ಪ್ರತಿಪಕ್ಷಗಳ ವಿರೋಧದ ನಡುವೆಯೂ ‘ಕ್ರಿಮಿನಲ್ ಪ್ರೊಸೀಜರ್’ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ

Prasthutha|

- Advertisement -

ನವದೆಹಲಿ: ನ್ಯಾಯಾಧೀಶರ ಅನುಮತಿ ಇಲ್ಲದೆಯೇ ಅಪರಾಧಿಗಳ ಗುರುತಿಸುವಿಕೆ ಮತ್ತು ತನಿಖೆಯ ಉದ್ದೇಶಗಳಿಗಾಗಿ ಅಪರಾಧಿಗಳಿಂದ ಹೆಚ್ಚುವರಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರಿಗೆ ಹೆಚ್ಚುವರಿ ಅಧಿಕಾರ ನೀಡುವ ‘ಕ್ರಿಮಿನಲ್ ಪ್ರೊಸೀಜರ್ (ಗುರುತಿನ) ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ.
ಕೇಂದ್ರ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್‌ ಕುಮಾರ್‌ ಮಿಶ್ರಾ, ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ ಮಸೂದೆಗೆ ಪ್ರತಿಪ್ರಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿತು. ಅಂತಿಮವಾಗಿ 120 ಪರ ಮತ್ತು 58 ವಿರೋಧ ಮತಗಳೊಂದಿಗೆ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆಯಿತು.
ಈ ಮಸೂದೆಯು ‘ಬೆರಳಚ್ಚು, ಹಸ್ತ ಮುದ್ರೆ, ಹೆಜ್ಜೆಗುರುತು ಮುದ್ರೆ, ಛಾಯಾಚಿತ್ರಗಳು, ಕಣ್ಣು ಮತ್ತು ರೆಟಿನಾ ಸ್ಕ್ಯಾನ್, ಭೌತಿಕ, ಜೈವಿಕ ಮಾದರಿಗಳು, ಸಹಿಗಳು, ಕೈಬರಹ ಹಾಗೂ ಡಿಎನ್‌ಎ ಪರೀಕ್ಷೆಗಾಗಿ ರಕ್ತ ಸಂಗ್ರಹ ಸೇರಿದಂತೆ ಅಪರಾಧಿಗಳ ಇತರ ಪರೀಕ್ಷಗಳನ್ನು ನಡೆಸಲು ಪೊಲೀಸರಿಗೆ ಅನುಮತಿ ನೀಡಲಿದೆ. ಇದಕ್ಕಾಗಿ ನ್ಯಾಯಾಧೀಶರ ಅನುಮತಿ ಪಡೆಯುವ ಆವಶ್ಯಕತೆಯಿಲ್ಲ.

ಮಸೂದೆ ಮಂಡಿಸಿ ಮಾತನಾಡಿದ ಸಚಿವ ಅಜಯ್‌ ಮಿಶ್ರಾ, ಪ್ರಸ್ತುತ ಜಾರಿಯಲ್ಲಿರುವ ‘ದಿ ಐಡೆಂಟಿಫಿಕೇಶನ್ ಆಫ್ ಪ್ರಿಸನರ್ಸ್ ಆಕ್ಟ್, (ಖೈದಿಗಳ ಗುರುತಿಸುವಿಕೆ ಕಾಯ್ದೆ)ಯು 1920ರಲ್ಲಿ ರೂಪಿಸಲಾಗಿದ್ದು, 102 ವರ್ಷಗಳಷ್ಟು ಹಳೇಯದಾಗಿದೆ. ಇದರನ್ವಯ ಕೇವಲ ಬೆರಳಚ್ಚು ಮತ್ತು ಹೆಜ್ಜೆಗುರುತುಗಳನ್ನು ಮಾತ್ರ ಸಂಗ್ರಹಿಸಲು ಅವಕಾಶವಿದೆ. ಆದರೆ ನೂತನ ಮಸೂದೆಯು ಅಪರಾಧ ಪ್ರಕರಣಗಳಲ್ಲಿ ನಮ್ಮ ತನಿಖಾ ಸಂಸ್ಥೆಗಳಿಗೆ ಹೆಚ್ಚು ಸಹಕಾರಿಯಾಗಲಿದ್ದು, ಆ ಮೂಲಕ ನ್ಯಾಯಾಲಯಗಳಲ್ಲಿ ಕ್ಷಿಪ್ರ ತೀರ್ಪು ಪ್ರಕಟವಾಗಲು ಅವಕಾಶ ಒದಗಿಸಲಿದೆ ಎಂದಿದ್ದಾರೆ.
ಅಜಯ್‌ ಕುಮಾರ್‌ ಮಿಶ್ರಾ ಮಂಡಿಸಿದ ಬಿಲ್ ಅನ್ನು‌ ಅಸಾಂವಿಧಾನಿಕ ಎಂದು ಕರೆದ ವಿರೋಧ ಪಕ್ಷದ ನಾಯಕ, ಅಧೀರ್‌ ರಂಜನ್‌ ಚೌಧರಿ, ಈ ಮಸೂದೆಯು ಮಾನವ ಹಕ್ಕುಗಳನ್ನು ಉಲ್ಲಂಘಿಸಲಿದೆ, ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು.



Join Whatsapp