ತಾಳಿ ಕಟ್ಟುವ ವೇಳೆ ಕೈ ಕೊಟ್ಟ ವಧು: ಪೇಚಿಗೆ ಸಿಲುಕಿದ ವರ

Prasthutha|

► ನಾನು ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದೇನೆ ಎಂದ ಮದುಮಗಳು

- Advertisement -

ಮೈಸೂರು: ಇನ್ನೇನು ಎರಡು ನಿಮಿಷಗಳಲ್ಲಿ ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮಧು ಕಲ್ಯಾಣ ಮಂಟಪದಲ್ಲೇ “ನನಗೆ ಈ ಮದುವೆ ಇಷ್ಟವಿಲ್ಲ, ನಾನು ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದೇನೆ” ಎಂದು ಹೇಳಿ ಮದುವೆಯನ್ನು ರದ್ದುಪಡಿಸಿದ ಘಟನೆ ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಕಲ್ಯಾಣಮಂಟಪದಲ್ಲಿ ಎಲ್ಲಾ ಸಿದ್ಧತೆಗಳು ನಡೆದು ಹಸೆಮಣೆ ಏರುವ ಎರಡು ನಿಮಿಷಗಳಲ್ಲೇ ನಡೆದ ಈ ಘಟನೆಯಿಂದ ಎರಡೂ ಕಡೆಯವರು ಅವಾಕ್ಕಾದರು. ಮಧುವಿಗೆ ಎಷ್ಟೇ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರೂ ಆಕೆ ಯಾರ ಸಲಹೆ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿದರೂ ಪ್ರಯೋಜನವಾಗದೆ ಮದುವೆಯನ್ನು ಮೊಟಕುಗೊಳಿಸಲಾಯಿತು.

- Advertisement -

  ಇತ್ತೀಚೆಗೆ ಮೈಸೂರಿನ ಸಿಂಚನಾ ಅವರಿಗೆ ಎಚ್.ಡಿ.ಕೋಟೆಯ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಲಾಗಿತ್ತು. ಎರಡೂ ಕುಟುಂಬಗಳ ಹಿರಿಯರು ಚರ್ಚಿಸಿದ ಬಳಿಕವೇ ಈ ನಿಶ್ಚಿತಾರ್ಥ ಮಾಡಲಾಗಿತ್ತು. ಅದರಂತೆ ಮೇ 22ರಂದು ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮದುವೆ ನಿಗದಿಪಡಿಸಲಾಗಿತ್ತು. ಎರಡೂ ಕುಟುಂಬದವರು, ಸಂಬಂಧಿಕರು, ಊರಿನವರು ಮದುವೆಗೆ ಆಗಮಿಸಿದ್ದರು.

ಎಲ್ಲಾ ಧಾರ್ಮಿಕ ವಿಧಿ-ವಿಧಾನ ಮುಗಿದು ತಾಳಿಕಟ್ಟುವ ಶುಭವೇಳೆಯಲ್ಲಿ ಏಕಾಏಕಿ ವಧು ಸಿಂಚನಾ, ಕುಸಿದು ಬಿದ್ದಂತೆ ನಟಿಸಿದ್ದಾಳೆ. ನೀರು ಚಿಮುಕಿಸಿದ ಬಳಿಕ ಎದ್ದು ನಿಂತ ಆಕೆ, ನನಗೆ ಈ ಮದುವೆ ಇಷ್ಟವಿಲ್ಲ. ಮನೆಯ ಪಕ್ಕದ ಯುವಕನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದಾಗ ಸೇರಿದವರು ನಿಬ್ಬೆರಗಾದರು. 

ವಧುವಿನ ಮಾತು ಕೇಳಿ ಅಲ್ಲಿದ್ದವರು ಗೊಂದಲಕ್ಕೆ ಒಳಗಾದರು. ಕಲ್ಯಾಣಮಂಟಪದಲ್ಲಿ ಗುಸು ಗುಸು ಮಾತು ಆರಂಭವಾಯಿತು. ಗದ್ದಲವಾಗುತ್ತಿದ್ದಂತೆ ಯುವತಿಯ ಪೋಷಕರು, ಆಕೆಯನ್ನು ಕರೆದುಕೊಂಡು ಕೊಠಡಿಯೊಂದಕ್ಕೆ ತೆರಳಿದರು. ಅಲ್ಲಿ ಆಕೆಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಯಿತು. ಎರಡೂ ಕಡೆಯ ಹಿರಿಯರು ಯುವತಿಗೆ ಬುದ್ದಿ ಹೇಳಲು ಪ್ರಯತ್ನಿಸಿದರು. ಕೊನೆಗೆ ಯಾವ ಪ್ರಯೋಜನವೂ ಆಗದಿದ್ದಾಗ ವರನ ಕಡೆಯವರು ತಾವು ಖರ್ಚು ಮಾಡಿದ 5 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟರು.

ಕೊನೆಗೆ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತು. ಪೊಲೀಸರು ಕೂಡ ಯುವತಿಯ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ ಯುವತಿಯ ನಿರ್ಧಾರ ಅಚಲವಾಗಿತ್ತು. ಪೊಲೀಸರು ಕೈಚೆಲ್ಲಿದ ಬಳಿಕ ಮದುವೆ ರದ್ದುಪಡಿಸಿರುವುದಾಗಿ ಘೋಷಿಸಲಾಯಿತು. ವರನ ಕಡೆಯವರಿಗೆ ಖರ್ಚಾದ ಹಣ ನೀಡುವುದಾಗಿ ಯುವತಿಯ ಕಡೆಯವರು ಭರವಸೆ ನೀಡಿದರು. ಪೇಚಿಗೆ ಸಿಲುಕಿದ ವರನ ಪರಿಸ್ಥಿತಿ ಹೇಳತೀರದ್ದಾಗಿತ್ತು. ತನ್ನ ಹಣೆಬರಹವನ್ನು ಶಪಿಸುತ್ತಾ ವರ ಮನೆಯ ಕಡೆಗೆ ಹೆಜ್ಜೆಹಾಕಿದ.



Join Whatsapp