ಬೆಂಗಳೂರು: ಕರ್ನಾಟಕ ಬಾಡಿ ಬಿಲ್ಡಿಂಗ್ ಅಂಡ್ ಫಿಟ್ ನೆಸ್ ಅಸೋಸಿಯೇಷನ್ ನಿಂದ 70 ನೇ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ ಈ ಬಾರಿ ಬೆಂಗಳೂರಿನ ಟೌನ್ ಹಾಲ್ nಲ್ಲಿ ಸೆಪ್ಟೆಂಬರ್ 3 ಮತ್ತು 4 ರಂದು ಆಯೋಜಿಸಲಾಗಿದೆ. 18 ರಾಜ್ಯಗಳಿಂದ 180 ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ 8 ಮಂದಿ ಮಹಿಳಾ ಸ್ಪರ್ಧಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಡಿಯನ್ ಫಿಟ್ನೆಸ್ ಅಂಡ್ ಬಾಡಿ ಬಿಲ್ಡರ್ಸ್ ಫೆಡರೇಷನ್ ನ ಸಂಘಟನಾ ಕಾರ್ಯದರ್ಶಿ ಪಿ.ಎಸ್.ಬಿ ನಾಯ್ಡು, ಮಹಿಳಾ ಸ್ಪರ್ಧಿಗಳು ತಮಿಳುನಾಡು, ಕರ್ನಾಟಕ, ಜಾರ್ಖಂಡ್ ರಾಜ್ಯಗಳಿಂದ ಪಾಲ್ಗೊಳ್ಳುತ್ತಿದ್ದಾರೆ. ಮುಂಬರುವ ಕ್ರೀಡಾಕೂಟದಲ್ಲಿ ಇನ್ನಷ್ಟು ಮಹಿಳಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದರು.
ಸೆಪ್ಟೆಂಬರ್ 3 ರಂದು ಕ್ರೀಡಾಪಟುಗಳ ದೈಹಿಕ ಪರೀಕ್ಷೆ ನಡೆಯಲಿದ್ದು, 4 ರಂದು ಬೆಳಿಗ್ಗೆಯಿಂದ ಸಂಜೆವರೆಗೆ ದೇಹಸಿರಿ ಸ್ಪರ್ಧೆ ನಡೆಯಲಿದೆ. ಈ ಬಾರಿ ಭಾರತ್ ಶ್ರೀ (ಪುರುಷರು), ‘ಭಾರತ್ ಕಿಶೋರ್ (ಜ್ಯೂನಿಯರ್), ಭಾರತ್ (ಯುವಕರು), ಭಾರತ್ (ಹೊಸಬರಿಗಾಗಿ) ಹಾಗೂ ಭಾರತ್ ಕೇಸರಿ (ಹಿರಿಯರಿಗಾಗಿ) ಅಲ್ಲದೇ ಮಿಸ್ಟರ್ ಫಿಸಿಕ್’ ಎರಡು ಭಾಗಗಳಲ್ಲಿಯೂ ಮಿಸ್ ಫಿಗರ್ ಮಹಿಳೆಯರಿಗಾಗಿ ಸರ್ಧೆಗಳನ್ನು ನಡೆಸಲಾಗುತ್ತದೆ. ಈ ಪ್ರಶಸ್ತಿಗಳನ್ನು ಇಂಡಿಯನ್ ಟ್ರೇಡ್ಮಾರ್ಕ್ ನಲ್ಲಿ ನೊಂದಾಯಿಸಲಾಗಿದೆ. ನಮ್ಮನ್ನು ಹೊರತುಪಡಿಸಿ ಬೇರೆಯವರು ಈ ಪ್ರಶಸ್ತಿಗಳನ್ನು ಉಪಯೋಗಿಸುವಂತಿಲ್ಲ ಎಂದರು.
ಭಾರತ ದೇಶವು ಸುಮಾರು 40 ವರ್ಷಗಳಿಂದ ವಿಶ್ವ ಚಾಂಪಿಯನ್ ಷಿಪ್ ನಲ್ಲಿಯೂ, ಏಷ್ಯಾ ಪೆಸಿಫಿಕ್ ನಲ್ಲಿಯೂ ಹಾಗೂ ನ್ಯಾಚುರಲ್ ಇಂಟರ್ ನ್ಯಾಷನಲ್ಲಿಯೂ ಭಾಗವಹಿಸುತ್ತಾ ಬಂದಿದೆ. ನಮ್ಮ ರಾಜ್ಯದ ಕ್ರೀಡಾಪಟುಗಳಾದ ರೇಮಂಡ್ ಡಿಸೋಜಾ, ಭಾಸ್ಕರ್ ತೊಕ್ಕೊಟ್ಟು, ಹರಿಶ್ಚಂದ್ರ ಎಜಮಾಡಿ, ಎ.ವಿ. ರವಿ ಹಾಗೂ ಈಗ ಪ್ರಸ್ತುತ ಪವನ್ ಶೆಟ್ಟಿ, ಮನೋಜ್ ಕುಮಾರ್, ದೀಪಕ್ ಕಾವೇರಪ್ಪ ಹಾಗೂ ಕೃಷ್ಣಮೂರ್ತಿ ಮುಂತಾದವರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂದು ಪಿ.ಎಸ್.ಬಿ ನಾಯ್ಡು ತಿಳಿಸಿದರು.
ಈ ಕ್ರೀಡಾಕೂಟವನ್ನು ರಾಜ್ಯ ಸಂಸ್ಥೆಯ ಗೌರವಾಧ್ಯಕ್ಷ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಹಿಂದಿನ ಹೆಸರಾಂತ ಕ್ರೀಡಾಪಟುಗಳು, ರಾಷ್ಟ್ರೀಯ ತೀರ್ಪುಗಾರರು ಹಾಗೂ ಹಾಲಿ, ಮಾಜಿ ಪದಾಧಿಕಾರಿಗಳನ್ನು ಸನ್ಮಾನಿಸಲಾಗುವುದು ಎಂದರು.
ಈ ಕ್ರೀಡಾಕೂಟಕ್ಕೆ ಅತಿಥಿಗಳಾಗಿ ಮೈಸೂರಿನ ಮಹಾರಾಜರಾಜ ಯದುವೀರ ಕೃಷ್ಣದತ್ತ ಒಡೆಯರ್, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಕ್ರೀಡಾ ಸಚಿವ ಡಾ.ಕೆ.ಸಿ ನಾರಾಯಣಗೌಡ, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ.ಕೆ. ಗೋವಿಂದರಾಜು ಹಾಗೂ ಶಾಸಕರಾದ ಉದಯ ಗರುಡಾಚಾರ್, ರವಿ ಸುಬ್ರಮಣ್ಯ ಭಾಗವಹಿಸಲಿದ್ದಾರೆ.