ಲಖನೌ: ನಮಾಜ್ ಮಾಡಿದಾಗ ಸಿಗುವ ನೆಮ್ಮದಿ, ಶತಕ ಗಳಿಸಿದಾಗಲೂ ಸಿಗಲ್ಲ ಎಂದು ಭಾರತದ ಯುವ ಆಟಗಾರ ಸಮೀರ್ ರಿಝ್ವಿ ಹೇಳಿದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ಪರ ಆಡಿದ್ದ ಸಮೀರ್ ರಿಝ್ವಿ ಹರಾಜಿನ ವೇಳೆ 8.4 ಕೋಟಿ ರೂಪಾಯಿಗೆ ಬಿಕರಿಯಾಗುವ ಮೂಲಕ ಸುದ್ದಿಯಾಗಿದ್ದರು.
ಉತ್ತರಪ್ರದೇಶದ ಮೀರತ್ ಮೂಲದ 20 ವರ್ಷದ ಯುವ ಬ್ಯಾಟ್ಸ್ ಮನ್ ಸಮೀರ್ ಸದ್ಯ ಯುಪಿ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಪ್ರಸ್ತುತ ಯುಪಿ ಲೀಗ್‌ನಲ್ಲಿ ಸ್ಫೋಟಕ ಆಟದೊಂದಿಗೆ ಎಲ್ಲರ ಗಮನ ಸೆಳೆದಿರುವ ಸಮೀರ್ ಇದೀಗ ತಮ್ಮ ಹೇಳಿಕೆಯೊಂದರ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಅವರು,
ನಾನೊಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದು, ಪ್ರತಿದಿನ ತಪ್ಪದೇ ನಮಾಜ್ ಮಾಡುತ್ತೇನೆ. ನಮಾಜ್ ಪಠಣೆ ಮಾಡುವುದರಿಂದ ಸಿಗುವ ಶಾಂತಿ-ನೆಮ್ಮದಿ, ಶತಕ ಸಿಡಿಸಿದಾಗಲೂ ಸಿಗುವುದಿಲ್ಲ ಎಂದಿದ್ದಾರೆ.
ಎಂತಹ ಒತ್ತಡದ ಪರಿಸ್ಥಿತಿಯಿದ್ದರೂ ಶಾಂತವಾಗಿರಬೇಕು ಎನ್ನುವುದನ್ನು ನನಗೆ ಧೋನಿ ಅವರು ಕಲಿಸಿಕೊಟ್ಟಿದ್ದಾರೆ. ನನಗೆ ಕ್ರಿಕೆಟ್ ಲೆಜೆಂಡ್ ಗಳಾದ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಎಂದರೆ ಅಚ್ಚುಮೆಚ್ಚು. ಅವರೇ ನನಗೆ ಕ್ರಿಕೆಟ್ ಆಡಲು ಸ್ಫೂರ್ತಿ ಎಂದು ಹೇಳಿದ್ದಾರೆ.
ನಾನು ಐಪಿಎಲ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್ಗೆ ಆಯ್ಕೆಯಾದ ಬಳಿಕ ತಂಡವು ನನ್ನನ್ನು ಸ್ವಾಗತಿಸಿದ ರೀತಿ ಅದ್ಭುತವಾಗಿತ್ತು. ಮುಂದೆಯೂ ಅವಕಾಶ ಸಿಕ್ಕಿದರೆ ತಾವು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತೇನೆ ಎಂದು ಹೇಳಿದ್ದಾರೆ.