ಆಂಟಿಗುವಾ: ಆಸೀಸ್ ಪಡೆ ಟಿ20 ವಿಶ್ವಕಪ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಟೀಮ್ ಇಂಡಿಯಾದ ಹೆಸರಲ್ಲಿದ್ದ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಈ ಸಾಧನೆ ಮಾಡಿದೆ ಎಂಬುದು ವಿಶೇಷ.
2022ರ ಟಿ20 ವಿಶ್ವಕಪ್ನಲ್ಲಿ ಶುರುವಾದ ಆಸೀಸ್ ಪಡೆಯ ಗೆಲುವಿನ ನಾಗಾಲೋಟ ಈ ಬಾರಿ ಕೂಡ ಮುಂದುವರೆದಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಸತತ ಜಯ ದಾಖಲಿಸಿದ ದಾಖಲೆಯನ್ನು ಆಸ್ಟ್ರೇಲಿಯಾ ತಂಡ ತನ್ನದಾಗಿಸಿಕೊಂಡಿದೆ.
ಭಾರತ ತಂಡವು 2012-2014 ರ ಟಿ20 ವಿಶ್ವಕಪ್ನಲ್ಲಿ ಸತತ 7 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಈ ಮೂಲಕ ಎರಡು ವಿಶ್ವಕಪ್ನಲ್ಲಿ ಸತತ ಏಳು ಗೆಲುವು ದಾಖಲಿಸಿ ಟೀಮ್ ಇಂಡಿಯಾ ವಿಶ್ವ ದಾಖಲೆ ನಿರ್ಮಿಸಿತ್ತು. ಇದೀಗ 8 ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾ ಹೆಸರಿನಲ್ಲಿದ್ದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ನ ಸೂಪರ್ 08 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶ ವಿರುದ್ಧ ಗೆದ್ದಿದ್ದು, ಈ ಮೂಲಕ ಟಿ-20 ವಿಶ್ವಕಪ್ನಲ್ಲಿ ಹೊಸ ದಾಖಲೆ ಒಂದನ್ನು ಬರೆದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತ್ತು. ಸುಲಭ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡವು 11.2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 100 ರನ್ ಕಲೆಹಾಕಿತ್ತು. ಈ ವೇಳೆ ಮಳೆ ಸುರಿದ ಪರಿಣಾಮ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಆಸ್ಟ್ರೇಲಿಯಾ ತಂಡವನ್ನು ವಿನ್ನರ್ಸ್ ಅಂಪೈರ್ಗಳು ಎಂದು ಘೋಷಿಸಲಾಯಿತು. ಈ ಗೆಲುವಿನೊಂದಿಗೆ ಆಸೀಸ್ ಪಡೆ ಟಿ20 ವಿಶ್ವಕಪ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.