ದೇಶವನ್ನು ಎಪ್ಪತ್ತು ವರ್ಷಗಳ ಹಿಂದೆ ತಳ್ಳಿದ ಬಿಜೆಪಿ

Prasthutha|

ಮೋದಿ ಆಡಳಿತದ ಎರಡನೇ ಅವಧಿ ಪೂರ್ಣಗೊಂಡಿದೆ. 70 ವರ್ಷಗಳಲ್ಲಿ ದೇಶ ಸಾಧಿಸಿದ ಪ್ರಗತಿ, ಹಿರಿಮೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವದ ಬಗ್ಗೆ ಲಭಿಸಿದ ಅಂಗೀಕಾರ ಇವೆಲ್ಲವೂ ನಾಶಗೊಳ್ಳಲು ಈ ಕಳೆದ ಏಳು ವರ್ಷಗಳಿಂದ ಅಧಿಕಾರದಲ್ಲಿರುವ ಸಂಘಪರಿವಾರ ಪ್ರೇರಿತ ಸರ್ಕಾರದಿಂದ ಸಾಧ್ಯವಾಗಿದೆ. ದೇಶದ ಜನರು ಲಸಿಕೆ ಸಿಗದೆ ಸಾವನ್ನಪ್ಪುವ ವೇಳೆಯೂ ವಿದೇಶ ರಾಷ್ಟ್ರಗಳಿಗೆ ಲಸಿಕೆ ಮಾರಾಟ ಮಾಡಿ ಕೇಂದ್ರವು ತನ್ನ ಅಹಂಕಾರವನ್ನು ಪ್ರದರ್ಶಿಸಿತು. ಈ ಮೂಲಕ ಮೋದಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ತಯಾರಿಯಲ್ಲಿದ್ದರು. ಇದರ ಪರಿಣಾಮ ಕೋವಿಡ್-2ನೆ ಅಲೆಯ ಹೊಡೆತಕ್ಕೆ ದೇಶದ ಆರೋಗ್ಯ, ಆರ್ಥಿಕತೆ, ಸಾಮಾಜಿಕ ಕ್ಷೇತ್ರ ಒಟ್ಟಾರೆ ನಾಶಗೊಂಡಿತು. ತಲಾ ವರಮಾನದಲ್ಲಿ ನೆರೆಯ ಬಾಂಗ್ಲಾದೇಶಕ್ಕಿಂತಲೂ ನಮ್ಮ ದೇಶ ಹಿಂದಕ್ಕೆ ತಳ್ಳಲ್ಪಟ್ಟಿತು.ಆಡಳಿದ ವೈಫಲ್ಯದಿಂದಾಗಿ ಕೋವಿಡ್ನಿಂದ ಸತ್ತವರ ಮತದೇಹಗಳನ್ನೂ ಅಂತ್ಯಸಂಸ್ಕಾರ ಮಾಡಲಾಗದೆ ನದಿಗಳಲ್ಲಿ ತೇಲಿ ಬಿಟ್ಟ ಘಟನೆಗಳೂ ನಡೆದವು. ಆಮ್ಲಜನಕ ಕೊರತೆಯಿಂದ ದೇಶಾದ್ಯಂತ ನೂರಾರು ಮಂದಿ ಅಸುನೀಗಿದರು. ಅದನ್ನು ಮರೆಮಾಚಲು ಪ್ರಭುತ್ವ ಇನ್ನಿಲ್ಲದ ಪ್ರಯತ್ನ ನಡೆಸಿತು. ಇದರ ವಿರುದ್ಧ ಧ್ವನಿ ಎತ್ತಿದವರಿಗೆ ಕರಾಳ ಕಾನೂನುಗಳ ಮೂಲಕ ಬೆದರಿಸಲಾಯಿತು. ಮೋದಿ ಸರ್ಕಾರವು, ದೇಶದ ಪೌರರನ್ನು ಸರ್ವಾಧಿಕಾರಿಗಳ ಅಧೀನದಲ್ಲಿರುವ ಪ್ರಜೆಗಳಂತೆ ಮಾರ್ಪಡಿಸಿ ಸ್ವೇಚ್ಛಾಧಿಕಾರದಿಂದ ಬೇಕಾಬಿಟ್ಟಿ ಕಾನೂನುಗಳನ್ನು ಹೇರುವ ಪ್ರಯತ್ನ ನಡೆಸುತ್ತಿದೆ. ದೇಶವು ಹಸಿವು, ಕೋವಿಡ್, ಲಾಕ್ ಡೌನ್ನಿಂದ ತತ್ತರಿಸುವಾಗ ಸೆಂಟ್ರಲ್ ವಿಸ್ಟಾದ ನಿರ್ಮಾಣ ಮತ್ತು ರಾಮಮಂದಿರ ನಿರ್ಮಾಣ ಆದ್ಯತೆಯೆಂದು ಪರಿಗಣಿಸಿದೆ. ಧರ್ಮದ ಹೆಸರಿನಲ್ಲಿ ಪೌರತ್ವ ನೀಡುವ ಜಾತ್ಯತೀತ ರಾಷ್ಟ್ರವೆಂಬ ಕುಖ್ಯಾತಿಯನ್ನೂ ನಮ್ಮ ದೇಶ ಗಳಿಸಿಕೊಂಡಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಂಘದ ಸರ್ಕಾರ, ಕಾರ್ಪೊರೇಟ್ ಕುಳಗಳಿಗೆ ಲಾಭವನ್ನು ತಂದು ಕೊಡುವ ಕಾನೂನು, ಕಾಯ್ದೆಗಳನ್ನು ರೂಪಿಸಿ ಸಾರ್ವಜನಿಕ ಕ್ಷೇತ್ರಗಳನ್ನೆಲ್ಲಾ ಸರ್ವನಾಶ ಮಾಡುತ್ತಿದೆ.

- Advertisement -

ವಿವೇಚನೆ ಇಲ್ಲದೆ ಮಾಡಿದ ನೋಟ್ ಬ್ಯಾನ್, ಜಿಎಸ್ಟಿ, ರೈತ ವಿರೋಧಿ ಕಾನೂನು, ದೇಶದ ಜನರ ಉಸಿರುಗಟ್ಟಿಸುತ್ತಿದೆ. ಕಳೆದ ಏಳು ತಿಂಗಳಿನಿಂದ ರೈತರು ಮುಷ್ಕರ ನಿರತರಾಗಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುವ ಬದಲು, ಅವರ ಅಹವಾಲು ಆಲಿಸುವ ಬದಲು ಅವರ ಪ್ರತಿಭಟನೆಯನ್ನು ಹತ್ತಿಕ್ಕಲು ವಿಫಲ ಪ್ರಯತ್ನ ನಡೆಸಲಾಯಿತು. ಇವೆಲ್ಲವೂ ಮೆಟ್ಟಿನಿಂತು ಪ್ರತಿಭಟನೆಯನ್ನು ಮುಂದುವರಿಸುತ್ತಿರುವ ರೈತರ ಹೋರಾಟಕ್ಕೆ ಜನತೆಯ ಬೆಂಬಲ ಹೆಚ್ಚುತ್ತಲೇ ಇದೆ. ಅಭಿವ್ಯಕ್ತಿ ಸ್ವಾತಂತ್ರಕ್ಕೆ ತೃಣ ಸಮಾನ ಗೌರವ ನೀಡದ ಸರ್ಕಾರವೊಂದು ಇಂದು ಕೇಂದ್ರದಲ್ಲಿದೆ. ಪೌರರು ತಮ್ಮ ಅಭಿಪ್ರಾಯ ಹೇಳುವ ಜಾಗಗಳೆಲ್ಲೆಲ್ಲಾ ನವೀನ ಕಾನೂನುಗಳ ಕೋಟೆಗಳನ್ನು ಅವರು ನಿರ್ಮಿಸಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತವು, ದೇಶದ ಆರ್ಥಿಕತೆಯನ್ನು ಮಾತ್ರವಲ್ಲ ಒಟ್ಟಾರೆ ದೇಶವನ್ನು ನಾಶ ಮಾಡುತ್ತಿದೆ. ಜನತೆ ನೆಮ್ಮದಿಯಿಂದ ಬದುಕಲು ಬಿಡಲಾರೆವು ಎನ್ನುವುದಕ್ಕಿರುವ ಕೊನೆಯ ಉದಾಹರಣೆಯಾಗಿದೆ ಲಕ್ಷದ್ವೀಪದ ‘ಅಭಿವದ್ಧಿ’ಯ ಯೋಜನೆಗಳು. ಕಾರ್ಪೊರೇಟ್ ಕುಳಗಳನ್ನು ದ್ವೀಪಕ್ಕೆ ಆಹ್ವಾನಿಸಿ ಆ ಪ್ರದೇಶದ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಆಡಳಿತಾಧಿಕಾರಿ ಮತ್ತು ಒಕ್ಕೂಟ ಸರ್ಕಾರ ಅಹರ್ನಿಶಿ ಪ್ರಯತ್ನಿಸುತ್ತಿದೆ. ಸ್ವಾತಂತ್ರ, ನ್ಯಾಯ, ಸಮಾನತೆ, ಸಮಾನ ಹಕ್ಕುಗಳು ಲಭಿಸುವ ದೇಶವನ್ನು ಪುನರ್ ನಿರ್ಮಿಸಲು, ಜಾತಿ, ಧರ್ಮ, ಭಾಷೆ, ವೇಷ ಭೇದವಿಲ್ಲದೆ ದೇಶದ ಪೌರರು ಒಗ್ಗಟ್ಟಿನಿಂದ ರಂಗಕ್ಕಿಳಿಯಬೇಕಾಗಿದೆ. ಪಶ್ಚಿಮ ಬಂಗಾಳದ ಜನತೆ ಒಗ್ಗಟ್ಟಿನಿಂದ ತೋರಿಸಿಕೊಟ್ಟ ಮಾದರಿ ದೇಶದೆಲ್ಲೆಡೆ ವ್ಯಾಪಿಸಲಿ ಎಂಬುದು ನಮ್ಮೆಲ್ಲರ ನಿರೀಕ್ಷೆ.

Join Whatsapp