ಹಿಂದುತ್ವ ಸಂಘಟನೆಗಳಿಂದ ತಮಗೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯರನ್ನು ಭೇಟಿಯಾದ ಕ್ರೈಸ್ತ ಮುಖಂಡರು

Prasthutha|

ಹುಬ್ಬಳ್ಳಿ: ಮತಾಂತರ ನಡೆಯುತ್ತಿದೆ ಎಂಬ ನೆಪದಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳಿಗೆ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸುವ ಘಟನೆಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಕ್ರಿಶ್ಚಿಯನ್ ಸಮುದಾಯದ ಮುಖಂಡರು ಹುಬ್ಬಳ್ಳಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಅಹವಾಲು ತೋಡಿಕೊಂಡರು.

- Advertisement -


ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಮಹಾನಗರ ಪಾಲಿಕೆ ಸದಸ್ಯ ದೊರೆರಾಜ ಮಣಿಕುಂಟ್ಲ ನೇತೃತ್ವದ ನಿಯೋಗ, ಸಿದ್ದರಾಮಯ್ಯರನ್ನು ಭೇಟಿಯಾಗಿ ಹಿಂದೂಪರ ಸಂಘಟನೆಗಳಿಂದ ನಮಗೆ ಅನ್ಯಾಯವಾಗಿದೆ. ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದೆ.


ಹುಬ್ಬಳ್ಳಿಯ ಬೈರಿದೇವರಕೊಪ್ಪದ ಸರ್ವಧರ್ಮ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮಂದಿರಕ್ಕೆ ನುಗ್ಗಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಪ್ರಾರ್ಥನೆ ನಿರತರಾಗಿದ್ದ ನವನಗರ ಸಮೀಪದ ಸುತಗಟ್ಟಿಯ ನಿವಾಸಿ ಸೋಮು ಅವರಾಧಿ ಎಂಬವರನ್ನು ಎಳೆದೊಯ್ದು ಹಲ್ಲೆ ನಡೆಸಿ ಠಾಣೆಗೆ ಕರೆದೊಯ್ದಿದ್ದಾರೆ.ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಕೂಡ ಪಾಲ್ಗೊಂಡಿದ್ದರು.

- Advertisement -


ಈ ಘಟನೆಯನ್ನು ಖಂಡಿಸಿ ಅ. 19ರಂದು ಪ್ರತಿಭಟನೆ ನಡೆಸಲು ಕ್ರಿಶ್ಚಿಯನ್ ಸಮುದಾಯದ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಚರ್ಚಿಸಲು ಕೇಶ್ವಾಪುರದ ಸೇಂಟ್ ಪೀಟರ್ಸ್ ಚರ್ಚ್ನಲ್ಲಿ ಸಭೆ ಜರುಗಿತು. ಪ್ರತಿಭಟನೆಗೆ ಪ್ರಸಾದ ಅಬ್ಬಯ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ.


ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಸೋಮು ಅವರಾಧಿ ಎಂಬ ವ್ಯಕ್ತಿ ಪ್ರಚೋದನೆ ನೀಡಿದ್ದು ಆತನನ್ನು ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಲಿಂಗಾಯತ ಸಮುದಾಯದ ಪ್ರಮುಖರು ಭಾನುವಾರ ತಡರಾತ್ರಿಯ ತನಕ ರಸ್ತೆ ಬಂದ್ ಹಾಗೂ ಪ್ರತಿಭಟನೆ ಮಾಡಿದ್ದರು. ಇದರಿಂದ ಹಲವು ಹೊತ್ತು ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೊಳಗಾಗಿದ್ದರು.

Join Whatsapp