕಾಗಿನ ವೆಚ್ಚವು ಕಡಿಮೆಯಾಗಿದ್ದರೂ, ಅಪೌಷ್ಟಿಕತೆಯ ಪ್ರಮಾಣ ಕಡಿಮೆಯಾಗಿಲ್ಲ. ಇದು, ಜನರು ಉತ್ತಮ ಮತ್ತು ಪೌಷ್ಠಿಕ ಆಹಾರವನ್ನು ಖರೀದಿ ಮಾಡುವ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಸೂಚಿಸುತ್ತದೆ.
True for Rural and Urban households across the country. pic.twitter.com/Bj8sZZsdAB
— Prof. Shamika Ravi (@ShamikaRavi) September 2, 2024