ಕಾಂಗ್ರೆಸ್ ಈಗಲೂ ದೇಶದ ಅತಿ ದೊಡ್ಡ ಪ್ರತಿ ಪಕ್ಷ: ತೇಜಸ್ವಿ ಯಾದವ್

Prasthutha|

ಪಾಟ್ನ: ಕಾಂಗ್ರೆಸ್ ಈಗಲೂ ದೇಶದ ಅತಿ ದೊಡ್ಡ ವಿರೋಧ ಪಕ್ಷವಾಗಿದೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. 

- Advertisement -

ಕಾಂಗ್ರೆಸ್ಸನ್ನು ಬಿಟ್ಟು ಪ್ರತಿಪಕ್ಷಗಳ ಒಗ್ಗಟ್ಟನ್ನು ಮಾತನಾಡುವವರಿಗೆ ಕಿವಿ ಮಾತು ಹೇಳಿದ ತೇಜಸ್ವಿ ಯಾದವ್ ಅವರು, ಕಾಂಗ್ರೆಸ್ ಈಗಲೂ ದೇಶದ ಅತಿ ದೊಡ್ಡ ಪ್ರತಿಪಕ್ಷವಾಗಿದೆ. ಪ್ರದೇಶಿಕ ಪಕ್ಷಗಳು ವಾಸ್ತವತೆಯನ್ನು ಮೀರಿ ಆಲೋಚಿಸುವುದರಲ್ಲಿ ಪ್ರಯೋಜನವಿಲ್ಲ ಎಂದರು.

2024ರ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟು ಹೇಗಿರಬೇಕು ಎನ್ನುವುದನ್ನು ಚರ್ಚಿಸಲು ಸೋನಿಯಾ ಗಾಂಧಿಯವರು ವಾಪಾಸಾಗುತ್ತಲೇ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರು  ಕಾಂಗ್ರೆಸ್ ನಾಯಕಿಯನ್ನು ಭೇಟಿಯಾಗಿ ಚರ್ಚಿಸುವರು ಎಂದೂ ಅವರು ಹೇಳಿದರು.

- Advertisement -

ಬಿಜೆಪಿಯನ್ನು ಸೋಲಿಸುವುದಷ್ಟೆ ಪ್ರತಿ ಪಕ್ಷಗಳ ನಾಯಕರ ಮಹಾತ್ವಾಕಾಂಕ್ಷೆ ಆಗಿರಬೇಕು ಎಂದು ಅವರು ಹೇಳಿದರು.

“ಒಂದು ಶುಭಾರಂಭ ಮಾಡಲಾಗುವುದು. ಅದಕ್ಕೆ ಬಿಹಾರ ಒಂದು ಉದಾಹರಣೆಯಾಗಿದೆ. ಅದು ದೇಶದೆಲ್ಲೆಡೆ ಪ್ರತಿಫಲಿಸಬೇಕು. ನಿತೀಶ್ ಕುಮಾರ್ ಹಲವರನ್ನು ಭೇಟಿಯಾಗಿದ್ದಾರೆ; ಲಾಲೂಜಿಯವರೂ ಮಾತಾಡುತ್ತಿದ್ದಾರೆ; ನಾನೂ ಭೇಟಿಗಳನ್ನು ಮುಂದುವರಿಸುತ್ತೇನೆ. ಸೋನಿಯಾ ವಾಪಾಸಾಗುವುದನ್ನು ನಿತೀಶ್ ಮತ್ತು ಲಾಲೂ ನಿರೀಕ್ಷಿಸುತ್ತಿದ್ದಾರೆ. ಮುಂದಿನ ಲೋಕ ಸಭಾ ಚುನಾವಣೆಗೆ ಮಾತುಕತೆಯ ಮೇಲೆ ಬಿಹಾರದ ಬೆಳವಣಿಗೆಯೂ ಪರಿಣಾಮ ಬೀರುವುದು” ಎಂದು ಅವರು ಹೇಳಿದರು.

ಕಳೆದ ತಿಂಗಳು ಬಿಜೆಪಿ ಸಂಬಂಧ ಕಡಿದುಕೊಂಡ ನಿತೀಶ್ ಕುಮಾರ್ ಅವರು ಆರ್ ಜೆಡಿ, ಕಾಂಗ್ರೆಸ್, ಎಡ ಪಕ್ಷಗಳು ಜೊತೆ ಮೈತ್ರಿ ಸರಕಾರ ರಚಿಸಿದ್ದಾರೆ. ಇದು ವಿರೋಧ ಪಕ್ಷಗಳಲ್ಲಿ ಒಂದು ಆಶಾ ಭಾವನೆಯನ್ನು ಮೂಡಿಸಿದೆ. ದೇಶದೆಲ್ಲೆಡೆ ಇದು ಚಿಂತನ ಮಂಥನಕ್ಕೆ ದಾರಿ ಮಾಡಿದೆ ಎಂದೂ ತೇಜಸ್ವಿ ಹೇಳಿದರು.

“ಇದು ನಿಜವಾಗಿಯೂ ಒಂದು ಭಿನ್ನ ವಾತಾವರಣವನ್ನು ಸೃಷ್ಟಿಸಿದೆ. ಬಿಜೆಪಿಯ ಒಟ್ಟಾರೆ ಬಲವು ಈಗ ಕಡಿಮೆಯಾಗಿದೆ. ಕಾಂಗ್ರೆಸ್, ಆರ್ ಜೆಡಿ, ಜೆಡಿಯು, ಎಡ ಪಕ್ಷಗಳ ಮತ ಪ್ರಮಾಣವು 50 ಶೇಕಡಾಕ್ಕಿಂತಲೂ ಅಧಿಕವಿದೆ. ಬಿಹಾರದಲ್ಲಿ ಬಿಜೆಪಿಗೆ ಸ್ಥಾನ ತೀರಾ ಕಡಿಮೆಯಾಗುವುದರಿಂದ ಅದರ ಒಳ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ ಎಂದು ತೇಜಸ್ವಿ ತಿಳಿಸಿದರು.

“ಲೋಕ ಸಭೆಯಲ್ಲಿ ಮತ್ತು ದೇಶಾದ್ಯಂತ ಕಾಂಗ್ರೆಸ್ ಸಂಸದರ, ಶಾಸಕರ ಸಂಖ್ಯೆ ಅಧಿಕವೇ ಇದ್ದು ಯಾವುದೇ ಪ್ರಾದೇಶಿಕ ಪಕ್ಷ ಅದರ ಸನಿಹಕ್ಕೆ ಇಲ್ಲವಾದ್ದರಿಂದ ನಾವು ವಾಸ್ತವತೆಯನ್ನು ಮರೆತು ವ್ಯವಹರಿಸುವಂತಿಲ್ಲ. ಬಿಜೆಪಿಯ ಅಧ್ಯಕ್ಷ ಜೆ. ಪಿ. ನಡ್ಡಾ ಮುಕ್ತವಾಗಿ ಹಾಗೂ ಬಿಜೆಪಿಯ ಹಲವು ನಾಯಕರು ಪ್ರಾದೇಶಿಕ ಪಕ್ಷಗಳನ್ನು ಕೊನೆಗಾಣಿಸಬೇಕು ಎಂದಿದ್ದಾರೆ. 350 ಸ್ಥಾನ ಗೆಲ್ಲುವ ಗುರಿಯನ್ನೂ ಬಿಜೆಪಿ ಹೇಳುತ್ತಿದೆ. ಕಾಂಗ್ರೆಸ್ ಇಲ್ಲದೆ ಆ ಗುರಿಯನ್ನು ಪ್ರತಿ ಪಕ್ಷಗಳು ಮುಟ್ಟುವುದು ಸಾಧ್ಯವಿಲ್ಲ” ಎಂದು ತೇಜಸ್ವಿ  ವಿವರಿಸಿದರು.

“ಬಿಹಾರದಲ್ಲಿ ನಡೆದುದು ಮೊದಲ ಬಾರಿಗೆ ಬಿಜೆಪಿಗೆ ನಾವು ಅಸುರಕ್ಷಿತರು ಎಂಬ ಭಾವನೆಯನ್ನು ಹುಟ್ಟಿಸಿದೆ. ಅವರ ನೈತಿಕ ಬಲವೇ ಕುಸಿದಿರುವುದರಿಂದ ಬಹುಮತದ ಹತ್ತಿರ ಬಂದರೂ ಸಾಕು ಎಂದೆಲ್ಲ ಮಾತಿನಲ್ಲಿ ಕುಸಿದಿದ್ದಾರೆ. ಅವರ 350 ಸ್ಥಾನಗಳ ಗುರಿಯು ಅಲುಗಾಡಿ ಉರುಳುತ್ತಿದೆ. ಈಗಲೂ ಬಿಹಾರದಲ್ಲಿ ಜೆಡಿಯುವನ್ನು, ಇತರ ರಾಜ್ಯಗಳಲ್ಲಿ ಕೆಲವು ಪಕ್ಷಗಳನ್ನು ಒಡೆಯುವ ಹುನ್ನಾರವನ್ನು ಬಿಜೆಪಿ ಬಿಟ್ಟಿಲ್ಲ” ಎಂದೂ ತೇಜಸ್ವಿ ಹೇಳಿದರು.



Join Whatsapp