ಮಂಗಳೂರು: ಬ್ಯಾಂಕ್ ಹೆಸರಿನಲ್ಲಿ ಬಂದ ಸಂದೇಶವನ್ನು ಕ್ಲಿಕ್ ಮಾಡಿದಕ್ಕೆ ವ್ಯಕ್ತಿಯೊಬ್ಬರು 65 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಕೂಡಲೇ ಆ ವ್ಯಕ್ತಿ ನಗರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ನಗರದ ನಿವಾಸಿಯೊಬ್ಬರು ಆರ್ಯ ಸಮಾಜ ರಸ್ತೆಯಲ್ಲಿ ಇರುವ ಎಸ್ಬಿಐ ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದಿದ್ದರು. ಇವರಿಗೆ ಜೂನ್ 13 ರಂದು ರಾತ್ರಿ ಮೊಬೈಲ್ಗೆ ಎಸ್ಎಂಎಸ್ ಬಂದಿತ್ತು. ಇದರಲ್ಲಿ verify important message from SBI ಎಂದು ಒಂದು ಲಿಂಕ್ ಕಳುಹಿಸಲಾಗಿತ್ತು. ಈ ಲಿಂಕ್ ತೆರೆದಾಗ ಎಸ್ಬಿಐ ಬ್ಯಾಂಕ್ನ ಪೇಜ್ ಓಪನ್ ಆಗಿತ್ತು.
ಅರ್ಜಿದಾರರಿಗೆ ಯೂಸರ್ ನೇಮ್, ಪಾಸ್ ವರ್ಡ್ ತುಂಬಲು ತಿಳಿಸಿದ ನಂತರ OTP ವಿವರ ಪಡೆದುಕೊಂಡು ರೂ. 65 ಸಾವಿರ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.