ಉಡುಪಿ: ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಕೋಮುವಾದಿ ಧೋರಣೆಯಿಂದ ಪಕ್ಷಪಾತೀಯ ನಿಲುವು ತಾಳಿ PFI ಸಂಘಟನೆ ಹಾಗೂ ರಾಜಕೀಯ ಪಕ್ಷವಾಗಿರುವ SDPIಯ ನಾಯಕರುಗಳ ಬಂಧನ ಮಾಡಿ ಈ ದೇಶದ ಸಂವಿಧಾನಕ್ಕೆ ಅಪಚಾರವೆಸಗುವ ಕೆಲಸವನ್ನು ಇಂದು ಕೇಂದ್ರ ಸರ್ಕಾರ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಎಪಿಸಿಆರ್ ನ ಉಡುಪಿ ಜಿಲ್ಲಾ ಘಟಕದ ಸಂಚಾಲಕ ಹುಸೇನ್ ಕೋಡಿಬೆಂಗ್ರೆ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಸಿರುವ ಅವರು, ಯಾವುದೇ ತನಿಖೆ ನಡೆಸಿ ಸೂಕ್ತ ಸಾಕ್ಷ್ಯಧಾರ ಇಲ್ಲದೆ ಸುಮ್ಮನೆ ಬಂಧನ ಮಾಡಿರುವುದು ಈ ದೇಶದ ಕಾನೂನು ವ್ಯವಸ್ಥೆಗೆ ಮಾಡಿರುವ ಅಪಚಾರವಾಗಿದೆ. ಇದೇ ರೀತಿ ಮುಂದುವರೆದರೆ ಈ ದೇಶದ ಸಾಂವಿಧಾನಿಕ ಸಂಸ್ಥೆಗಳಿಗೆ ಯಾವುದೇ ರೀತಿಯ ಮೌಲ್ಯವಿಲ್ಲದೆ, ರಾಜಕೀಯದ ಗೂಂಡಾಯಿಸಂನ ಬಲಿಪಶು ಆಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲದಂತಾಗಲಿದೆ ಎಮದು ಹೇಳಿದರು.
ಯಾವುದೇ ಸಂಘಟನೆ – ಪಕ್ಷಗಳಾದರೂ ಅದಕ್ಕೆ ತನ್ನದೇ ಆದ ನಿಲುವು ಇದ್ದು ಅದರ ಬಗ್ಗೆ ಭಿನ್ನಾಭಿಪ್ರಾಯಗಳು ಸರ್ವೇ ಸಾಮಾನ್ಯ. ಹಾಗೆಂದು ಸಾಂವಿಧಾನಿಕ ಸಂಘಟನಾ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಭಾರತದ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ. ಆದ್ದರಿಂದ ಇಂತಹ ಅರಾಜಕತೆಯನ್ನು ತಕ್ಷಣ ನಿಲ್ಲಿಸಬೇಕೆಂದು ಎಪಿಸಿಆರ್ ನ ಉಡುಪಿ ಜಿಲ್ಲಾ ಘಟಕ ಆಗ್ರಹಿಸುತ್ತದೆ ಎಂದು ಹುಸೇನ್ ಕೋಡಿಬೆಂಗ್ರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ .